9 ವರ್ಷಗಳ ಬಳಿಕ ತಾಯಿ ಭೇಟಿ ಮಾಡಿ ಭಾವುಕನಾದ ಮುಂಬೈ ಇಂಡಿಯನ್ಸ್​ ಕ್ರಿಕೆಟ್‌ ಆಟಗಾರ!

author img

By

Published : Aug 4, 2022, 5:41 PM IST

ಆಲ್​ರೌಂಡರ್ ಕುಮಾರ್ ಕಾರ್ತಿಕೇಯ

ಐಪಿಎಲ್‌ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಸ್ಟಾರ್ ಕ್ರಿಕೆಟ್ ಆಟಗಾರರೊಬ್ಬರು ಸುಮಾರು ಒಂಭತ್ತು ವರ್ಷಗಳ ಬಳಿಕ ಇದೀಗ ತನ್ನ ತಾಯಿಯನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಮುಂಬೈ(ಮಹಾರಾಷ್ಟ್ರ): ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ವೇಳಾಪಟ್ಟಿ ದಿನದಿಂದ ದಿನಕ್ಕೆ ಬಿಗುವಾಗುತ್ತಿದೆ. ಹೀಗಾಗಿ, ಆಟಗಾರರು ಕುಟುಂಬದಿಂದ ಹತ್ತಾರು ತಿಂಗಳ ಕಾಲ ದೂರವಿರುವಂತಹ ಪರಿಸ್ಥಿತಿ ಇದೆ. ಕೋವಿಡ್ ಹಾಗೂ ಬಯೋಬಬಲ್​​ ಯುಗದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್ ಆಟಗಾರ ಕುಮಾರ್ ಕಾರ್ತಿಕೇಯ ಸುಮಾರು 9 ವರ್ಷಗಳ ಬಳಿಕ ಇದೀಗ ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್​​ ತಂಡದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಕಾರ್ತಿಕೇಯ ಪ್ರತಿಕ್ರಿಯಿಸಿ, "9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಹಾಗೂ ಅಮ್ಮನನ್ನು ಭೇಟಿಯಾದೆ. ಈ ವೇಳೆ ನನಗಾಗುತ್ತಿರುವ ಸಂತಸದಲ್ಲಿ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ" ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.

ಕುಮಾರ್ ಕಾರ್ತಿಕೇಯ ಈ ಚಿತ್ರವನ್ನು ಪೋಸ್ಟ್ ಮಾಡ್ತಿದ್ದಂತೆ 18,000 ಲೈಕ್ಸ್ ಸಿಕ್ಕಿದ್ದು​ 900ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. 2022ರ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದ ಕಾರ್ತಿಕೇಯ ತಾವು ಆಡಿರುವ 4 ಪಂದ್ಯಗಳಿಂದ 5 ವಿಕೆಟ್ ಪಡೆದುಕೊಂಡಿದ್ದರು. ಈ ಪ್ಲೇಯರ್ ಇದೀಗ ಮಧ್ಯಪ್ರದೇಶ ರಣಜಿ ಟ್ರೋಫಿ ತಂಡದಲ್ಲಿ ಆಡುತ್ತಿದ್ದು, ತಂಡ ಪ್ರಸಕ್ತ ಋತುವಿನಲ್ಲಿ ಚಾಂಪಿಯನ್ ಆಗಿದೆ. ಕಾರ್ತಿಕೇಯ 11 ಪಂದ್ಯಗಳಿಂದ 32 ವಿಕೆಟ್ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ, ದ.ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್​ ಸರಣಿಗೆ ವೇಳಾಪಟ್ಟಿ ಪ್ರಕಟ

ಐಪಿಎಲ್ ಸಂದರ್ಭದಲ್ಲೊಮ್ಮೆ ಈ ಕುರಿತು ಮಾತನಾಡಿದ್ದ ಕುಮಾರ್ ಕಾರ್ತಿಕೇಯ, ಒಂಭತ್ತು ವರ್ಷಗಳ ಬಳಿಕ ಮನೆಗೆ ಮರಳಲು ಸಜ್ಜಾಗುತ್ತಿದ್ದೇನೆ ಎಂದಿದ್ದರು. ಇದರ ವಿಡಿಯೋ ತುಣುಕನ್ನು ಮುಂಬೈ ಇಂಡಿಯನ್ಸ್ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿತ್ತು. ಚಿಕ್ಕಂದಿನಲ್ಲೇ ಕಾರ್ತಿಕೇಯ ತಮ್ಮ ಮನೆ ತೊರೆದಿದ್ದರು. ದಿನಗೂಲಿಯಾಗಿ ಕೆಲಸ ಮಾಡುತ್ತಾ ಕ್ರಿಕೆಟ್‌ ಆಡುತ್ತಿದ್ದ ಇವರು ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಯಶಸ್ಸು ಸಿಕ್ಕ ಬಳಿಕ ಮನೆಗೆ ಮರಳುವುದಾಗಿ ಶಪಥಗೈದಿದ್ದರು.

ಮೂಲತಃ ಉತ್ತರ ಪ್ರದೇಶದವರಾಗಿರುವ ಈ ಆಟಗಾರ, ಕಳೆದೊಂದು ವರ್ಷದಿಂದ ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರಣಜಿ ಕ್ರಿಕೆಟ್​ ಆಡಲು ಮಧ್ಯಪ್ರದೇಶ ತಂಡ ಆಯ್ಕೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಬಿಕರಿಯಾಗದೇ ಉಳಿದ ಇವರು, ತದನಂತರ ಗಾಯಗೊಂಡಿದ್ದ ಅರ್ಶದ್ ಖಾನ್​ ಸ್ಥಾನಕ್ಕೆ ತಂಡದಲ್ಲಿ ಪಾಲು ಪಡೆದಿದ್ದರು. ಆಡುವ ತಂಡದ 11ರ ಬಳಗದಲ್ಲಿ ಅವಕಾಶವನ್ನೂ ಪಡೆದು ಮಿಂಚು ಹರಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.