ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರದಲ್ಲಿ ಹಮಾಲಿಗಳ ಕೊರತೆ, ಖರೀದಿ ಪ್ರಕ್ರಿಯೆ ನಿಧಾನ ಆರೋಪ

author img

By

Published : Jan 25, 2023, 7:52 PM IST

ರಾಗಿ ಖರೀದಿ ಕೇಂದ್ರದಲ್ಲಿ ಹಮಾಲಿಗಳ ಕೊರತೆ

ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆ- ಮಂದಗತಿಯಲ್ಲಿ ಸಾಗಿದ ರಾಗಿ ಖರೀದಿ ಪ್ರಕ್ರಿಯೆ- ರೈತರ ಬೇಸರ

ರಾಗಿ ಖರೀದಿ ಕೇಂದ್ರದಲ್ಲಿ ಮೂಲಸೌಕರ್ಯದ ಕೊರತೆ ಬಗ್ಗೆ ರೈತ ಶಿವಣ್ಣ ಅವರು ಮಾತನಾಡಿದರು

ದೊಡ್ಡಬಳ್ಳಾಪುರ : ರಾಗಿ ಖರೀದಿ ಕೇಂದ್ರದಲ್ಲಿ ಹಮಾಲಿಗಳ ಕೊರತೆಯಿಂದ ರಾಗಿ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ದಿನಗಟ್ಟಲೇ ಸರದಿ ಸಾಲಿನಲ್ಲಿ ಕಾಯುತ್ತಿರುವುದರಿಂದ ಟ್ರ್ಯಾಕ್ಟರ್ ಬಾಡಿಗೆ ದರದ ಹೊರೆ ರೈತರ ಮೇಲೆ ಬಿದ್ದಿದೆ. ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಖರೀದಿ ಕೇಂದ್ರದಲ್ಲಿ ಮೂಲಸೌಕರ್ಯದ ಕೊರತೆ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 14 ಸಾವಿರಕ್ಕೂ ಹೆಚ್ಚು ರೈತರು ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ತಾಲೂಕಿನಲ್ಲಿ ಸಾಸಲು ಮತ್ತು ಗುಂಡಮಗೆರೆ ಕ್ರಾಸ್ ಬಳಿ ಎರಡು ರಾಗಿ ಖರೀದಿ ಕೇಂದ್ರಗಳನ್ನ ತೆರೆಯಲಾಗಿದ್ದು, ನಿನ್ನೆಯಿಂದ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ಖರೀದಿ ಕೇಂದ್ರದಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಚಿರತೆ ಭಯದಲ್ಲಿ ಟ್ರ್ಯಾಕ್ಟರ್​ಗಳನ್ನ ಕಾಯಬೇಕಾದ ಪರಿಸ್ಥಿತಿ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ಗುಂಡಮಗೆರೆ ಕ್ರಾಸ್ ಬಳಿಯ ರಾಜ್ಯ ಉಗ್ರಾಣ ನಿಗಮದಲ್ಲಿ ರಾಗಿ ಖರೀದಿ ಮಾಡಲಾಗುತ್ತಿದೆ. ರಾಗಿ ಖರೀದಿ ಕೇಂದ್ರದ ಬಳಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಊಟ ತಿಂಡಿಗಾಗಿ ಒಂದರಿಂದ ಎರಡು ಕಿ.ಮೀ ದೂರ ಹೋಗಿ ಬರಬೇಕು. ಸ್ಥಳದಲ್ಲಿ ಚಿರತೆಯ ಉಪಟಳ ಸಹ ಇದೆ. ಚಿರತೆಯ ಭಯದಲ್ಲಿ ರೈತರು ರಾತ್ರಿಯ ವೇಳೆ ರಾಗಿ ಮೂಟೆಗಳನ್ನ ತುಂಬಿದ ಟ್ರ್ಯಾಕ್ಟರ್ ಗಳನ್ನ ಕಾಯಬೇಕಾದ ಪರಿಸ್ಥಿತಿ ಇದೆ.

ಟ್ರ್ಯಾಕ್ಟರ್ ಬಾಡಿಗೆ ದರ ರೈತರ ಹೆಗಲಿಗೆ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತರಾಗಿ ಖರೀದಿ ಪ್ರಕ್ರಿಯೆಯಲ್ಲಿ ಹೊಸ ಪದ್ಧತಿಯನ್ನು ಜಾರಿ ಮಾಡಿದೆ. ರೈತರಿಂದ ಬರುವ ರಾಗಿಯನ್ನ ಸುರಿದು ಅನಂತರ ಹೊಸ ಚೀಲಗಳಿಗೆ ತುಂಬಬೇಕಿದೆ. ರೈತರು ತಂದ ಚೀಲದಿಂದ ಹೊಸ ಚೀಲಕ್ಕೆ ರಾಗಿ ತುಂಬುವುದು ರಾಗಿ ಖರೀದಿ ಪ್ರಕ್ರಿಯೆಯನ್ನೇ ನಿಧಾನವಾಗಿಸಿದೆ. ಹಮಾಲಿಗಳ ಕೊರತೆ ಇರುವುದರಿಂದ ಚೀಲ ಬದಲಾಯಿಸಲು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ರೈತರು ಎರಡು ಮೂರು ದಿನ ಸರದಿ ಸಾಲಿನಲ್ಲೇ ಕಾಯಬೇಕು. ದಿನದ ಟ್ರ್ಯಾಕ್ಟರ್ ಬಾಡಿಗೆ ಎರಡು ಮೂರು ಸಾವಿರ ಇದ್ದು, ಎರಡು ಮೂರು ದಿನದ ಟ್ರ್ಯಾಕ್ಟರ್ ಬಾಡಿಗೆ ದರ ರೈತರ ಹೆಗಲಿಗೆ ಬಿದ್ದಿದೆ ಅಂತಾರೆ ಅನ್ನದಾತರು.

ಹಮಾಲಿಗಳ ಸಂಖ್ಯೆ ಹೆಚ್ಚಿಸುವಂತೆ ರೈತರ ಬೇಡಿಕೆ: ಅಧಿಕಾರಿಗಳಿಗೆ ಮನವಿ ಮಾಡುತ್ತಿರುವ ರೈತರು ಚೀಲಗಳನ್ನ ಮೊದಲೇ ಕೊಟ್ಟರೆ ನಾವೇ ತುಂಬಿ ಖರೀದಿ ಕೇಂದ್ರಕ್ಕೆ ತರುತ್ತೇವೆ. ಇದರಿಂದ ಸಮಯದ ಉಳಿತಾಯವಾಗಲಿದೆ ಮತ್ತು ಹಮಾಲಿಗಳ ಸಂಖ್ಯೆಯನ್ನ ಹೆಚ್ಚು ಮಾಡಿ ಎಂಬುದು ರೈತರ ಬೇಡಿಕೆಯಾಗಿದೆ.

ರಾಗಿ ಖರೀದಿ ಪ್ರಕ್ರಿಯೆ ನಿಧಾನಗತಿಯ ಬಗ್ಗೆ ಪ್ರತಿಕ್ರಿಯಿಸಿದ ರಾಗಿ ಖರೀದಿ ಕೇಂದ್ರ ಅಧಿಕಾರಿ ಮಹೇಶ್, ರೈತರ ಆರೋಪವನ್ನ ನಿರಾಕರಿಸಿದರು. ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಆದರೆ, ನೀರಿನ ವ್ಯವಸ್ಥೆಯನ್ನ ಮಾಡಲಾಗಿದೆ. ಹಮಾಲಿಗಳು ಇಂದು ಬೆಳಗ್ಗೆ ತಡವಾಗಿ ಬಂದ ಕಾರಣದಿಂದ ಗೊಂದಲವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ: ಅನಂತರ ರಾಗಿ ಖರೀದಿ ಪ್ರಕ್ರಿಯೆ ಸರಾಗವಾಗಿ ಸಾಗಿದೆ. ಹೊಸ ಪದ್ಧತಿಯಿಂದ ಸಹಜವಾಗಿ ರೈತರಿಗೆ ತೊಂದರೆಯಾಗಿದೆ. ಆದರೆ, ರೈತರಿಂದ ಬರುವ ಕಲ್ಲು ಮತ್ತು ಕಸದ ರಾಗಿಗೆ ಕಡಿವಾಣ ಹಾಕಲು ಹೊಸ ಪದ್ಧತಿ ಜಾರಿ ಮಾಡಲಾಗಿದೆ. ರೈತರ ಬೇಡಿಕೆಯಂತೆ ಆಧಾರ್ ಕಾರ್ಡ್, ಪಹಣಿ ಮತ್ತು ಫೋನ್ ನಂಬರ್ ಕೊಟ್ಟರೆ ಹೊಸ ಚೀಲಗಳನ್ನು ಕೊಡಲಾಗುವುದು. ಇದರಿಂದ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ ಎಂದು ಹೇಳಿದರು.

ಓದಿ : ಬೆಂಗಳೂರಿನಲ್ಲಿ ಆಧಾರ್ ಆನ್ ವೀಲ್ಸ್ ಸೇವೆ ಪ್ರಾರಂಭ: ನಿಮ್ಮ ಮನೆ ಬಾಗಿಲಿಗೆ ಆಧಾರ್ ಸೇವೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.