ನಡಾಲ್​ ಜೊತೆಗೂಡಿ ಅಂತಿಮ ಪಂದ್ಯವಾಡಿದ ಫೆಡರರ್​.. ಸೋಲಿನೊಂದಿಗೆ ಟೆನ್ನಿಸ್​ ಅಂಗಳಕ್ಕೆ ಭಾವನಾತ್ಮಕ ವಿದಾಯ

author img

By

Published : Sep 24, 2022, 9:54 AM IST

Updated : Sep 24, 2022, 10:07 AM IST

roger-federer-played-in-his-last-competitive-match

ಸ್ವಿಟ್ಜರ್ಲೆಂಡ್‌ನ ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್ ಕೊನೆಯ ಪಂದ್ಯದಲ್ಲಿ ಸೋಲಿನೊಂದಿಗೆ ವೃತ್ತಿಜೀವನವನ್ನು ಮುಗಿಸಿದ್ದಾರೆ. ಸ್ಪೇನ್​​ನ ದಿಗ್ಗಜ ರಾಫೆಲ್ ನಡಾಲ್ ಜೊತೆಗೆ ಫೆಡರರ್​ ಡಬಲ್ಸ್‌ ಪಂದ್ಯವನ್ನಾಡಿದರು.

ಲಂಡನ್: ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಸ್ವಿಟ್ಜರ್ಲೆಂಡ್‌ನ ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್ ಶುಕ್ರವಾರ ಕೊನೆಯ ಪಂದ್ಯವನ್ನಾಡಿದರು. ಸ್ಪೇನ್​​ನ ದಿಗ್ಗಜ ರಾಫೆಲ್ ನಡಾಲ್ ಜೊತೆಗೂಡಿ ಡಬಲ್ಸ್‌ ಪಂದ್ಯವನ್ನಾಡಿದ ಫೆಡರರ್ ಸೋಲಿನೊಂದಿಗೆ ವೃತ್ತಿಜೀವನಕ್ಕೆ ಅಂತ್ಯ ಹಾಡಿದರು.

ಲಂಡನ್‌ನಲ್ಲಿ ನಡೆಯುತ್ತಿರುವ ಲೇವರ್ ಕಪ್ ಟೂರ್ನಿಯ ಡಬಲ್ಸ್​ ಹಣಾಹಣಿಯಲ್ಲಿ ಫೆಡರರ್-ನಡಾಲ್ ಜೋಡಿ ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಮತ್ತು ಜಾಕ್ ಸಾಕ್ ವಿರುದ್ಧ 4-6, 7-6(2), 11-9ರಿಂದ ಸೋತರು. ಪಂದ್ಯದ ನಂತರ ಫೆಡರರ್ ಭಾವನಾತ್ಮಕ ನುಡಿಗಳನ್ನಾಡಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಕ್ಷಣದ ವಿಡಿಯೋಗಳು ವೈರಲ್ ಆಗಿವೆ.

Roger Federer played in his last competitive match
ರೋಜರ್ ಫೆಡರರ್ ಭಾವನಾತ್ಮಕ ಕ್ಷಣ

ಫೆಡರರ್ ತಮ್ಮ ಕೊನೆಯ ಪಂದ್ಯದ ಬಳಿಕ ಕಣ್ಣೀರಿಡುತ್ತಿರುವುದನ್ನು ಕಾಣಬಹುದು. ಈ ವೇಳೆ ನಡಾಲ್ ಜೊತೆಗೆ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್, ಆ್ಯಂಡಿ ಮರ್ರೆ ಸೇರಿ ಹಲವು ದಂತಕತೆಗಳು ಕಾಣಿಸಿಕೊಂಡರು. ಫೆಡರರ್ ಎಲ್ಲರನ್ನೂ ಅಪ್ಪಿಕೊಂಡು ಟೆನ್ನಿಸ್​​ಗೆ ವಿದಾಯ ಹೇಳಿದರು.

Roger Federer played in his last competitive match
ರೋಜರ್ ಫೆಡರರ್ ಎತ್ತಿಹಿಡಿದ ಇತರ ಆಟಗಾರರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಇದೊಂದು ಅದ್ಭುತ ದಿನವಾಗಿದೆ. ನಿವೃತ್ತಿ ಬಗ್ಗೆ ನನಗೆ ದುಃಖವಿಲ್ಲ, ಸಂತೋಷವಾಗಿದೆ. ನಾನು ಕೊನೆಯ ಪಂದ್ಯವನ್ನು ಆನಂದದಿಂದ ಆಡಿದ್ದೇನೆ. ರಾಫಾ ಅವರೊಂದಿಗೆ ಕೊನೆಯ ಪಂದ್ಯ ಆಡಿದ್ದೇನೆ. ಇಲ್ಲಿಗೆ ಶ್ರೇಷ್ಠ ಆಟಗಾರರು, ಲೆಜೆಂಡ್ಸ್​ ಬಂದಿದ್ದಾರೆ. ತಮಾಷೆಯೊಂದಿಗೆ ಅಭಿಮಾನಿಗಳು, ಕುಟುಂಬ, ಸ್ನೇಹಿತರ ಎದುರು ಒತ್ತಡವಿಲ್ಲದೆ ಆಡಿದ್ದೇನೆ. ಈ ಪಂದ್ಯ ಆಡಲು ಸಾಧ್ಯವಾಗಿರುವುದು ಬಹಳ ಸಂತಸ ತಂದಿದೆ ಎಂದರು.

Roger Federer played in his last competitive match
ರಾಫೆಲ್ ನಡಾಲ್​ ಜೊತೆ ರೋಜರ್ ಫೆಡರರ್

ಈ ವೇಳೆ ರಾಫೆಲ್ ನಡಾಲ್ ಸೇರಿದಂತೆ ಇತರ ಆಟಗಾರರೂ ಕೂಡ ಭಾವುಕರಾಗಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವವರಲ್ಲಿ ರೋಜರ್ ಫೆಡರರ್(20) ಮೂರನೇ ಸ್ಥಾನದಲ್ಲಿದ್ದಾರೆ. 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ರಾಫೆಲ್ ನಡಾಲ್ ಅಗ್ರಸ್ಥಾನದಲ್ಲಿದ್ದಾರೆ.

Roger Federer played in his last competitive match
ಅಂತಿಮ ಪಂದ್ಯವಾಡಿದ ಫೆಡರರ್

2018ರಲ್ಲಿ ಕೊನೆಯ ಗ್ರ್ಯಾಂಡ್ ಸ್ಲಾಮ್.. ರೋಜರ್ ಫೆಡರರ್ 28 ಜನವರಿ 2018ರಂದು ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಫೈನಲ್​ನಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್ ಅವರನ್ನು ಮಣಿಸಿದ್ದ ರೋಜರ್​​, 20 ಗ್ರ್ಯಾಂಡ್ ಸ್ಲಾಮ್‌ ಗೆದ್ದ ಮೊದಲ ಪುರುಷ ಆಟಗಾರರಾಗಿ ಹೊರಹೊಮ್ಮಿದ್ದರು. ವರ್ಷದ ನಂತರ ರಾಫೆಲ್ ನಡಾಲ್ ಅವರು ಫೆಡರರ್​​​ ದಾಖಲೆ ಮುರಿದರು.

Roger Federer played in his last competitive match
ಟೆನ್ನಿಸ್​ ದಿಗ್ಗಜರೊಂದಿಗೆ ರೋಜರ್ ಫೆಡರರ್

2018ರಲ್ಲಿ ಗ್ರ್ಯಾಂಡ್ ಸ್ಲಾಮ್ ಗೆದ್ದ ಬಳಿಕ ಫೆಡರರ್ ತಮ್ಮ ಹಿಂದಿನ ಲಯದಲ್ಲಿ ಆಡುವಲ್ಲಿ ವಿಫಲರಾದರು. ಗಾಯದಿಂದಾಗಿ ಫೆಡರರ್ ಈ ವರ್ಷ ಒಂದೇ ಒಂದು ಗ್ರ್ಯಾನ್ ಸ್ಲಾಮ್‌ನಲ್ಲಿ ಕೂಡ ಭಾಗವಹಿಸಲು ಸಾಧ್ಯವಾಗಲಿಲ್ಲ. ಫೆಡರರ್ ಕೊನೆಯ ಬಾರಿ 2021ರ ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿದಿದ್ದರು.

ಸೆಪ್ಟೆಂಬರ್ 15ರಂದು ಫೆಡರರ್ ಟೆನ್ನಿಸ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ತಿಳಿಸಿದ್ದರು. ಫೆಡರರ್ 24 ವರ್ಷಗಳಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಅತಿಹೆಚ್ಚು ಪುರುಷರ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದವರು:

1. ರಾಫೆಲ್ ನಡಾಲ್ (ಸ್ಪೇನ್) - 22 (ಆಸ್ಟ್ರೇಲಿಯನ್-2, ಫ್ರೆಂಚ್-14, ವಿಂಬಲ್ಡನ್-2, US-4)

2. ನೊವಾಕ್ ಜೊಕೊವಿಕ್ (ಸರ್ಬಿಯಾ) - 21 (ಆಸ್ಟ್ರೇಲಿಯನ್-9, ಫ್ರೆಂಚ್-2, ವಿಂಬಲ್ಡನ್-7, ಯುಎಸ್-3)

3. ರೋಜರ್ ಫೆಡರರ್ (ಸ್ವಿಟ್ಜರ್ಲೆಂಡ್) - 20 (ಆಸ್ಟ್ರೇಲಿಯನ್-6, ಫ್ರೆಂಚ್-1, ವಿಂಬಲ್ಡನ್-8, US-5)

4. ಪೀಟ್ ಸಾಂಪ್ರಾಸ್ (USA)-14 (ಆಸ್ಟ್ರೇಲಿಯನ್-2, ಫ್ರೆಂಚ್-0, ವಿಂಬಲ್ಡನ್-7, US-5)

Last Updated :Sep 24, 2022, 10:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.