ದಾವೋಸ್ ಆರ್ಥಿಕ ಶೃಂಗದ ಮಾದರಿಯಲ್ಲಿ ಬೆಂಗಳೂರು ಟೆಕ್ ಸಮ್ಮಿಟ್: ಸರ್ಕಾರದ ಹೊಸ ಪ್ಲಾನ್​​

author img

By

Published : Nov 25, 2022, 3:26 PM IST

KN_BNG_

ದಾವೋಸ್ ಮಾದರಿಯ ಆರ್ಥಿಕ ಶೃಂಗವನ್ನು ಬೆಂಗಳೂರಿನಲ್ಲೇ ಆಯೋಜಿಸಬೇಕು ಎನ್ನುವ ಚಿಂತನೆಯನ್ನು ರಾಜ್ಯ ಸರ್ಕಾರ ಮಾಡಿದ್ದು, ಇದಕ್ಕೆ ಬೆಂಗಳೂರು ಟೆಕ್ ಸಮ್ಮಿಟ್ ಅನ್ನೇ ಬಳಸಿಕೊಳ್ಳಲು ನಿರ್ಧರಿಸಿದೆ.

ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್​ಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದ್ದು, ಸ್ವಿಟ್ಜರ್​ಲ್ಯಾಂಡ್​ನ ದಾವೋಸ್​ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗದ ಮಾದರಿಯಲ್ಲಿ ಇನ್ಮುಂದೆ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜಿಸಲು ನಿರ್ಧರಿಸಿದೆ. ಇದಕ್ಕಾಗಿ ಮತ್ತಷ್ಟು ರಾಷ್ಟ್ರಗಳ ಜೊತೆ ಮಾತುಕತೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ವರ್ಷದ ಬಿಟಿಎಸ್​ನಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಿದೆ.

ವಿಶ್ವದ ಶ್ರೀಮಂತ ಮತ್ತು ಪ್ರಬಲ ರಾಷ್ಟ್ರಗಳ ಆರ್ಥಿಕ ಶೃಂಗಕ್ಕೆ ದಾವೋಸ್ ಹೆಸರುವಾಸಿಯಾಗಿದೆ. 100 ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಈ ಶೃಂಗದಲ್ಲಿ ಭಾಗಿಯಾಗಲಿದ್ದಾರೆ. ಪ್ರತಿ ವರ್ಷ ಜನವರಿ ಅಂತ್ಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ದಾವೋಸ್ ಆರ್ಥಿಕ ಶೃಂಗದಲ್ಲಿ ದೇಶ ದೇಶಗಳ ನಡುವಿನ ಹೂಡಿಕೆ ಕುರಿತ ಒಡಂಬಡಿಕೆಗಳು ನಡೆಯಲಿವೆ. ಹಾಗಾಗಿಯೇ ತಮ್ಮ ತಮ್ಮ ದೇಶಕ್ಕೆ ಹೂಡಿಕೆ ತರಬೇಕು, ಹೂಡಿಕೆದಾರರನ್ನು ಸೆಳೆಯಬೇಕು ಎಂದು ಎಲ್ಲ ದೇಶಗಳು ಪ್ರಯತ್ನ ನಡೆಸುತ್ತಿವೆ ಇದಕ್ಕೆ ಭಾರತವೂ ಹೊರತಲ್ಲ.

ಇದೀಗ ದಾವೋಸ್ ಮಾದರಿಯ ಆರ್ಥಿಕ ಶೃಂಗವನ್ನು ಬೆಂಗಳೂರಿನಲ್ಲೇ ಆಯೋಜಿಸಬೇಕು ಎನ್ನುವ ಚಿಂತನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇದಕ್ಕೆ ಬೆಂಗಳೂರು ಟೆಕ್ ಸಮ್ಮಿಟ್ ಅನ್ನೇ ಬಳಸಿಕೊಳ್ಳಲು ನಿರ್ಧರಿಸಿದೆ. ಜನವರಿಯಲ್ಲಿ ದಾವೋಸ್​ನಲ್ಲಿ ನಡೆದಿದ್ದ ಜಾಗತಿಕ ಸಿಇಒಗಳ ಸಮಾವೇಶದಲ್ಲಿ ಭಾರತದ 100ಕ್ಕೂ ಅಧಿಕ ಸಿಇಒಗಳು ಮತ್ತು ಉದ್ಯಮ ನಾಯಕರು ಭಾಗಿಯಾಗಿದ್ದರು. ಒಟ್ಟು 100ಕ್ಕಿಂತ ಅಧಿಕ ರಾಷ್ಟ್ರಗಳ 3 ಸಾವಿರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಜಾಗತಿಕ ಆರ್ಥಿಕ ವಿದ್ಯಮಾನಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿತ್ತು. ಭಾರತ, ಬ್ರಿಟನ್‌, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ವಿಶ್ವದ ಶ್ರೀಮಂತ ಮತ್ತು ಪ್ರಬಲ ರಾಷ್ಟ್ರಗಳು ಭಾಗವಹಿಸುವ ಈ ಶೃಂಗದಂತೆ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಆಯೋಜಿಸಬೇಕು ಎನ್ನುವ ಚಿಂತನೆ ಇದೀಗ ರಾಜ್ಯ ಸರ್ಕಾರದ್ದಾಗಿದೆ.

ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದ 25ನೇ ವರ್ಷದ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಮೂಲಕ ಉದ್ಘಾಟನೆ ಮಾಡಿ ಟೆಕ್ ಸಮ್ಮಿಟ್ ಅನ್ನು ಪ್ರಶಂಸಿಸಿದ್ದರು. ಮೂರು ದಿನಗಳ ಕಾಲ ನಡೆದ ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ 32 ದೇಶಗಳು ಭಾಗಿಯಾಗಿದ್ದು, ಒಟ್ಟು 12 ಒಪ್ಪಂದಗಳು ಆಗಿದ್ದವು, 405 ಸ್ಪೀಕರ್​ಗಳು ಮಾತನಾಡಿದ್ದರು.

ಒಟ್ಟು 25,728 ಜನರು ವೀಕ್ಷಕರು, 585 ಎಕ್ಷ್ಫೋ ಹಾಗೂ ವಿವಿಧ ವಿಚಾರಗಳ ಬಗ್ಗೆ 72 ಸಂವಾದಗಳು ನಡೆದಿದ್ದು, 9,236 ಪ್ರತಿನಿಧಿಗಳು ಭಾಗಿಯಾಗಿದ್ದರು. ಮುಂದಿನ ವರ್ಷ 26ನೇ ಸಮ್ಮಿಟ್ ನಡೆಯಲಿದ್ದು, ಅದಕ್ಕೆ ದೊಡ್ಡ ಮಟ್ಟದ ಯೋಜನೆ ಹಾಕಿಲೊಳ್ಳಲು ಸರ್ಕಾರ ನಿರ್ಧರಿಸಿದೆ. ದಾವೋಸ್​ನಲ್ಲಿ 100 ಕ್ಕೂ ಹೆಚ್ಚಿನ ದೇಶಗಳು ಭಾಗಿಯಾಗುತ್ತಿದ್ದು, ಬೆಂಗಳೂರಿನ ಶೃಂಗಕ್ಕೆ ಕನಿಷ್ಠ 50 ದೇಶಗಳ ಪ್ರತಿನಿಧಿಗಳಾದರೂ ಆಗಮಿಸಬೇಕು ಎನ್ನುವ ಯೋಜನೆ ರೂಪಿಸಲಾಗುತ್ತಿದೆ.

ಬೆಂಗಳೂರಿನಲ್ಲಿಯೇ ಆರ್ಥಿಕ ಶೃಂಗ: ಹಂತ ಹಂತವಾಗಿ 2030ಕ್ಕೆ ದಾವೋಸ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಆರ್ಥಿಕ ಶೃಂಗ ನಡೆಯಬೇಕು ಎನ್ನುವ ಆಶಯವನ್ನು ಹೊಂದಲಾಗಿದೆ. ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಐಟಿ ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ, ಬೆಂಗಳೂರು ಟೆಕ್ ಸಮ್ಮಿಟ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಮ್ಮಿಟ್ ಆಯೋಜನೆಯಲ್ಲಿ ನಾವು ಇನ್ನು ಬೆಳೆಯುತ್ತಾ ಹೋಗುತ್ತೇವೆ ಮುಂದಿನ ವರ್ಷಕ್ಕೆ ಇನ್ನು ದೊಡ್ಡ ಮಟ್ಟದಲ್ಲಿ ಸಮ್ಮಿಟ್ ಅನ್ನು ರ್ಯಾಂಪ್ ಅಪ್ ಮಾಡುತ್ತೇವೆ, ಕಂಪ್ಲೀಟ್ಲಿ ಸ್ಕೇಲ್ ಅಪ್ ಮಾಡಲಿದ್ದೇವೆ ಎಂದು ಹೇಳಿದರು.

ದಾವೋಸ್​​​ನಲ್ಲಿ ಏನು ನೋಡುತ್ತೀರೋ ಆ ದಾವೋಸ್ ಮಾದರಿಯಲ್ಲಿಯೇ ನಾವೂ ಹೋಗಬೇಕು ಎಂದುಕೊಂಡಿದ್ದೇವೆ. ಸ್ವಿಟ್ಜರ್​ಲ್ಯಾಂಡ್​ನ ದಾವೋಸ್​ನಲ್ಲಿ ನಡೆಯುವ ಈವೆಂಟ್ ಎಕ್ಸಲೆಂಟ್ ಈವೆಂಟ್ ಆ ದಾರಿಯಲ್ಲಿ ನಾವೂ ಬೆಳೆಯಬೇಕು ಆ ನಿಟ್ಟಿನಲ್ಲೇ ನಾವು ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.