ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮುರುಗೇಶ ನಿರಾಣಿ ವಾಗ್ದಾಳಿ

author img

By

Published : Apr 16, 2022, 1:20 PM IST

Updated : Apr 16, 2022, 3:35 PM IST

minister-murugesh-nirani-spoke-against-laxmi-hebbalkar

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಸಣ್ಣ ಕೈಗಾರಿಕಾ ಸಚಿವರಾದ ನಿರಾಣಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ : ಈಶ್ವರಪ್ಪನವರು ನಿಷ್ಠಾವಂತ ಕಾರ್ಯಕರ್ತರು, ಅವರ ಮೇಲೆ ಬಂದಿರುವ ಆಪಾದನೆ ಸತ್ಯಕ್ಕೆ ದೂರವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರಗೇಶ ನಿರಾಣಿ ಹೇಳಿದ್ದಾರೆ. ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ವಿರುದ್ಧ ಆಪಾದನೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. 5 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿ ಮಾಡಬೇಕಾದರೆ ಟೆಂಡರ್ ಪ್ರಕ್ರಿಯೆ ನಡೆಸಲೇಬೇಕು. ಅಂತಹ ಯಾವುದೇ ಪ್ರಕ್ರಿಯೆ ಇಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.

ನಾನು ಅಲ್ಲಿನ ಶಾಸಕಿಗೆ ಪ್ರಶ್ನೆ ಮಾಡುತ್ತೇನೆ. ಸಾವಿರಾರು ಕೋಟಿ ತಂದಿದ್ದೀನಿ, ಕೆಲಸ ಮಾಡಿದ್ದೀನಿ ಎಂದು ಹೇಳಿಕೊಂಡು ಓಡಾಡುತ್ತಿರುವವರು, ನಿನ್ನ ಕ್ಷೇತ್ರದಲ್ಲಿ ನಾಲ್ಕು ಕೋಟಿ ರೂಪಾಯಿ ಕೆಲಸ ಮಾಡುವಾಗ ನೀನು ಯಾಕೆ ಸಪೋರ್ಟ್ ಮಾಡ್ಲಿಲ್ಲ? ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಏಕವಚನದಲ್ಲಿ ತಿರುಗೇಟು ನೀಡಿದ್ದಾರೆ. ಈಶ್ವರಪ್ಪನವರಿಗೆ ರಾಜ್ಯದ ಜವಾಬ್ದಾರಿ ಇರುತ್ತದೆ. ಈ ಸಣ್ಣ ಪುಟ್ಟ ಕೆಲಸಗಳು ಗಮನಕ್ಕೆ ಬಂದಿರಲಿಕ್ಕಿಲ್ಲ. ಯಾರ್ಯಾರೋ ಫೋಟೋ ತೆಗೆಸಿಕೊಳ್ಳುವಾಗ ಇವರು ತೆಗೆಸಿಕೊಂಡಿರಬಹುದು ಎಂದು ಸಚಿವ ನಿರಾಣಿ ಹೇಳಿದ್ದಾರೆ.

ರಾಜ್ಯ ಅಲ್ಲ, ರಾಷ್ಟ್ರೀಯ ನಾಯಕರು ಅಂತ ಹೇಳಿಕೊಂಡು ತಿರುಗಾಡುತ್ತಿರುವವರು ಅವರು, ಇದನ್ನು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿ. ನಿನ್ನ ಕ್ಷೇತ್ರದಲ್ಲಿ ಕೆಲಸ ಆಗಿದ್ದಾಗ, ನೀನೇ ಅವರನ್ನು ಕರೆದುಕೊಂಡು ಹೋಗಿ ಬಿಲ್ ಕೊಡಿಸೋ ಜವಾಬ್ದಾರಿ ತೆಗೆದುಕೊಳ್ಳಬಹುದಿತ್ತು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಾಂಗ್‌ ನೀಡಿದರು. ಜೊತೆಗೆ ಶವ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಶವವನ್ನು ಇಟ್ಟುಕೊಂಡು ರಾಜಕೀಯ ಮಾಡೋಕೆ ಪ್ರಯತ್ನ ಮಾಡಿದರು. ಆದರೆ ಮನೆಯವರು ಮತ್ತು ಊರಿನವರು ಇದಕ್ಕೆ ಆಸ್ಪದ ಕೊಟ್ಟಿಲ್ಲ. ಕ್ಷೇತ್ರದ ಶಾಸಕಿಯಾಗಿ ನಾಲ್ಕು ಕೋಟಿ ಕೊಡಿಸಲು ಸಾಧ್ಯವಾಗದ ನೀನು ಪ್ರಕರಣದ ನೈತಿಕ ಹೊಣೆಗಾರಿಕೆ ಹೊರಬೇಕು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಈಗಾಗಲೇ ಎಫ್ಐಆರ್ ಆಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದೆ. ಬರುವ ದಿನಗಳಲ್ಲಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮುರುಗೇಶ ನಿರಾಣಿ ವಾಗ್ದಾಳಿ

ಕಾಂಗ್ರೆಸ್ ಒತ್ತಾಯ ನಿರಾಣಿ ತಿರುಗೇಟು: ಈಶ್ವರಪ್ಪನವರನ್ನು ಬಂಧಿಸಲು ಕಾಂಗ್ರೆಸ್ ಒತ್ತಾಯಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ನಿರಾಣಿ, ಆರೋಪ ಮಾಡಿದ ಕೂಡಲೇ ಬಂಧಿಸಬೇಕೆಂದರೆ ಯಾವ ನ್ಯಾಯ, ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಅವರು ರಾಜೀನಾಮೆ ನೀಡಿದ್ದಾರೆ. ಅದರಲ್ಲಿ ಏನೂ ಇಲ್ಲ, ಡಿಕೆಶಿ ಮತ್ತು ಸಿದ್ದರಾಮಯ್ಯ ಹಿರಿಯರು. ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ. ರಾಜೀನಾಮೆ ಕೊಟ್ಟ ಮೇಲೂ, ಅರೆಸ್ಟ್ ಮಾಡಬೇಕು ಅಂದ್ರೆ ಅವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬೇಕು. ತಪ್ಪು ಮಾಡಿದ ಮೇಲೆ ಏನಾದರೂ ಮಾಡಲಿ. ತನಿಖೆ ಮಾಡಲು ಬೇಕಾದರೆ ಸಲಹೆ ಕೊಡಲಿ ಎಂದು ಹೇಳಿದ್ದಾರೆ. ತನಿಖೆ ನಡೆದ ಮೇಲೆ ನೂರಕ್ಕೆ ನೂರು ಈಶ್ವರಪ್ಪನವರು ತಪ್ಪು ಮಾಡಿಲ್ಲ ಅನ್ನೋದು ಸಾಬೀತಾಗುತ್ತದೆ ಎಂದು ಮುರುಗೇಶ ನಿರಾಣಿ ಭರವಸೆ ವ್ಯಕ್ತಪಡಿಸಿದ್ದಾರೆ.

ಓದಿ : ಈಶ್ವರಪ್ಪ ತಲೆದಂಡದ ನಂತರ ಕಾಂಗ್ರೆಸ್​ ಮುಂದಿನ ಹೋರಾಟ?

Last Updated :Apr 16, 2022, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.