ಬಸವಣ್ಣನವರ ಅನುಭವ ಮಂಟಪವನ್ನೇ ಮರುಸೃಷ್ಟಿಸಿ: ಸಿಎಂ ಬೊಮ್ಮಾಯಿ ಸೂಚನೆ

author img

By

Published : Jan 25, 2022, 12:57 AM IST

cm-bommai-meeting-on-progress-of-anubhava-mantapa-project

ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವು ಸದಾ ಚಟುವಟಿಕೆಯಿಂದ ಕೂಡಿದ್ದು, ವಿಚಾರ ಮಂಥನ ನಡೆಯುತ್ತಿತ್ತು. ಪ್ರಸ್ತುತ ನಿರ್ಮಿಸುತ್ತಿರುವ ಅನುಭವ ಮಂಟಪದಲ್ಲಿಯೂ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತ ಸಭಾಂಗಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸೃಷ್ಟಿಸುವಂತೆ ಸಿಎಂ ಸೂಚನೆ ನೀಡಿದರು.

ಬೆಂಗಳೂರು: ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪದಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಬಸವಣ್ಣನ ಕಾಲದ ಅನುಭವ ಮಂಟಪವನ್ನೇ ಮರುಸೃಷ್ಟಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪದ ಪ್ರಗತಿ ಕುರಿತು ಸಿಎಂ ಸಭೆ ನಡೆಸಿದರು. ಅನುಭವ ಮಂಟಪದ ಪ್ರಾತ್ಯಕ್ಷಿಕೆಯನ್ನು ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಸಿಎಂ, ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವು ಸದಾ ಚಟುವಟಿಕೆಯಿಂದ ಕೂಡಿದ್ದು, ವಿಚಾರ ಮಂಥನ ನಡೆಯುತ್ತಿತ್ತು. ಪ್ರಸ್ತುತ ನಿರ್ಮಿಸುತ್ತಿರುವ ಅನುಭವ ಮಂಟಪದಲ್ಲಿಯೂ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತ ಸಭಾಂಗಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸೃಷ್ಟಿಸುವಂತೆ ಸೂಚನೆ ನೀಡಿದರು.

ಇದಲ್ಲದೆ ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೇಗಿತ್ತು ಎಂಬ ಅರಿವು ಮೂಡಿಸುವ ರೀತಿಯಲ್ಲಿ ಇದನ್ನು ನಿರ್ಮಿಸಬೇಕು. ಜೊತೆಗೆ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿ, ಹಾಲೋಗ್ರಾಫಿಕ್ ಪ್ರದರ್ಶನ ಮೊದಲಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪದ ಅನುಭವ ಜನರಿಗೆ ಆಗುವಂತೆ ಮಾಡಬೇಕು. ಕನಿಷ್ಠ 200 ಜನ ಕುಳಿತುಕೊಳ್ಳುವ ಎರಡು ಸಭಾಂಗಣ ನಿರ್ಮಾಣ ಮಾಡಿ ಎಂದು ಸೂಚಿಸಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ದಿನದ 24 ಗಂಟೆ ಕಾಲ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಳ್ಳಿ. ಕಟ್ಟಡದ ಗುಣಮಟ್ಟ ಉತ್ಕೃಷ್ಟವಾಗಿ ಇರಲಿ. ಅನುಭವ ಮಂಟಪದ ಸುರಕ್ಷತೆ ಮತ್ತು ನಿರ್ವಹಣೆ ಬಗ್ಗೆ ಆದ್ಯತೆ ನೀಡುವಂತೆ ಹಾಗೂ ಯೋಜನೆಯ ಭಾಗವಾಗಿ ಪರಿಗಣಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ, ಮಾಜಿ ಶಾಸಕ‌ ಬಸವರಾಜ ಪಾಟೀಲ್ ಸೇಡಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್​, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್​ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಇನ್ಮುಂದೆ ಹಾಫ್​ ಹೆಲ್ಮೆಟ್​ ಧರಿಸಿದರೂ ಬೀಳುತ್ತೆ ದಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.