ಬೆಂಗಳೂರಲ್ಲಿ ರೈಸ್ ಪುಲ್ಲಿಂಗ್ ದಂಧೆ: ಆಂಧ್ರ ಮೂಲದ ದಂಪತಿ ಸೇರಿ 6 ಜನರ ಬಂಧನ

author img

By

Published : Sep 11, 2021, 8:14 AM IST

6-arrested-in-rice-pulling-case-at-bengaluru

ಹೋಟೆಲ್​ವೊಂದರಲ್ಲಿ ತಂಗಿದ್ದು, ರೈಸ್​ ಪುಲ್ಲಿಂಗ್​ ದಂಧೆ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ದಂಪತಿ ಸೇರಿ ಆರು ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರು: ನಗರದ ಹೋಟೆಲ್​ವೊಂದರಲ್ಲಿ ತಂಗಿ ರೈಸ್​ ಪುಲ್ಲಿಂಗ್​ ದಂಧೆ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ದಂಪತಿ ಸೇರಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದಂಪತಿ ರಾಜಧಾನಿಯ ವೈಯಾಲಿಕಾವಲ್ ಪ್ರದೇಶದ ಹೋಟೆಲ್‌ವೊಂದರಲ್ಲಿ ಎರಡು ತಿಂಗಳಿನಿಂದ ವಾಸವಾಗಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ಶೇಖ್ ಅಹ್ಮದ್, ಜರೀನಾ ಅಹ್ಮದ್ ದಂಪತಿ, ಬೆಂಗಳೂರಿನ ರಾಘವೇಂದ್ರ ಪ್ರಸಾದ್, ನಯೀಮುಲ್ಲಾ, ಮುದಾಸೀರ್ ಅಹ್ಮದ್ ಮತ್ತು ಫರೀದಾ ಎಂಬುವರನ್ನು ಬಂಧಿಸಿದ್ದಾರೆ. ರಾಜಧಾನಿಯ ವೈಯಾಲಿಕಾವಲ್ ಪ್ರದೇಶದ ಹೋಟೆಲ್‌ವೊಂದರಲ್ಲಿ ಇದ್ದುಕೊಂಡು ಮೋಸದ ಜಾಲ ಹೆಣೆಯುತ್ತಿದ್ದ ಕಿಲಾಡಿ ಜೋಡಿಗೆ ಉಳಿದ ನಾಲ್ವರು ಸಾಥ್ ನೀಡುತ್ತಿದ್ದರು.

ಅಮಾಯಕರನ್ನೇ ಗುರಿಯಾಗಿಸಿಕೊಂಡು ವಂಚನೆಯ ಬಲೆ ಬೀಸುತ್ತಿದ್ದ ಆರೋಪಿಗಳು, ಅವರಿಂದ ಲಕ್ಷ ಲಕ್ಷ ರೂಪಾಯಿ ಪೀಕುತ್ತಿದ್ದರು. ತಮ್ಮ ಬಳಿ ರೈಸ್ ಪುಲ್ಲಿಂಗ್ ಯಂತ್ರ ಇದ್ದು, ಮಾರಾಟ ಮಾಡಿದರೆ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ ಎಂದು ನಂಬಿಸುತ್ತಿದ್ದರು. ಬಂದ ಹಣದಲ್ಲಿ ಪಾಲು ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದರು. ನಂಬಿಸಲು ಸಾಮಾಜಿಕ ಜಾಲತಾಣದ ಪೋಸ್ಟ್​ಗಳನ್ನು ತೋರಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಡಿಲು ಬಡಿದ ಪಾತ್ರೆಗೆ ಅಕ್ಕಿ ಕಾಳು:

ಸಿಡಿಲು ಹೊಡೆದ ಪಾತ್ರೆಯ ಪಕ್ಕ ಅಕ್ಕಿ ಕಾಳು ಹಾಕಿದರೆ, ಅವುಗಳನ್ನು ಪಾತ್ರೆಯು ತನ್ನತ್ತ ಸೆಳೆಯುತ್ತದೆ ಎಂದು ಆರೋಪಿಗಳು ಜನರನ್ನು ನಂಬಿಸುತ್ತಿದ್ದರು. ಈ ಸಂಬಂಧ ಮೊಸಕ್ಕೊಳಗಾದವರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಸಿಬಿ ಅಧಿಕಾರಿ ಜಗನ್ನಾಥ್​​ ರೈ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಏನಿದು ರೈಸ್ ಪುಲ್ಲಿಂಗ್:

ಪಂಚ ಲೋಹಕ್ಕೆ ಸಂಬಂಧಿಸಿದ ಒಂದು ವಸ್ತು ಇರುತ್ತದೆ. ಅದಕ್ಕೆ ಸಿಡಿಲು ಬಡಿದಾಗ ಒಂದು ರೀತಿಯ ಶಕ್ತಿ ಆವರಿಸಿರುತ್ತದೆ. ಅಕ್ಕಿ ಕಾಳುಗಳನ್ನು ಈ ವಸ್ತುವಿನ ಪಕ್ಕದಲ್ಲಿ ಇಟ್ಟರೆ, ಮ್ಯಾಗ್ನೆಟ್‌ಗೆ ಮೊಳೆ ಚೂರು ಅಂಟಿಕೊಳ್ಳುವ ರೀತಿ ಈ ತಾಮ್ರದ ವಸ್ತುವಿಗೆ ಅಕ್ಕಿ ಕಾಳು ಅಂಟಿಕೊಳ್ಳುವಂತಿದ್ದರೆ ತುಂಬಾ ಶಕ್ತಿಶಾಲಿಯುತ ವಸ್ತು ಎಂದೇ ಭಾವಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಕ್ಕೆ ನೂರಾರು ಕೋಟಿ ಬೆಲೆ ಇದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತವೆ. ಈ ಶಕ್ತಿಶಾಲಿ ವಸ್ತುವನ್ನು ಮಾರಾಟ ಮಾಡುವ ಹೆಸರಿನಲ್ಲಿ ವಹಿವಾಟು ನಡೆಸಿ ಹಣದ ವ್ಯವಹಾರದ ಮೋಸದಾಟವನ್ನೇ ರೈಸ್ ಪುಲ್ಲಿಂಗ್ ಎನ್ನಲಾಗುತ್ತದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಆತಂಕಕಾರಿ ಸಮಸ್ಯೆಗಳಿಗೆ ‘ಗಾಂಧಿ ಕುಟುಂಬದ ಪರಂಪರೆಯೇ ಕಾರಣ’ : BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.