ನವಿಲುತೀರ್ಥದಿಂದ ನೀರು ಬಿಡುಗಡೆ: ಪ್ರವಾಹ ಭೀತಿ!

author img

By

Published : Sep 13, 2022, 4:09 PM IST

Kn_Bgk_01

ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡಲಾಗಿದ್ದು, ಇದರಿಂದ ಗ್ರಾಮಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆಯೂ ಹಾನಿಯಾಗಿವೆ.

ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಪ್ರವಾಹ ಭೀತಿ ಹೆಚ್ಚಾಗುತ್ತಿದೆ. ನವಿಲು ತೀರ್ಥ ಹಾಗೂ ಹಿಡಕಲ್ ಜಲಾಶಯದಿಂದ‌ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಬಾದಾಮಿ ಹಾಗೂ ಮುಧೋಳ ತಾಲೂಕಿನಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಘಟಪ್ರಭಾ ನದಿಗೆ ಅಂದಾಜು 60 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಆಗಿದ್ದರಿಂದ, ಮುಧೋಳ ತಾಲೂಕಿನ ಮಾಚಕನೂರು ಗ್ರಾಮದಲ್ಲಿರುವ ಹೊಳೆಬಸವೇಶ್ವರ ದೇವಾಲಯ ಜಲಾವೃತಗೊಂಡಿದೆ. ಇದರ ಜೊತೆಗೆ, ಮಿರ್ಜಿ, ಢವಳೇಶ್ವರ ಸೇರಿ ಕೆಲವಡೆ ಚಿಕ್ಕ ಸೇತುವೆಗಳ ಮೇಲೆ ನೀರು ಬಂದು ಸಂಚಾರ ಸ್ಥಗಿತಗೊಂಡಿದೆ.

ಹೆಚ್ಚಿನ ಪ್ರಮಾಣದಲ್ಲಿ ನೀರು‌ ಹರಿದು ಬಂದ ಪರಣಾಮ, ಅಕ್ಕಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಯೂ ಹಾನಿಯಾಗಿದೆ. ಇದರ ಜೊತೆಗೆ ರಬಕವಿ, ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ಕೆಲ ಪ್ರದೇಶದಲ್ಲಿ ನೀರು‌ ನುಗ್ಗಿ ತೊಂದರೆ ಉಂಟಾಗಿದೆ.

ಮಲಪ್ರಭಾ ನದಿಗೂ ಹೆಚ್ಚುವರಿ ನೀರು ಬಿಡುಗಡೆ ಮಾಡಿರುವುದರಿಂದ, ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಬಳಿರುವ ಚಿಕ್ಕ ಸೇತುವೆ ಜಲಾವೃತಗೊಂಡಿದೆ. ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ 12,500 ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದ್ದು, ಇದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ನಿಲ್ಲದೇ, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ಮಲಪ್ರಭಾ ನದಿ ಅಕ್ಕ ಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಕಬ್ಬು, ಜೋಳ ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿದೆ. ಜನ ಜಾನುವಾರ ಸಹಿತ ಸುರಕ್ಷಿತ ತಾಣಗಳಿಗೆ ತೆರಳುವಂತೆ ನದಿ ತೀರದ ಗ್ರಾಮಗಳಿಗೆ ತಹಶೀಲ್ದಾರ ಜೆ.ಬಿ‌.ಮಜ್ಜಗಿ ಸೂಚನೆ ನೀಡಿದ್ದಾರೆ. ಮಳೆ ಕಡಿಮೆಯಾಗಿದ್ದರೂ ಸಹ ಪ್ರವಾಹ ಭೀತಿ ನಿಲ್ಲುತ್ತಿಲ್ಲ.

ಬೆಳಗಾವಿ ಪಶ್ಚಿಮ ಘಟದಲ್ಲಿ ಮಳೆಯಾಗಿ, ಜಲಾಶಯ ತುಂಬಿ ಹರಿಯುತ್ತಿರುವ ಪರಿಣಾಮ ಬಾದಾಮಿ ಹಾಗೂ ಮುಧೋಳ ತಾಲೂಕಿನಲ್ಲಿರುವ ಕೆಲ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ, ತೊಂದರೆ ಪಡುವಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು‌ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ.. ಉತ್ತರ ಕರ್ನಾಟಕಕ್ಕೂ ಮುನ್ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.