ಧರಣಿ ನಡುವೆ ಜಮೀನಿನಲ್ಲಿ ಸರ್ವೆ ಕಾರ್ಯ: ಅಧಿಕಾರಿಗಳನ್ನು ತಡೆದು ರೈತರ ಪ್ರತಿಭಟನೆ

author img

By

Published : Jan 22, 2023, 1:12 PM IST

Updated : Jan 22, 2023, 4:52 PM IST

KIADB officials were held back and protested

ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲೇ ಸರ್ವೆ ನಡೆಸಲು ಮುಂದಾದ ಕೆಐಎಡಿಬಿ ಅಧಿಕಾರಿಗಳನ್ನು ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ವೆ ಕಾರ್ಯಕ್ಕೆ ಬಂದ ಅಧಿಕಾರಿಗಳನ್ನು ತಡೆದು ರೈತರ ಪ್ರತಿಭಟನೆ

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) : ಕೆಐಎಡಿಬಿ ಭೂ ಸ್ವಾಧೀನ ಕಾರ್ಯಕ್ಕೆ ಸರ್ವೆ ನಡೆಸಲು ಬಂದಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣ ಹೋಬಳಿಯ ಮಟ್ಟಬಾರ್ಲು ಗ್ರಾಮದಲ್ಲಿ ನಡೆಯಿತು. ಮೊದಲನೇ ಹಂತದಲ್ಲಿ ಒಂದು ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನು ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಸ್ವಾಧೀನಪಡಿಸಿಕೊಂಡಿದ್ದು ಕೈಗಾರಿಕಾ ಪ್ರದೇಶ ನಿರ್ಮಿಸಲಾಗುತ್ತಿದೆ. ಈ ನಡುವೆ ಎರಡನೇ ಹಂತದಲ್ಲಿ 1,777 ಎಕರೆ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಇದೀಗ ಸರ್ಕಾರ ಮುಂದಾಗಿದೆ. ಈ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಕಳೆದ 293 ದಿನದಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ.

ರೈತ ಮುಖಂಡ ಶ್ರೀನಿವಾಸ್​ ಮಾತನಾಡಿ, "ಶನಿವಾರ ಸಂಜೆ ಕೆಐಎಡಿಬಿ ಅಧಿಕಾರಿಗಳು ರೈತರ ಕಣ್ತಪ್ಪಿಸಿ ಕೃಷಿ ಭೂಮಿ ಸರ್ವೆ ಮಾಡಿಸಲು ಸರ್ವೆಯರ್​ಗಳನ್ನು ಕಳುಹಿಸಿದ್ದಾರೆ. ಸರ್ವೆ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಲು ಹೋದ ರೈತರ ಮೇಲೆ ದಬ್ಬಾಳಿಕೆ ಮಾಡಿದ್ಧಾರೆ. ಇದರ ನಡುವೆಯೂ ಸರ್ವೆ ಮಾಡಿ ವರದಿ ನೀಡಲು ಸಿಬ್ಬಂದಿ ಮುಂದಾಗಿದ್ದಾರೆ. ಹೀಗಾಗಿ ಕೃಷಿ ಭೂಮಿ ಸರ್ವೆ ವಿರುದ್ದ ರೈತರು ಕೋಪಗೊಂಡು ಸರ್ವೆ ನಡೆಸಲು ಬಂದ ಸರ್ವೆಯರ್​ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಭೂಮಿಯನ್ನು ಸರ್ವೆ ಮಾಡಿಸಲು ಕಳಿಸಿದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಇಲ್ಲಿಂದ ಸಿಬ್ಬಂದಿಯನ್ನು ಬಿಡುವುದಿಲ್ಲ" ಎಂದು ಹೇಳಿದರು.

293 ದಿನಗಳಿಂದ ಧರಣಿ: ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ ವಿರೋಧದ ನಡುವೆ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ಕಳೆದ 293 ದಿನಗಳಿಂದ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದೀಗ ಭೂಮಿ ಸರ್ವೆ ಮಾಡಲು ಬಂದಿರುವುದು ಹೋರಾಟಗಾರರನ್ನು ಕೆರಳಿಸಿದೆ. ಸರ್ವೆಗೆ ಬಂದ ತೋಟದ ಬಳಿಯೇ ಟೆಂಟ್ ಹಾಕಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಚೆನ್ನರಾಯಪಟ್ಟಣ ಪೊಲೀಸರಿಗೂ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಸರ್ವೆಗೆ ಬಂದವರನ್ನು ಕಳುಹಿಸಲ್ಲ ಎಂದು ರೈತರು ಹೇಳಿದರು. ರೈತರ ಕೃಷಿ ಭೂಮಿ ಸರ್ವೆ ಬಗ್ಗೆ ಸ್ಥಳಕ್ಕೆ ಬಂದ ಸರ್ವೆಯರ್​ ನಾಗರಾಜ್​ರನ್ನು ಈ ಬಗ್ಗೆ ಪ್ರಶ್ನಿಸಿದಾಗ, "ನಾವು ಕೆಐಎಡಿಬಿಯವರು. ನಮಗೆ ರಸ್ತೆ ಸರ್ವೆ ಮಾಡಲು ಹೇಳಿದ್ದಾರೆ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ" ಎಂದರು.

ಇದನ್ನೂ ಓದಿ :'ಉಟ್ಟಬಟ್ಟೆಯಲ್ಲಿಯೇ ಹೊರ ಹಾಕಿ ಭೂಸ್ವಾಧೀನ': 25 ವರ್ಷಗಳಾದ್ರೂ ಸೀಬರ್ಡ್​ ನಿರಾಶ್ರಿತರ ಕೈ ಸೇರದ ಪರಿಹಾರ

Last Updated :Jan 22, 2023, 4:52 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.