ಮೈದಾನದಲ್ಲಿ ಸೇಡು ತೀರಿಸಿಕೊಳ್ಳುತ್ತೇವೆ : ಇಂಗ್ಲೆಂಡ್-ನ್ಯೂಜಿಲ್ಯಾಂಡ್ ವಿರುದ್ಧ ಗುಡುಗಿದ ರಮೀಜ್​ ರಾಜಾ

author img

By

Published : Sep 21, 2021, 4:58 PM IST

Ramiz Raja

ಸದ್ಯಕ್ಕೆ ನಾವು ವಿಶ್ವಕಪ್‌ಗೆ​ ಹೋಗುತ್ತೇವೆ. ಮೊದಲು ಭಾರತ ನಮ್ಮ ಟಾರ್ಗೆಟ್ ಆಗಿರುತ್ತಿತ್ತು. ಈಗ ಮತ್ತೆರಡು ತಂಡಗಳು ಸೇರಿಕೊಂಡಿವೆ. ಅವು ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್​. ಹಾಗಾಗಿ, ನಿಮ್ಮ ಬಲವನ್ನು ಹೆಚ್ಚಿಸಿಕೊಳ್ಳಿ ಮತ್ತು ನಾವು ಅಲ್ಲಿಗೆ ಸೋಲಲು ಹೋಗುತ್ತಿಲ್ಲ ಎನ್ನುವ ಮನಸ್ಥಿತಿ ಬೆಳಸಿಕೊಳ್ಳಿ. ಯಾಕೆಂದರೆ, ಅವರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಅದಕ್ಕಾಗಿ ಮೈದಾನದಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳೋಣ..

ಲಾಹೋರ್ ​: ಭದ್ರತಾ ಕಾರಣದಿಂದ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿರುವ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಅಸಮಾಧಾನ ಹೊರ ಹಾಕಿರುವ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ, ನಾವು ಅವರನ್ನು ಮೈದಾನದಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯುವ ಕೇವಲ ಒಂದು ಗಂಟೆಯಿರುವಾಗ ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡ ಭದ್ರತಾ ಕಾರಣ ನೀಡಿ ಇಡೀ ಪ್ರವಾಸವನ್ನೇ ರದ್ದುಗೊಳಿಸಿತ್ತು. ಸೋಮವಾರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ತನ್ನ ಮಹಿಳಾ ಮತ್ತು ಪುರುಷ ತಂಡಗಳು ಅಕ್ಟೋಬರ್​ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳವುದಿಲ್ಲ ಎಂದು ಘೋಷಣೆ ಮಾಡಿದ್ದವು.

ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸುವ ಇಸಿಬಿ ನಿರ್ಧಾರ ಪಿಸಿಬಿಯ ತವರಿನ ಆವೃತ್ತಿ ಆಯೋಜನೆಗೆ ಭಾರಿ ಹೊಡೆತ ನೀಡಿದೆ. ಪಿಸಿಬಿ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಅಧ್ಯಕ್ಷ ರಮೀಜ್, "ಇಂಗ್ಲೆಂಡ್​ ಪ್ರವಾಸದಿಂದ ಹಿಂದೆ ಸರಿದಿರುವುದರಿಂದ ನಾನು ತೀವ್ರ ನಿರಾಶೆಗೊಂಡಿದ್ದೇನೆ. ಆದರೆ, ಅದನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಯಾಕೆಂದರೆ, ಈ ಪಾಶ್ಚಿಮಾತ್ಯ ರಾಷ್ಟ್ರಗಳು ಒಂದುಗೂಡುತ್ತವೆ ಮತ್ತು ಪರಸ್ಪರ ಬೆಂಬಲಿಸಲು ಪ್ರಯತ್ನಿಸುತ್ತವೆ ಎಂಬುದು ತಿಳಿದಿತ್ತು" ಎಂದು ಹೇಳಿಕೊಂಡಿದ್ದಾರೆ.

ನೀವು ಭದ್ರತಾ ಬೆದರಿಕೆ ಮತ್ತು ಗ್ರಹಿಕೆಯ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ನಮಗೆ ಕೋಪವಿದೆ. ಯಾಕೆಂದರೆ, ಮೊದಲು ನ್ಯೂಜಿಲ್ಯಾಂಡ್ ತಂಡದವರು ಎದುರಿಸುತ್ತಿರುವ ಬೆದರಿಕೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳದೆ ದೂರ ಹೋಯಿತು. ಈಗ ಇಂಗ್ಲೆಂಡ್ ಈ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಇದು ನಮಗೆ ಒಂದು ಪಾಠವಾಗಿದೆ. ಯಾಕೆಂದರೆ, ಅವರು ಇಲ್ಲಿಗೆ ಭೇಟಿ ನೀಡಿದಾಗ ನಾವು ವಿಶೇಷವಾಗಿ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ನಾವು ಆ ದೇಶಗಳಿಗೆ ಹೋದಾಗ, ಕಠಿಣ ಕ್ವಾರಂಟೈನ್‌ಗೆ ಒಳಗಾಗುತ್ತೇವೆ ಮತ್ತು ಅವರ ಸಲಹೆಗಳನ್ನು ನಾವು ಸಹಿಸಿಕೊಂಡು ಅನುಭವಿಸುತ್ತೇವೆ. ಈಗ ನಮಗೆ ಒಂದು ಪಾಠವಾಗಿದೆ. ಇಂದಿನಿಂದ ನಾವು ನಮ್ಮ ಆಸಕ್ತಿಗೆ ತಕ್ಕಂತೆ ಮಾತ್ರ ಹೋಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪ್ರವಾಸಗಳು ರದ್ದಾಗಿರುವುದರಿಂದ ಮುಂದಿನ ವೆಸ್ಟ್​ ಇಂಡೀಸ್​ ಸರಣಿ ಮೇಲೂ ಹೊಡೆತ ಬಿದ್ದಿದೆ. ಮತ್ತು ಆಸ್ಟ್ರೇಲಿಯಾ ಕೂಡ ಈಗಾಗಲೇ ಮರು ಪರಿಶೀಲಿಸುತ್ತಿದೆ. ಈ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಎಲ್ಲವೂ ಒಂದೇ ಬ್ಲಾಕ್​ನಲ್ಲಿವೆ. ನಾವು ಯಾರಿಗೆ ದೂರು ನೀಡಬಹುದು? ಅವರು ನಮ್ಮವರು ಎಂದು ನಾವು ಭಾವಿಸಿದ್ದೆವು. ಆದರೆ, ಅವರು ನಮ್ಮನ್ನು ತಮ್ಮವರೆಂದು ಒಪ್ಪಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ನಾವು ವಿಶ್ವಕಪ್‌ಗೆ​ ಹೋಗುತ್ತೇವೆ. ಮೊದಲು ಭಾರತ ನಮ್ಮ ಟಾರ್ಗೆಟ್ ಆಗಿರುತ್ತಿತ್ತು. ಈಗ ಮತ್ತೆರಡು ತಂಡಗಳು ಸೇರಿಕೊಂಡಿವೆ. ಅವು ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್​. ಹಾಗಾಗಿ, ನಿಮ್ಮ ಬಲವನ್ನು ಹೆಚ್ಚಿಸಿಕೊಳ್ಳಿ ಮತ್ತು ನಾವು ಅಲ್ಲಿಗೆ ಸೋಲಲು ಹೋಗುತ್ತಿಲ್ಲ ಎನ್ನುವ ಮನಸ್ಥಿತಿ ಬೆಳಸಿಕೊಳ್ಳಿ. ಯಾಕೆಂದರೆ, ಅವರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಅದಕ್ಕಾಗಿ ಮೈದಾನದಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳೋಣ ಎಂದು ರಾಜಾ ತಮ್ಮ ಪಾಕಿಸ್ತಾನ ತಂಡಕ್ಕೆ ತಿಳಿಸಿದ್ದಾರೆ.

ಇದನ್ನು ಓದಿ:ನ್ಯೂಜಿಲ್ಯಾಂಡ್ ಮಹಿಳಾ ಕ್ರಿಕೆಟ್​ ತಂಡಕ್ಕೆ ಬಾಂಬ್​ ಬೆದರಿಕೆ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.