ಬಯಲು ಸೀಮೆಯಲ್ಲಿ ಮಲೆನಾಡ ಸೌಂದರ್ಯ; ಚಾರಣಪ್ರಿಯರಿಗೆ ಬಲು ಇಷ್ಟ ಅರ್ಕಾವತಿ ಉಗಮ ಸ್ಥಾನ

author img

By

Published : Sep 2, 2021, 10:25 PM IST

channagiri hills

ಬಯಲು ಸೀಮೆಯಲ್ಲಿ ಮಲೆನಾಡ ಸೌಂದರ್ಯ ಸವಿಯಬೇಕಾದ್ರೆ ಪಂಚಗಿರಿಶ್ರೇಣಿಗೆ ಭೇಟಿ ನೀಡಬೇಕು. ಪಂಚಗಿರಿ ಶ್ರೇಣಿಯಲ್ಲಿ ಬರುವ ನಂದಿಗಿರಿ, ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ ಮತ್ತು ಚನ್ನಗಿರಿ ಬೆಟ್ಟಗಳು ಪ್ರಕೃತಿ ಸೌಂದರ್ಯದ ಗಣಿಗಳು. ಇಲ್ಲಿನ ಒಂದೊಂದು ಬೆಟ್ಟವೂ ಸಹ ತನ್ನದೇ ಆದ ವೈಶಿಷ್ಠ್ಯತೆ ಒಳಗೊಂಡಿದೆ.

ದೊಡ್ಡಬಳ್ಳಾಪುರ: ವಿಶ್ವವಿಖ್ಯಾತ ನಂದಿಬೆಟ್ಟದ ಪಕ್ಕದಲ್ಲಿರುವ ಚನ್ನಗಿರಿ ಬೆಟ್ಟ ನಂದಿಯಷ್ಟೇ ನೋಡಲು ಸೊಗಸು. ಮಳೆಗಾಲದಲ್ಲಿ ಸೃಷ್ಠಿಯಾಗುವ ಜಲಪಾತ ಚಾರಣಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತೆ. ಕಳೆದೊಂದು ವಾರದಿಂದ ನಂದಿಬೆಟ್ಟದ ಸುತ್ತಮುತ್ತಲು ಸುರಿಯುತ್ತಿರುವ ಮಳೆಗೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

ಬಯಲು ಸೀಮೆಯಲ್ಲಿ ಮಲೆನಾಡ ಸೌಂದರ್ಯ ಸವಿಯಬೇಕಾದ್ರೆ ಪಂಚಗಿರಿಶ್ರೇಣಿಗೆ ಭೇಟಿ ನೀಡಬೇಕು. ಈ ಗಿರಿ ಶ್ರೇಣಿಯಲ್ಲಿ ಬರುವ ನಂದಿಗಿರಿ, ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ ಮತ್ತು ಚನ್ನಗಿರಿ ಬೆಟ್ಟಗಳು ಪ್ರಕೃತಿ ಸೌಂದರ್ಯದ ಗಣಿಗಳೆಂದೇ ಹೇಳಬೇಕು. ಇಲ್ಲಿನ ಒಂದೊಂದು ಬೆಟ್ಟವೂ ಸಹ ತನ್ನದೇ ಆದ ವೈಶಿಷ್ಠ್ಯತೆಯನ್ನು ಒಳಗೊಂಡಿದೆ. ಹಾಗೆಯೇ, ನಂದಿಬೆಟ್ಟದ ಪಕ್ಕದಲ್ಲಿರುವ ಚನ್ನಗಿರಿ ಬೆಟ್ಟ ಮಳೆಗಾಲದಲ್ಲಿ ಸೃಷ್ಠಿಯಾಗುವ ಜಲಪಾತಕ್ಕೆ ಪ್ರಸಿದ್ದಿ ಪಡೆದಿದೆ.

ಚನ್ನಗಿರಿ ಬೆಟ್ಟದ ಆಕರ್ಷಕ ಜಲಪಾತದ ಬಗ್ಗೆ ಪ್ರವಾಸಿಗರ ಅಭಿಪ್ರಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದಲ್ಲಿ ಚನ್ನಗಿರಿ ಬೆಟ್ಟ ಇದೆ. ಹಚ್ಟಹಸಿರಿನಿಂದ ತುಂಬಿರುವ ಚನ್ನಗಿರಿ ಬೆಟ್ಟದ ಚೆಲುವು ಮಳೆಗಾಲದಲ್ಲಿ ಮತ್ತಷ್ಟು ಇಮ್ಮಡಿಗೊಳ್ಳುತ್ತೆ. ನಂದಿಬೆಟ್ಟಕ್ಕಿಂತ ಎತ್ತರದಲ್ಲಿರುವ ಚನ್ನಗಿರಿ ಬೆಟ್ಟದ ಮೇಲೆ ದಟ್ಟ ಅರಣ್ಯ ಪ್ರದೇಶವಿದ್ದು, ಮಳೆಗಾಲದಲ್ಲಿ ಬೆಟ್ಟದ ಮೇಲಿಂದ ಕೆಳಗೆ ಹರಿಯುವ ನೀರು ಜಲಪಾತವಾಗುತ್ತೆ. ಕಿರಿದಾದ ಬಂಡೆಗಳ ನಡುವೆ ಕಡಿದಾದ ಕಲ್ಲುಬಂಡೆಗಳಿಂದ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಇದು ಚಾರಣಪ್ರಿಯರಿಗೆ ಇಷ್ಟವಾದ ತಾಣವಾಗಿದ್ದು, ಚಾರಣಿಗರು ಮತ್ತು ಪ್ರವಾಸಿಗರು ಜಲಪಾತದ ಸೌಂದರ್ಯ ಸವಿಯಲು ಇಲ್ಲಿಗೆ ಸದಾ ಬರುತ್ತಾರೆ.

ಚನ್ನಗಿರಿ ಬೆಟ್ಟದಲ್ಲಿ ಅರ್ಕಾವತಿ ನದಿ ಉಗಮ

ಬೆಟ್ಟದ ಮೇಲಿಂದ ಧುಮ್ಮಿಕ್ಕಿ ಬರುವ ನೀರು ಬೆಟ್ಟದ ಬುಡದಲ್ಲಿರುವ ಚಿಕ್ಕರಾಯಪ್ಪನ ಕೆರೆಯಲ್ಲಿ ಸಂಗ್ರಹವಾಗಿ ಮುಂದೆ ಮೇಳೆಕೋಟೆ ಕೆರೆ, ರಾಜಘಟ್ಟ ಕೆರೆ, ನಾಗರಕೆರೆ, ದೊಡ್ಡ ತುಮಕೂರು ಕೆರೆ, ಹೆಸರಘಟ್ಟ ಕೆರೆ ಸೇರಿ ಮುಂದೆ ಕನಕಪುರ ಸಂಗಮದಲ್ಲಿ ಕಾವೇರಿಯಲ್ಲಿ ಅರ್ಕಾವತಿ ಸಂಗಮವಾಗಲಿದೆ. ಕೆರೆಯಿಂದ ಕೆರೆಗೆ ಹರಿಯುವುದು ಅರ್ಕಾವತಿ ನದಿಯ ವಿಶೇಷ. ಮುಂದೆ ರಾಮನಗರ ಜಿಲ್ಲೆಯಲ್ಲಿ ಅರ್ಕಾವತಿ ನದಿಯ ಗಾತ್ರ ದೊಡ್ಡದಾಗುತ್ತಾ ಹೋಗುತ್ತದೆ. ಚನ್ನಗಿರಿ ಬೆಟ್ಟದ ಮೇಲಿಂದ ಅರ್ಕಾವತಿ ಜಲಾನಯನ ಪ್ರದೇಶವನ್ನು ನೋಡಬಹುದು. ಹಳ್ಳಿಗಳು, ಹೊಲ ಗದ್ದೆಗಳು, ಬೆಟ್ಟ ಗುಡ್ಡಗಳ ಸಾಲುಗಳ ಸೌಂದರ್ಯ ಸವಿಯಬಹುದಾಗಿದೆ.

ಬೆಟ್ಟದ ಮೇಲೆ ಚನ್ನರಾಯಸ್ವಾಮಿ ದೇವಾಲಯವಿದೆ. ಇಲ್ಲಿಗೆ ಬರುವ ಭಕ್ತರಿಗೆ ಮತ್ತು ಬೆಟ್ಟದಲ್ಲಿನ ಕಾಡು ಪ್ರಾಣಿಗಳ ಅನುಕೂಲಕ್ಕಾಗಿ ಕಲ್ಯಾಣಿಯನ್ನು ಕಟ್ಟಲಾಗಿದೆ. ಈ ಬೆಟ್ಟದಲ್ಲಿ ವಿಶೇಷವಾಗಿ ಜಾಲಾರಿ ಮರಗಳು, ಔಷಧಿ ಸಸ್ಯಗಳನ್ನು ನೋಡಬಹುದು. ಕೀಟಭಕ್ಷಕ ಗಿಡಗಳು ಇಲ್ಲಿನ ವಿಶೇಷ. ಮೀಸಲು ಅರಣ್ಯ ಪ್ರದೇಶದಲ್ಲಿ ಚನ್ನಗಿರಿ ಬೆಟ್ಟ ಇರುವುದರಿಂದ ಬೆಟ್ಟಕ್ಕೆ ಭೇಟಿ ನೀಡಬೇಕಾದ್ರೆ ಅರಣ್ಯಾಧಿಕಾರಿಗಳ ಅನುಮತಿ ಇರಬೇಕು. ಅತಿಕ್ರಮ ಪ್ರವೇಶ ಶಿಕ್ಷಾರ್ಹ ಅಪರಾಧ.

ಚನ್ನಗಿರಿಯ ಬೆಟ್ಟದ ಮೇಲೆ ಗಣಿಗಾರಿಕೆಯ ಕರಿನೆರಳು

ಈ ಹಿಂದೆ ಗಣಿಗಾರಿಕೆ ಮಾಡಲು ಚನ್ನಗಿರಿ ಬೆಟ್ಟದಲ್ಲಿ ಅನುಮತಿ ನೀಡಲಾಗಿತ್ತು. ಹೀಗಾಗಿ, ಅರ್ಕಾವತಿ ನದಿಯ ಉಗಮಸ್ಥಾನವೇ ಕಣ್ಮರೆಯಾಗುವ ಹಂತಕ್ಕೆ ತಲುಪಿತು. ರೈತ ಸಂಘ ಮತ್ತು ಸ್ವಯಂಸೇವಾ ಸಂಸ್ಥೆಗಳು ನಡೆಸಿದ ಹೋರಾಟದ ಫಲದಿಂದ ಚನ್ನಗಿರಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಬಂದ್ ಮಾಡಲಾಗಿದೆ. ಆದರೆ, ಬೆಟ್ಟದ ಸುತ್ತಮುತ್ತ ಈಗಲೂ ಹತ್ತಾರು ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅಪಾಯ ಮಾತ್ರ ಸನಿಹವೇ ಇದೆ. ಕೆಲವು ದಿನಗಳ ಹಿಂದೆ ನಂದಿಬೆಟ್ಟದಲ್ಲಿ ನಡೆದ ಭೂಕುಸಿತ ಅಪಾಯದ ಸೂಚನೆಯಾಗಿದ್ದು, ಪಂಚಗಿರಿ ಶ್ರೇಣಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕಾದ ತುರ್ತು ಇದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಕೈ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಪೊಲೀಸ್ ಕಮಿಷನರ್​​ ಅಮಾನತಿಗೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.