ಜೂಲನ್​ ಗೋಸ್ವಾಮಿಗೆ ಇಂಗ್ಲೆಂಡ್​ನಿಂದ ಗಾರ್ಡ್​ ಆಫ್​ ಹಾನರ್​.. ಮೈದಾನದಲ್ಲೇ ಕಣ್ಣೀರಿಟ್ಟ ಭಾರತ ವನಿತೆಯರು

author img

By

Published : Sep 24, 2022, 8:51 PM IST

jhulan-goswami-last-match-moments

ಭಾರತ ವನಿತೆಯರ ಹಿರಿಯ ಆಟಗಾರ್ತಿ ಜೂಲನ್​ ಗೋಸ್ವಾಮಿ ಅವರಿಗೆ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಪಂದ್ಯ ಕೊನೆಯಾಗಿದೆ. ಇಂಗ್ಲೆಂಡ್​ ವನಿತೆಯರು ಅವರಿಗೆ ಗಾರ್ಡ್​ ಆಫ್​ ಹಾನರ್ ನೀಡಿ ಗೌರವ ಸಲ್ಲಿಸಿದರು.

ಲಾರ್ಡ್ಸ್​​ , ಇಂಗ್ಲೆಂಡ್​: ಭಾರತ ಮತ್ತು ವಿಶ್ವ ಮಹಿಳಾ ಕ್ರಿಕೆಟ್​ನ ಅಚ್ಚಳಿಯದ ಹೆಸರೆಂದರೆ ಅದು ಜೂಲನ್​ ಗೋಸ್ವಾಮಿ. ಅತಿ ಹೆಚ್ಚು ವಿಕೆಟ್​ ಪಡೆದ ವಿಶ್ವದ ಮೊದಲ, ಅತಿಹೆಚ್ಚು ಏಕದಿನ ಪಂದ್ಯವಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್​ ಆಗಿದ್ದಾರೆ. ಇಂತಹ ಮೇರು ಆಟಗಾರ್ತಿಗೆ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ.

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜೂಲನ್​ ಗೋಸ್ವಾಮಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕೆ ಆಗಮಿಸಿದಾಗ ಇಂಗ್ಲೆಂಡ್​ ವನಿತೆಯರು ಇಕ್ಕೆಲಗಳಲ್ಲಿ ಸಾಲಾಗಿ ನಿಂತು (ಗಾರ್ಡ್​ ಆಫ್​ ಹಾನರ್) ಹಿರಿಯ ಆಟಗಾರ್ತಿಗೆ ಗೌರವ ಸಲ್ಲಿಸಿದರು. ಎಲ್ಲರಿಗೂ ಧನ್ಯವಾದ ಗೋಸ್ವಾಮಿ ಅವರು ಆಟಗಾರರ ಮಧ್ಯೆ ನಡೆದು ಹೋದರು. ಈ ವೇಳೆ ಇಡೀ ಕ್ರೀಡಾಂಗಣದಲ್ಲಿ ಕರತಾಡನದ್ದೇ ಸದ್ದು.

ನಾಯಕಿ ಜೊತೆ ಟಾಸ್​ ಮಾಡಿದ ಜೂಲನ್​: ಇನ್ನು ಪಂದ್ಯ ಆರಂಭಕ್ಕೂ ಮೊದಲು ಟಾಸ್​ ಮಾಡಲು ಇಂಗ್ಲೆಂಡ್​ ಮತ್ತು ಭಾರತ ತಂಡದ ನಾಯಕಿಯರು ಮೈದಾನಕ್ಕೆ ಆಗಮಿಸಿದಾಗ, ಹರ್ಮನ್​ಪ್ರೀತ್​ ಕೌರ್​ ಅವರ ಕೋರಿಕೆ ಮೇರೆಗೆ ಅಂತಿಮ ಪಂದ್ಯವನ್ನಾಡುತ್ತಿರುವ ಹಿರಿಯ ಆಟಗಾರ್ತಿ ಜೂಲನ್​ ಗೋಸ್ವಾಮಿ ಅವರು ಮೈದಾನಕ್ಕೆ ಆಗಮಿಸಿ ಟಾಸ್​ ಮಾಡಿದರು.

ಭಾರತ ತಂಡದಿಂದ ಭಾವನಾತ್ಮಕ ವಿದಾಯ: ಪಂದ್ಯ ಆರಂಭಕ್ಕೂ ಮೊದಲು ಭಾರತ ತಂಡದ ಎಲ್ಲ ಆಟಗಾರ್ತಿಯರು ಹಿರಿಯ ಆಟಗಾರ್ತಿಗೆ ಭಾವನಾತ್ಮಕ ವಿದಾಯ ಹೇಳಿದರು. ಹಲವು ವರ್ಷಗಳಿಂದ ಒಟ್ಟಿಗೆ ತಂಡದಲ್ಲಿ ಆಡುತ್ತಿರುವ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಮತ್ತು ಸ್ಮೃತಿ ಮಂಧಾನಾ ಸಹ ಆಟಗಾರ್ತಿಯ ಅಂತಿಮ ಪಂದ್ಯಕ್ಕೆ ಮೈದಾನದಲ್ಲಿಯೇ ಕಣ್ಣೀರು ಹಾಕಿದರು.

ಜೂಲನ್‌ ಗೋಸ್ವಾಮಿ ಅವರು 2002 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ ಜೂಲನ್ ಗೋಸ್ವಾಮಿ 12 ಟೆಸ್ಟ್‌, 201 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಿದ್ದು, 352 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಒಟ್ಟು 6 ಏಕದಿನ ವಿಶ್ವಕಪ್‌ ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ವೊಂದರಲ್ಲೇ 252 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್ ಆಗಿದ್ದಾರೆ.

ಕುಸಿದ ಭಾರತ ತಡವರಿಸಿದ ಇಂಗ್ಲೆಂಡ್​: ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ ವನಿತೆಯರು ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾರ ಅರ್ಧಶತಕಗಳ ಹೊರತಾಗಿಯೂ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಕರಾರುವಾಕ್​ ದಾಳಿ ಮಾಡಿದ ಇಂಗ್ಲೆಂಡ್​ ವನಿತೆಯರು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಬ್ಯಾಟಿಂಗ್​ಗೆ ಇಳಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಶೆಫಾಲಿ ವರ್ಮಾ 0, ಯಾಸ್ತಿಕಾ ಭಾಟಿಯಾ 0, ನಾಯಕಿ ಹರ್ಮನ್​ಪ್ರೀತ್​ ಕೌರ್​ 4, ಹರ್ಲೀನ್​ ಡಿಯೋಲ್​ 3 ರನ್​ಗಳಿಗೆ ಔಟಾಗೆ ಪೆವಿಲಿಯನ್​ ಪರೇಡ್​ ಮಾಡಿದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ಸ್ಮೃತಿ ಮಂಧಾನಾ 50, ದೀಪ್ತಿ ಶರ್ಮಾ 68 ರನ್​ ಅರ್ಧಶತಕ ಗಳಿಸಿದರು. ಇವರ ಬಳಿಕ ಬೌಲರ್​ ಪೂಜಾ ವಸ್ತ್ರಕಾರರ 22 ರನ್​ ಗಳಿಸಿದರು. ಇನಿಂಗ್ಸ್​ನಲ್ಲಿ ಭಾರತದ ಐವರು ಬ್ಯಾಟರ್​ಗಳು ಸೊನ್ನೆ ಸುತ್ತಿದರು.

ಅಂತಿಮ ಪಂದ್ಯವಾಡುತ್ತಿರುವ ಜೂಲನ್​ ಗೋಸ್ವಾಮಿ ಅವರು ಕೂಡ ತಾವೆದುರಿಸಿ ಮೊದಲ ಎಸೆತದಲ್ಲಿಯೇ ಔಟಾದರು. ಕೊನೆಯಲ್ಲಿ ಭಾರತ 45.4 ಓವರ್​ಗಳಲ್ಲಿ 169ಕ್ಕೆ ಅಲೌಟ್​ ಆಯಿತು.

ಇನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್​ ವನಿತೆಯರು ಕೂಡ ದಿಢೀರ್​ ಕುಸಿತ ಕಂಡಿದ್ದು, 15 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 55 ರನ್​ ಮಾತ್ರ ಗಳಿಸಿದ್ದಾರೆ. ಗೆಲ್ಲಲು 4 ವಿಕೆಟ್​ಗಳಲ್ಲಿ 115 ರನ್​ ಬಾರಿಸಬೇಕು.

ಓದಿ: ಕರ್ನಾಟಕ U19 ಕ್ರಿಕೆಟ್ ತಂಡಕ್ಕೆ ಗುಮ್ಮಟನಗರಿ ಯುವತಿ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.