ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾಗೆ ಹಿನ್ನಡೆ; ಏಕದಿನ ಸರಣಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ

ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾಗೆ ಹಿನ್ನಡೆ; ಏಕದಿನ ಸರಣಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ಕೈವಶ ಮಾಡಿಕೊಂಡಿದೆ. ನಿನ್ನೆ ನಡೆದ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಕಂಡಿತು.
ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಮುಂದಿನ ತಿಂಗಳು ಭಾರತದಲ್ಲಿ ಆರಂಭವಾಗಲಿರುವ 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾಗೆ ತೀವ್ರ ಹಿನ್ನಡೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-3ರ ಅಂತರದಲ್ಲಿ ಕಳೆದುಕೊಂಡಿದೆ. ಭಾನುವಾರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 122 ರನ್‌ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿತು.
ಐದು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆಯ ನಂತರ ದ.ಆಫ್ರಿಕಾ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿತು. 2003ರಲ್ಲಿ ಪಾಕಿಸ್ತಾನ ವಿರುದ್ಧ ಹಾಗೂ 2016ರಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಇದೇ ರೀತಿಯಲ್ಲಿ ಸರಣಿ ಗೆದ್ದ ನಿದರ್ಶನವಿದೆ. ಬಾಂಗ್ಲಾದೇಶ (2005ರಲ್ಲಿ ಜಿಂಬಾಬ್ವೆ ವಿರುದ್ಧ) ಮತ್ತು ಆಸ್ಟ್ರೇಲಿಯಾ (2019ರಲ್ಲಿ ಭಾರತದ ವಿರುದ್ಧ) ತಲಾ ಒಂದು ಬಾರಿ ಇಂಥ ದಾಖಲೆ ಮಾಡಿದೆ.
-
🇿🇦 PROTEAS COMEBACK TO WIN THE SERIES
— Proteas Men (@ProteasMenCSA) September 17, 2023
The Proteas have made an excellent comeback to win the #Betway ODI series 3-2 against Australia 🇿🇦🇳🇿
Congratulations to the entire team 👏 #BePartOfIt #SAvAUS pic.twitter.com/33Mc3QGXQV
ಬೃಹತ್ ಗುರಿ ನೀಡಿದ ದಕ್ಷಿಣ ಆಫ್ರಿಕಾ: ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಆತಿಥೇಯ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಲಿಲ್ಲ. ಎರಡನೇ ಓವರ್‌ನಲ್ಲಿ ನಾಯಕ ತೆಂಬಾ ಬಾವುಮಾ (0) ರನೌಟ್ ಆದರು. ಆರಂಭಿಕ ಕ್ವಿಂಟನ್ ಡಿ ಕಾಕ್ 27 ರನ್ ಕಲೆ ಹಾಕಿ, 12ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಮರಳಿದರು. 19ನೇ ಓವರ್‌ನಲ್ಲಿ ವ್ಯಾನ್ ಡೆರ್ ಡಸ್ಸೆನ್ 30 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ 174 ರನ್‌ಗಳ ಬಿರುಸಿನ ಇನಿಂಗ್ಸ್ ಆಡಿದ ಹೆನ್ರಿಚ್ ಕ್ಲಾಸೆನ್ ಆಟ ಈ ಬಾರಿ ಮೌನವಾಗಿತ್ತು. 1 ಎಸೆತದಲ್ಲಿ 6 ರನ್ ಗಳಿಸಿ 24ನೇ ಓವರ್‌ನಲ್ಲಿ ಔಟಾದರು.
ಏಡೆನ್ ಮಾರ್ಕ್ರಾಮ್ (87 ಎಸೆತಗಳಲ್ಲಿ 93 ರನ್) ಕ್ರೀಸಿನ ಒಂದು ತುದಿಯಲ್ಲಿ ನಿಂತು ಭದ್ರವಾಗಿಯೇ ಬ್ಯಾಟ್ ಬೀಸುತ್ತಿದ್ದರು. ಡೇವಿಡ್ ಮಿಲ್ಲರ್ (65 ಎಸೆತಗಳಲ್ಲಿ 63 ರನ್) ಜೊತೆಗೂಡಿ ಐದನೇ ವಿಕೆಟ್‌ಗೆ 109 ರನ್‌ಗಳ ಪ್ರಮುಖ ಜೊತೆಯಾಟವಾಡಿದರು. 42ನೇ ಓವರ್‌ನಲ್ಲಿ ಮಾರ್ಕ್ರಾಮ್ ಮತ್ತು 45ನೇ ಓವರ್‌ನಲ್ಲಿ ಮಿಲ್ಲರ್ ಪೆವಿಲಿಯನ್ ಹಾದಿ ಹಿಡಿದರು. ಮಾರ್ಕೊ ಜಾನ್ಸೆಲೆನ್ (47 ರನ್) ಜತೆಗೂಡಿದ ಮಿಲ್ಲರ್ ಆರನೇ ವಿಕೆಟ್‌ಗೆ 46 ರನ್ ಪೇರಿಸಿದರು. ಫೆಹ್ಲುಕ್ವಾಯೊ 19 ಎಸೆತಗಳಲ್ಲಿ 39 ರನ್ ಕೊಡುಗೆ ನೀಡಿದರು. ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಆ್ಯಡಮ್ ಝಂಪಾ ಮೂರು ಹಾಗೂ ಸೀನ್ ಅಬಾಟ್ ಎರಡು ವಿಕೆಟ್ ಪಡೆದರು. ಡೇವಿಡ್, ನಾಥನ್ ಎಲ್ಲಿಸ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.
-
Australia's leaders are taking plenty of encouragement from their tour of South Africa, including the re-emergence of Marnus Labuschagne's ODI form #SAvAUS pic.twitter.com/kU3sSU6j1v
— cricket.com.au (@cricketcomau) September 18, 2023
ಆಸ್ಟ್ರೇಲಿಯಾ ಇನ್ನಿಂಗ್ಸ್: ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಮಿಚೆಲ್ ಮಾರ್ಷ್ (56 ಎಸೆತಗಳಲ್ಲಿ 71 ರನ್) ಮತ್ತು ಡೇವಿಡ್ ವಾರ್ನರ್ (6 ಎಸೆತಗಳಲ್ಲಿ 10 ರನ್) ಮೊದಲ ವಿಕೆಟ್‌ಗೆ 34 ರನ್‌ಗಳ ಜೊತೆಯಾಟ ನೀಡಿದರು. ನಾಲ್ಕನೇ ಓವರ್‌ನಲ್ಲಿ ವಾರ್ನರ್ ಮತ್ತು ಜೋಶ್ ಇಂಗ್ಲಿಸ್ (0) ಅವರನ್ನು ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ತಮ್ಮ ಬಲೆಗೆ ಕೆಡವಿದರು. ಮಾರ್ಷ್ ಅವರು ಮಾರ್ನಸ್ ಲ್ಯಾಬುಸ್ಚಾಗ್ನೆ (63 ಎಸೆತಗಳಲ್ಲಿ 44 ರನ್) ಅವರೊಂದಿಗೆ ಮೂರನೇ ವಿಕೆಟ್‌ಗೆ 90 ರನ್‌ಗಳ ಜೊತೆಯಾಟ ನೀಡಿದರು. ಮಿಚೆಲ್ 20ನೇ ಓವರ್‌ನಲ್ಲಿ ಮಾರ್ಕೊಗೆ ಬಲಿಯಾದರು. ನಂತರ ಆಸ್ಟ್ರೇಲಿಯಾದ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದವು. ಕೇವಲ 69 ರನ್‌ಗಳನ್ನು ಕಲೆಹಾಕುವಷ್ಟರಲ್ಲಿ ಆಸ್ಟ್ರೇಲಿಯಾ ಕೊನೆಯ ಏಳು ವಿಕೆಟ್ ಕಳೆದುಕೊಂಡಿತು. ಆಸ್ಟ್ರೇಲಿಯಾದ ಇನ್ನಿಂಗ್ಸ್ 34.1 ಓವರ್‌ಗಳಲ್ಲಿ 194 ರನ್‌ಗಳಿಗೆ ಕುಸಿಯಿತು.
ಆಸ್ಟ್ರೇಲಿಯಾದ ಮೂವರು ಆಟಗಾರರು ಮಾತ್ರ 20 ರನ್ ಗಡಿ ದಾಟಲು ಸಾಧ್ಯವಾಯಿತು. ದಕ್ಷಿಣ ಆಫ್ರಿಕಾದ ಪರವಾಗಿ ಮಾರ್ಕೊ 8 ಓವರ್‌ಗಳಲ್ಲಿ 39 ರನ್ ನೀಡಿ 5 ವಿಕೆಟ್ ಪಡೆದರು. ಕೇಶವ್ ಮಹಾರಾಜ್ 9.1 ಓವರ್‌ಗಳಲ್ಲಿ 33 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಫೆಹ್ಲುಕ್ವಾಯೊ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು.
