ನಾವು ಯಾರೂ ಗೆದ್ದೆತ್ತಿನ ಬಾಲ ಹಿಡಿಯಲಿಕ್ಕೆ ಹೋಗಿಲ್ಲ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

author img

By

Published : Jan 24, 2023, 4:14 PM IST

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ರಥಯಾತ್ರೆ ಕಾರ್ಯಕ್ರಮ ನಡೆದಿದೆ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಮಾತನಾಡಿದರು

ಬಾಗಲಕೋಟೆ: ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕಾಗಿ ಸೋತು ಎತ್ತಿನ ಬಾಲ ಹಿಡಿಯಲು ಬಂದಿದ್ದವು ವಿನಹ, ನಾವು ಯಾರು ಗೆದ್ದೆತ್ತಿನ ಬಾಲ ಹಿಡಿಯಲಿಕ್ಕೆ ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ವಾಸ್ತವ್ಯ ಇದ್ದ ಆಡಗಲ್ಲ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಇದೇ ಗೋವಿಂದ ಕಾರಜೋಳ ಕೈ ಮುಗಿದು ದೇವೇಗೌಡರ ಬಳಿ ಸರ್ಕಾರ ಮಾಡೋಣ ಅಂತಾ ದುಂಬಾಲು ಬಿದ್ದಿದ್ದರು ಎಂದರು. ನಾನು ಯಾರ ಬಳಿಯೂ ಹೋಗಿ ದುಂಬಾಲು ಬಿದ್ದಿಲ್ಲ. ಆಗ ಎಂ ಪಿ ಪ್ರಕಾಶ್ ಅವರಿಗೆ ಸಿಎಂ ಆಗೋಕೆ ಹೇಳಿದ್ದೆ. ಆದ್ರೆ ಅವರು ಒಪ್ಪಿಲ್ಲ ಎಂದು ತಿರುಗೇಟು ನೀಡಿದರು.

ಇದೇ ಸಮಯದಲ್ಲಿ ಮಾತನಾಡಿದ ಅವರು, ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ರಥಯಾತ್ರೆ ಕಾರ್ಯಕ್ರಮ ನಡೆದಿದೆ. ಈ ಜಿಲ್ಲೆಯ ಉಳಿದ ಅಭ್ಯರ್ಥಿಗಳ ತೀರ್ಮಾನ ಆಗಿಲ್ಲ. ಹಾಗಾಗಿ ಉಳಿದ ಕಡೆ ಯಾತ್ರೆ ನಡೆಸಿಲ್ಲ. ಇಂದಿನಿಂದ ರಾಯಚೂರು, ಬಳಿಕ ಬಳ್ಳಾರಿ, ಕೊಪ್ಪಳ, ಹರಿಹರದಲ್ಲಿ ಯಾತ್ರೆ ನಡೆಯಲಿದೆ. ಮುಂದಿನ ಭಾಗದಲ್ಲಿ ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಭಾಗದಲ್ಲಿ ಸಮಯ ನಿಗದಿ ಆಗಿದೆ ಎಂದು ಹೆಚ್​ಡಿಕೆ ವಿವರಿಸಿದರು.

ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳಿಲ್ಲ: ಈಗಿನ ಬೆಳವಣಿಗೆಯನ್ನು ಗಮನಿಸಿದಾಗ ಎರಡೂ ರಾಷ್ಟ್ರೀಯ ಪಕ್ಷಗಳು, ಉತ್ತರ ಕರ್ನಾಟಕವನ್ನು ಗುತ್ತಿಗೆ ತೆಗೆದುಕೊಂಡ ರೀತಿ ನಡವಳಿಕೆ ಇದೆ. ಉ.ಕ. ಭಾಗದ ಹಲವಾರು ಕಡೆಗಳಲ್ಲಿ ಜನರು ದೊಡ್ಡ ದೊಡ್ಡ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಪ್ರಮುಖವಾಗಿ ನೋಡೋದಿಕ್ಕೆ ಸುಮಾರಾಗಿವೆ. ರಸ್ತೆಗಳು ಯಾವುವು ಸರಿಯಿಲ್ಲ ಎಂಬುದನ್ನು ಯಾತ್ರೆಯಲ್ಲಿ ಕಂಡಿದ್ದೇನೆ. ಅಭಿವೃದ್ಧಿ ತೋರಿಸ್ತಿದ್ದಾರೆ. ಹಣ ಎಲ್ಲಿಗೆ ಹೋಗ್ತಿದೆಯೋ ಗೊತ್ತಿಲ್ಲ. ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಹಳ್ಳಿಗಳ ಹೆಣ್ಣುಮಕ್ಕಳ ಒಂದೇ ಒಂದು ಬೇಡಿಕೆ ಶೌಚಾಲಯ. ಬಯಲು ಶೌಚ ಮುಕ್ತ ಅಂತಾ ರೆಕಾರ್ಡ್​ನಲ್ಲಿ ತೋರಿಸ್ತಿದ್ದಾರೆ. ಆದ್ರೆ ಯಾವುದೇ ಶೌಚಾಲಯ ಕಾಣುತ್ತಿಲ್ಲ. ಈಗ ಜಲಮಿಷನ್ ಅಂತೇಳಿ 2-3 ಸಾವಿರ ಕೋಟಿ ಯೋಜನೆ ಅಂತಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಶುದ್ಧ ನೀರು ಕೊಡುವಲ್ಲಿ ಸರ್ಕಾರಗಳು ವಿಫಲ: ಜಲಮಿಷನ್ ಹೆಸರಿನಲ್ಲಿ ಜೋಡಿಸಿರುವ ಪೈಪ್​ಗಳಲ್ಲಿ ಟ್ಯಾಪ್​ಗಳೇ ಇಲ್ಲ. ಜಲಮಿಷನ್ ಯೋಜನೆಯಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಯೋಜನೆಯಡಿ ಶುದ್ಧ ನೀರು ಕೊಡುವಲ್ಲಿ ಸರ್ಕಾರಗಳು ವಿಫಲವಾಗಿದೆ. ಎಲ್ಲ ಊರುಗಳು ಧೂಳುಮಯ ಆಗಿವೆ. ಸಿಎಂ ಇದ್ದಾಗ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ ಎಂಬ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರು ಕಿಡಿಕಾರಿದ್ದು, ಜೆಡಿಎಸ್ ಪಕ್ಷ ಗೆದ್ದೆತ್ತಿನ ಬಾಲ ಹಿಡಿಯೋರು ಅಂತಾ ಅವರೇ ಹೇಳಿದ್ದಾರೆ.

ಎತ್ತಿನ ಹೊಳೆಗೂ ವಿರೋಧ ಮಾಡಿಲ್ಲ : ನಾನು ಗೆದ್ದೆತ್ತಿನ ಬಾಲ ಹಿಡಿದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಸೋತೆತ್ತಿನ ಬಾಲ ಹಿಡಿದು ಬಂದವರು ಎಂದ ಅವರು, 2013ರಲ್ಲಿ ನೀವೇ ಸರ್ಕಾರ ಮಾಡಿದಿರಿ, ಆಗ ಸುವರ್ಣ ಗ್ರಾಮ ಕಿತ್ತಾಕಿದ್ರಿ ಎಂದರು. ಯಾವುದೇ ಅನ್​ಕಂಡಿಷನ್ ಇಲ್ಲದೆ ಸಪೋರ್ಟ್ ಮಾಡಿದ್ದೇವೆ ಎಂದ ಸಿದ್ದರಾಮಯ್ಯನವರಿಗೆ, ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿ, ನಿಮಗೆ ನಾಚಿಕೆ ಆಗಲ್ವ ಸುಳ್ಳು ಹೇಳೋಕೆ. ಪ್ರೋಟೊಕಾಲ್ ಇರ್ತಕ್ಕಂತದ್ದು ಏನು? ಸಿಎಂ ಇದ್ದಾಗ ನನ್ನ ಗುಮಾಸ್ತನಂತೆ ಮಾಡಿದರು. ನಾನು ಅವಾಗ ವಿಷಕಂಠನಂತೆ ಇದ್ದೆ. ಇಲಾಖೆಗಳ ರಿವೀವ್ ಮಾಡೋ ಹಾಗಿರಲಿಲ್ಲ ನಾನು. ಕೆಸಿ ವ್ಯಾಲಿ, ಎತ್ತಿನ ಹೊಳೆಗೂ ವಿರೋಧ ಮಾಡಿಲ್ಲ ಎಂದರು.

ಅಭಿವೃದ್ಧಿಗೆ ನಾವು ಯಾವಾಗಲು ಸಪೋರ್ಟ್ ಮಾಡಿದ್ದೀವಿ: ಯಾರ ಕುತ್ತಿಗೆ ಒಡೆದು ಕಿಸೆ ತುಂಬಿಕೊಂಡಿದ್ದೀರಿ ಗೊತ್ತಿಲ್ವ ನಿಮಗೆ. ಅವತ್ತು ಕೆಸಿ ವ್ಯಾಲಿ ಮಾಡಿದ್ದು ನಿಮ್ಮ ಜೇಬು ತುಂಬಿಸೋಕೆ ಎಂದು ಬಿಜೆಪಿ ಬಿ ಟೀಂ ಅಂತಾ ಹೇಳ್ತೀರಿ. ಉತ್ತರ ಕೊಡಿ. ತಾಕತ್ತಿದ್ರೆ ಬನ್ನಿ ಚರ್ಚೆಗೆ. ಅಭಿವೃದ್ಧಿಗೆ ನಾವು ಯಾವಾಗಲು ಸಪೋರ್ಟ್ ಮಾಡಿದ್ದೀವಿ ಎಂದು ಸವಾಲ್ ಹಾಕಿದರು. ಇದೇ ಸಮಯದಲ್ಲಿ ಮಾತನಾಡಿದ ಅವರು, ಸುಧಾಕರ್​ ಬೆಳೆದು ಬಂದ ಪಕ್ಷವನ್ನು ಟೀಕೆ ಮಾಡಬೇಡಿ ಅಂತಾ ರಾಮಲಿಂಗಾರೆಡ್ಡಿ ಉಪದೇಶ ಹೇಳಿದ್ದಾರೆ. ಅಲ್ಲಿ ಹೇಳಬೇಕಲ್ಲಪ್ಪ ಸಿದ್ದರಾಮಯ್ಯ ಅವರಿಗೆ. ನೀವು ಮಾತ್ರ ಅವಕಾಶವಾದಿಗಳಲ್ಲ, ನಾವು ಮಾತ್ರ ಅವಕಾಶವಾದಿಗಳಾ? ಎಂದು ಕುಟುಕಿದರು.

200% ಖಚಿತ 2000 ಉಚಿತ ಅಂತಾ ಹೇಳ್ತೀದಿರಿ. ನೀವೇ ಇಂಧನ ಮಂತ್ರಿ ಇದ್ರಲ್ಲ, ಅವಾಗಲೇ 200 ಯುನಿಟ್ ಫ್ರೀ ಕೊಡಬೇಕಿತ್ತಲ್ಲ ಎಂದು ಡಿ ಕೆ ಶಿವಕುಮಾರ್​ ಅವರಿಗೆ ಟಾಂಗ್ ನೀಡಿದ ಕುಮಾರಸ್ವಾಮಿ. ಗೃಹಣಿಯರಿಗೆ 2000 ಕೊಡಬೇಕಿತ್ತಲ್ಲ ನೀವು. ಜನರು ಸಂಪೂರ್ಣ ಬಹುಮತ‌ ಕೊಟ್ಟಿದ್ರು ಅವತ್ತೇ ಯಾಕ್ ಕೊಡಲಿಲ್ಲ. ಯಾರ ಅಪ್ಪನ ಮನೆಯದು ದುಡ್ಡು ಇದ್ದಿಲ್ಲ. ಕೂಡಬೇಕಿತ್ತು ಎಂದರು.

ಕಾಲ ಪ್ರತಿಯೊಂದಕ್ಕೂ ಉತ್ತರ ಕೊಡುತ್ತೆ: ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಗಾಳ ಹಾಕ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಯಾತಕ್ಕೆ ಗಾಳ ಹಾಕ್ಲಿ, ಎರಡು ಪಕ್ಷಗಳ, ಆಪರೇಷನ್ ನನಗೆ ಯಾವುದೇ ಸಮಸ್ಯೆ ಇಲ್ಲ. ಯಾರೇ ಹೋದ್ರು ನನಗೆ ಸಮಸ್ಯೆ ಆಗಲ್ಲ. ಕಾಲ ಪ್ರತಿಯೊಂದಕ್ಕೂ ಉತ್ತರ ಕೊಡುತ್ತೆ. ನಾನು ಈ ಬಾರಿ ಜನರ ಸಂಪೂರ್ಣ ಬೆಂಬಲ ಕೇಳಿದ್ದೀನೆ ಎಂದು ಹೇಳಿದರು.

ಭಾವನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ದೇಶದ ವ್ಯವಸ್ಥೆ ಎಲ್ಲಿ ಬೇಕಾದರೂ ನಿಲ್ಲುವ ಹಕ್ಕಿದೆ. ಆದ್ರೆ ರಾಜ್ಯದ ಜನತೆಗೆ ಸಂದೇಶ ಕೊಡುವ ದೃಷ್ಠಿಯಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಏನು ಕ್ರಮ ತಗೊಬೇಕು ಅದನ್ನ ಪಕ್ಷದ ತೀರ್ಮಾನದಲ್ಲಿ‌ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ನಂತರ ಧಾರ್ಮಿಕ ಕೇಂದ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬನಶಂಕರಿ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದುಕೊಂಡರು. ಜಾತ್ರೆ ನಡೆಯುತ್ತಿರುವ ಹಿನ್ನಲೆ ದೇವಿಯ ದರ್ಶನ ಪಡೆದುಕೊಂಡರು. ಬಳಿಕ ಹಲಕುರ್ಕಿ ಗ್ರಾಮದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ತೆರಳಿದರು. ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟ ಸ್ಥಳ ಭಾಗವಹಿಸಿ, ಸನ್ಮಾನ ಸ್ವೀಕರಿಸಿಕೊಂಡರು.

ವಿಮಾನ ನಿಲ್ದಾಣದ ಅವಶ್ಯಕತೆ ಇಲ್ಲ: ಈ ಸಂದರ್ಭದಲ್ಲಿ ರೈತರ ಸಮಸ್ಯೆಯನ್ನು ಯುವ ಮುಖಂಡ ಪ್ರಕಾಶ ನಾಯ್ಕರ ಮಾಹಿತಿ‌ ನೀಡಿದರು. ನಂತರ ಕುಮಾರಸ್ವಾಮಿ ಅವರು ಮಾತನಾಡಿ, ಭೂ ಸ್ವಾಧೀನ ಅಧಿಕಾರಿಗಳು ವಿರೋಧದ ವರದಿ ನೀಡಿದ್ದಾರೆ. ನೀವು ಯಾರು ಅಂಜುವ ಅವಶ್ಯಕತೆ ಇಲ್ಲ. ಇನ್ನೇನು ಎಲೆಕ್ಷನ್ ಘೋಷಣೆ ಆಗುತ್ತೆ. ಆಗ ಏನೂ ಮಾಡಕ್ಕಾಗಲ್ಲ. ಈಗ ವಿಜಯಪುರದಲ್ಲಿ ವಿಮಾನ ನಿಲ್ದಾಣ ರೆಡಿ ಆಗ್ತಿದೆ. ಹಾಗಾಗಿ ಇಲ್ಲಿ ವಿಮಾನ ನಿಲ್ದಾಣದ ಅವಶ್ಯಕತೆ ಇಲ್ಲ ಎಂದರು.

ಬನಶಂಕರಿ ಇಚ್ಛೆಯಂತೆ ರೈತರ ಸರ್ಕಾರ ಬರುತ್ತೆ: ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಿಸುವ ಜವಾಬ್ದಾರಿ ನಮ್ದು. ಯಾರ ಒತ್ತಡಕ್ಕೂ, ಹಣಕ್ಕೆ ಆಸೆಬಿದ್ದು ಸಹಿ ಹಾಕಬೇಡಿ. ನಿಮ್ಮಲ್ಲಿ ಒಡಕು ಬರಬಾರದು. ನಿಮ್ಮ ಜಮೀನುಗಳನ್ನು ನಿಮಗೆ ಕೊಡಿಸ್ತೀವಿ. ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಭೂಮಿ ನಿಮಗೆ ಕೊಡಿಸ್ತೀವಿ. ನೀರಾವರಿ ಸೌಲಭ್ಯವನ್ನು ನಾವು ಮಾಡಿಕೊಡ್ತೀವಿ. ನಿಮ್ಮ ಆಶೀರ್ವಾದ, ಬನಶಂಕರಿ ಇಚ್ಛೆಯಂತೆ ರೈತರ ಸರ್ಕಾರ ಬರುತ್ತೆ. ನಿಮ್ಮನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಮಗಿದೆ. ಯಾವುದೇ ಕಾರಣಕ್ಕೂ ಹೆದರಬೇಡಿ, ನಿಮ್ಮ ಭೂಮಿ ನಿಮಗೆ ಉಳಿಸಿಕೊಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.

ಓದಿ : ಆರ್.ಡಿ.ಪಾಟೀಲ್​ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.