ದೇವನಹಳ್ಳಿ ಅಪರಿಚಿತ ಶವ ಪತ್ತೆ ಪ್ರಕರಣ : ಕತ್ತರಿಸಿದ ಬೆರಳು ಜೋಡಿಸಿ ಕೊಲೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸರು

author img

By

Published : Jan 23, 2023, 7:51 PM IST

devanahalli-murder-case-three-accused-arrested

ದೇವನಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಕೇಸ್​ - ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು - ಬೆರಳಚ್ಚು ತಂತ್ರಜ್ಞಾನ ಬಳಸಿ ವ್ಯಕ್ತಿಯ ಗುರುತು ಪತ್ತೆ- ಮೂವರ ಬಂಧನ

ದೇವನಹಳ್ಳಿ ಅಪರಿಚಿತ ಶವ ಪತ್ತೆ ಪ್ರಕರಣ : ಕತ್ತರಿಸಿದ ಬೆರಳು ಜೋಡಿಸಿ ಕೊಲೆ ಪ್ರಕರಣ ಬೇಧಿಸಿದ ವಿಜಯಪುರ ಪೊಲೀಸರು

ದೇವನಹಳ್ಳಿ : ಗುರುತು ಪತ್ತೆಯಾಗದಂತೆ ಮುಖವನ್ನು ಜಜ್ಜಿ, ಎರಡು ಕೈಗಳ ಹತ್ತು ಬೆರಳುಗಳನ್ನು ತುಂಡರಿಸಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ತುಂಡರಿಸಿದ್ದ ಎರಡು ಬೆರಳುಗಳನ್ನು ಪತ್ತೆ ಮಾಡಿ ಜೋಡಿಸಿ ಬೆರಳಚ್ಚು ತಂತ್ರಜ್ಞಾನ ಬಳಸಿ ಮೃತ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಮುತ್ಯಾರಪ್ಪ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ನಾಗೇಶ್, ಸೋಮಶೇಖರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪಿಗಳು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ : ಕಳೆದ ಜನವರಿ 2 ರಂದು ದೇವನಹಳ್ಳಿಯ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ಹೊರವಲಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ದುಷ್ಕರ್ಮಿಗಳು ಶವದ ಗುರುತು ಸಿಗದಂತೆ ಮುಖವನ್ನು ಮಚ್ಚಿನಿಂದ ಕೊಚ್ಚಿದ್ದರು. ಅಲ್ಲದೆ ಎರಡು ಕೈಗಳಲ್ಲಿನ ಹತ್ತು ಬೆರಳುಗಳನ್ನು ತುಂಡರಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು 22 ದಿನಗಳ ಬಳಿಕ ಶವದ ಗುರುತು ಪತ್ತೆ ಮಾಡಿ, ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಪ್ರಕರಣದ ಸುಳಿವು ನೀಡಿದ ಕತ್ತರಿಸಿದ ಕೈ ಬೆರಳು : ಇನ್ನು ಶವದ ಗುರುತು ಪತ್ತೆಯಾಗಬಾರದೆಂದು ಆರೋಪಿಗಳು ಮುಖವನ್ನು ಜಜ್ಜಿ ಹಾಕಿದ್ದರು. ಶವದ ಪತ್ತೆಗೆ ಬೆರಳಚ್ಚು ಸಿಗಬಾರದೆಂದು ಹತ್ತು ಬೆರಳುಗಳನ್ನು ಕತ್ತರಿಸಿ ಹಾಕಲಾಗಿತ್ತು. ಕೊಲೆ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಸ್ಥಳದಲ್ಲೇ ಎರಡು ತುಂಡರಿಸಿದ ಬೆರಳುಗಳು ಸಿಕ್ಕಿದ್ದವು. ಈ ಬಗ್ಗೆ ತನಿಖೆ ನಡೆಸಿದ ಫಿಂಗರ್ ಫ್ರಿಂಟ್ ಇನ್ಸ್ಪೆಕ್ಟರ್ ಜಯಲಕ್ಷಮ್ಮ ಅವರ ನೇತೃತ್ವದ ತಂಡ ಎರಡು ಕೈ ಬೆರಳಿನ ಸಹಾಯದಿಂದ ಶವದ ಗುರುತು ಪತ್ತೆ ಮಾಡಲು ಶುರು ಮಾಡಿದರು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ತುಂಡರಿಸಿದ ಎರಡು ಬೆರಳುಗಳ ಬೆರಳಚ್ಚುಗಳನ್ನು ಸಂಗ್ರಹಿಸಲಾಯಿತು. ಈ ಬೆರಳಚ್ಚಿನ ವ್ಯಕ್ತಿ ಯಾವುದಾದರೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನಾ ಎಂಬ ಬಗ್ಗೆ ಪರಿಶೀಲನೆ ನಡೆಸಿದಾಗ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಬದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿಯ ಬೆರಳಚ್ಚಿನೊಂದಿಗೆ ಹೊಂದಾಣಿಕೆಯಾಗಿತ್ತು. ಕೊಲೆಯಾದ ವ್ಯಕ್ತಿ ಮುತ್ಯಾಲಪ್ಪ ಎಂಬುದು ಸಾಬೀತಾಗಿತ್ತು. ಈತನ ಮೇಲೆ 40ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ಕೊಲೆಗೆ 2500 ಸಾವಿರ ರೂಪಾಯಿ ಸುಪಾರಿ : ಕೊಲೆಯಾದ ಮುತ್ಯಾಲಪ್ಪ ಮತ್ತು ವಕೀಲ ನಾಗೇಶ್ ನಡುವೆ ಸಣ್ಣದೊಂದು ವಿಚಾರಕ್ಕೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ನಾಗೇಶ್ ಮುತ್ಯಾಲಪ್ಪನ ಕೊಲೆಗೆ ಸಂಚು ರೂಪಿಸಿದ್ದ. ಅಷ್ಟೇ ಅಲ್ಲದೆ ಮುತ್ಯಾಲಪ್ಪನ ಕೊಲೆ ಮಾಡಲು 2500 ರೂಪಾಯಿ ಸುಪಾರಿ ಹಣವನ್ನು ಆರೋಪಿಗಳಿಗೆ ಕೊಟ್ಟಿದ್ದರು ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. ತಮ್ಮ ಯೋಜನೆಯಂತೆ ಜನವರಿ 1ರಂದು ಸೋಮಶೇಖರ್ ಎಂಬಾತ ಮುತ್ಯಾಲಪ್ಪನನ್ನು ಅನಂತಪುರಕ್ಕೆ ಕರೆತಂದಿದ್ದ. ಅಲ್ಲಿ ರಾಡ್ ನಲ್ಲಿ ಹೊಡೆದು ಮುತ್ಯಾಲಪ್ಪನ ಕೊಲೆ ಮಾಡಲಾಗಿತ್ತು. ನಂತರ ಶವವನ್ನು ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು ಎಂದು ಪ್ರಕರಣದ ಕುರಿತು ಎಸ್​ಪಿ ವಿವರಿಸಿದರು.

ಇದನ್ನೂ ಓದಿ : ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ: ವ್ಯಕ್ತಿಯನ್ನು ಕೊಂದು ಜಮೀನಿನಲ್ಲಿ ಹೂತು ಹಾಕಿದ್ದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.