ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆ

author img

By

Published : Sep 11, 2022, 5:30 PM IST

ವಿಪಕ್ಷ ನಾಯಕ ಸಿದ್ದರಾಮಯ್ಯ

ಜನರ ಮನಸ್ಸನ್ನು ಒಗ್ಗೂಡಿಸುವುದು ಬಹಳ ಮುಖ್ಯವಾಗಿದೆ. ಜನ ಬಹಳ ಆತಂಕದಲ್ಲಿ ಭಯದಿಂದ ಬದುಕುವ ವಾತವರಣವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಾಗಲಕೋಟೆ: ಬಿಜೆಪಿ ಮಿನಿಸ್ಟರ್​ಗಳ ಡ್ಯಾನ್ಸ್​ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿ, ಥೋ.. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾದಾಮಿ ತಾಲೂಕಿನಲ್ಲಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯನವರ ಪ್ರವಾಹ ಪೀಡಿತ ಪ್ರದೇಶವಾಗಿರುವ ಚೊಳಚಗುಡ್ಡ ಗ್ರಾಮದ ಸೇತುವೆ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತ, ಜನರು ಪ್ರವಾಹದಿಂದ ಸಾಯ್ತಿದ್ದಾರೆ, ನರಳ್ತಿದ್ದಾರೆ. ಆದ್ರೆ ಬಿಜೆಪಿಯವರು ಡಾನ್ಸ್ ಮಾಡುತ್ತಾರೆ. ಅವರಿಗೆ ಜನರ ಬಗ್ಗೆ ಸ್ವಲ್ಪವಾದ್ರೂ ಕಾಳಜಿ, ಮಾನ ಮರ್ಯಾದೆ ಇದೆಯಾ? ಎಂದು ಕಿಡಿಕಾರಿದರು. ಸಂತೋಷದ ಕಾಲಾನಾ ಇದು, ಖುಷಿಪಡೋ ಕಾಲಾನಾ ಇದು?. ಮೊನ್ನೆಯಷ್ಟೇ ಪಾಪ, ಉಮೇಶ ಕತ್ತಿ ಮೃತಪಟ್ಟಿದ್ದಾರೆ. ಇವರಿಗೆ ಸ್ವಲ್ಪವಾದರೂ ಜವಾಬ್ದಾರಿ ಅನ್ನೋದೆ ಇಲ್ಲ. ಇವರೆಲ್ಲಾ ಬೇಜವಾಬ್ದಾರಿ ಮಂತ್ರಿಗಳು ಎಂದು ಹರಿಹಾಯ್ದರು.

ಭಯದಿಂದ ಬದುಕುವ ವಾತವರಣವಿದೆ: ಇದೇ ಸಮಯದಲ್ಲಿ ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಮೃತಿ ಇರಾನಿಗೆ ಪಾಪ ಜವಾಬ್ದಾರಿ ಇಲ್ಲ. ಇಂದು ಜನರನ್ನು ಒಗ್ಗೂಡಿಸುವ ಅಗತ್ಯವಿದೆ. ದೇಶದ ಐಕ್ಯತೆ ಬಹಳ ಮುಖ್ಯ. ಜನರ ಮನಸ್ಸನ್ನು ಒಗ್ಗೂಡಿಸುವುದು ಬಹಳ ಮುಖ್ಯವಾಗಿದೆ. ಜನ ಬಹಳ ಆತಂಕದಲ್ಲಿ ಭಯದಿಂದ ಬದುಕುವ ವಾತಾವರಣವಿದೆ. ಅದಕ್ಕೆ ಜನರ ಮನಸ್ಸುಗಳನ್ನ ಒಗ್ಗೂಡಿಸುವುದಕ್ಕೆ ನಿಮ್ಮ ಜೊತೆ ನಾವಿದ್ದೇವೆ ಅನ್ನೋದಕ್ಕೆ ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆ ಇದೆ. ಇದೆಲ್ಲ ಜನರಿಗೆ ಗೊತ್ತಾಗಬೇಕಲ್ಲ. ಜನರಿಗೆ ಜಾಗೃತಿ ಮೂಡಿಸುವುದಕ್ಕೆ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ ಎಂದು ಹೇಳಿದರು.

ಅಧಿಕಾರದಲ್ಲಿ ತನಿಖೆ ಮಾಡಿಸಬೇಕಿತ್ತು: ಇದಕ್ಕೂ ಮುನ್ನ ಬಾದಾಮಿಯಲ್ಲಿ ಮಾತನಾಡಿದ‌ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರದ ಅವಧಿಯ ಹಗರಣಗಳನ್ನೆಲ್ಲ ಬಯಲಿಗೆಳೆಯುತ್ತೇವೆ ಎಂದ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ಅವರಿಗೆ 40% ಸರ್ಕಾರ ಅನ್ನುವುದಕ್ಕೆ ಶುರುಮಾಡಿದ್ವಲ್ಲ ಅದಕ್ಕೆ ಇವರೆಲ್ಲ ಹೀಗೆ ಹೇಳೋಕೆ ಶುರುಮಾಡಿದ್ದಾರೆ. ಇವರು ಅಧಿಕಾರಕ್ಕೆ ಬಂದು ಎಷ್ಟು ದಿನ ಆಯ್ತು. ತನಿಖೆ ಮಾಡಬೇಡಿ ಎಂದು ನಾವು ಕೈ ಹಿಡ್ಕೊಂಡಿದ್ವಾ ಇವರನ್ನಾ. ಯಾರಿಗೆ ಬ್ಲ್ಯಾಕ್ ಮೇಲ್ ಮಾಡ್ತೀರಿ. ನೀವು ಎಂದು ಗರಂ ಆಗಿ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು. ಮೂರು ವರ್ಷದಿಂದ ನೀವೇ ಇದ್ರಲ್ಲ ಅಧಿಕಾರದಲ್ಲಿ ತನಿಖೆ ಮಾಡಿಸಬೇಕಿತ್ತು ಎಂದರು.

ಭ್ರಷ್ಟಾಚಾರ ವ್ಯಾಪಕವಾಗಿದೆ: ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡಿ ಅರ್ಕಾವತಿ ಹಗರಣ ಹಾಗೂ ಸೋಲಾರ್ ಹಗರಣ ಬಯಲಿಗೆಳೆಯುತ್ತೇವೆಂಬ ಬಿಜೆಪಿ ನಾಯಕರ ಹೇಳಿಕೆ ಉತ್ತರಕ್ಕೆ ಸಿದ್ದರಾಮಯ್ಯನವರು ವ್ಯಂಗ್ಯವಾಡಿದರು. ಇದು ಜನರ ಮನಸ್ಸನ್ನು ಡೈವರ್ಟ್ ಮಾಡೋಕೆ ಬಳಸುತ್ತಿರುವ ತಂತ್ರ ಇದು. ಭ್ರಷ್ಟಾಚಾರ ಬಹಳ ವ್ಯಾಪಕವಾಗಿ ಹಬ್ಬಿದೆ. ಅದರ ಬಗ್ಗೆ ಧ್ವನಿ ಎತ್ತುತ್ತೇವೆ ಅಂತಾ ಹೇಳಿದ್ದಿವಲ್ಲ, ಅದಕ್ಕೆ ಜನರ ಅಟೆನ್ಶನ್ ಡೈವರ್ಟ್ ಮಾಡಲು ಇವೆಲ್ಲ ಹೇಳ್ತಿದ್ದಾರೆ. ನಾವು ಇವರನ್ನ ಹಿಡ್ಕೊಂಡಿದ್ದೀವಾ, ಸರ್ಕಾರ ಮಾಡ್ತಿರೋರು ಇವರೇ ಅಲ್ವಾ? ಅರ್ಕಾವತಿದಾದ್ರೂ ಹೇಳಬಹುದು. ಸೋಲಾರ್​ದಾದ್ರೂ ಹೇಳಬಹುದು ಎಂದು. ತನಿಖೆ ಮಾಡಿ, ಯಾರು ಬೇಡ ಅಂದೋರು ಎಂದು ಸವಾಲು ಹಾಕಿದರು.

ಐದು ವರ್ಷ ಅಧಿಕಾರದಲ್ಲಿ ಇದ್ದೆವು: 2006 ರಿಂದ ಇವರೇ ಅಧಿಕಾರದಲ್ಲಿರೋದು. ನಾವು ಐದು ವರ್ಷ ಮಾತ್ರ ಇದ್ವಿ. 2006 ರಿಂದ ಇಲ್ಲಿಯವರೆಗೂ ಎಲ್ಲವನ್ನು ತನಿಖೆ ಮಾಡಿಸೋಣ. ಇವರು ಯಾವಾಗಿಂದ ಅಧಿಕಾರಕ್ಕೆ ಬಂದರೋ ಅವಾಗಿನಿಂದ ತನಿಖೆ ಮಾಡಿಸೋಣ. ಹಗರಣಗಳ ತನಿಖೆ ಬಗ್ಗೆ ಬಿಜೆಪಿಗರಿಗೆ ಸಿದ್ದರಾಮಯ್ಯ ನೇರ ಸವಾಲು ಹಾಕಿ, ರಾಜ್ಯದ ಜನರಿಗೆ ಸತ್ಯ ಗೊತ್ತಾಗ್ಲಿ. 2006 ರಿಂದ ಇವರು 16 ವರ್ಷ ಅಧಿಕಾರದಲ್ಲಿ ಇದ್ದಾರೆ. ಮಧ್ಯ ನಾವು‌ ಐದು ವರ್ಷ ಅಧಿಕಾರದಲ್ಲಿ ಇದ್ದೆವು. ಎಲ್ಲವೂ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಓದಿ: ಸಾಧನೆ ವಿವರಿಸುವ ಬದಲು ಕಾಂಗ್ರೆಸ್ ವಿರುದ್ಧ ಟೀಕೆ ಹೆಚ್ಚಾಗಿ ಕೇಳಿ ಬಂತು: ಪ್ರಿಯಾಂಕ್​ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.