ತವರು ಮೈದಾನದಲ್ಲಿ ಐಪಿಎಲ್​ ಅಬ್ಬರ.. ಹಳೆಯ ಸ್ವರೂಪದಲ್ಲಿ 2023 ರ ಆವೃತ್ತಿ: ಬಿಸಿಸಿಐ

author img

By

Published : Sep 22, 2022, 9:40 PM IST

ipl-to-return-to-its-old-home

ಐಪಿಎಲ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​. ಕೋವಿಡ್​ನಿಂದಾಗಿ ನಿಗದಿತ ಮೈದಾನದಲ್ಲಿ ನಡೆಯುತ್ತಿದ್ದ ಐಪಿಎಲ್​ ಮುಂದಿನ ವರ್ಷದಿಂದ ಹಳೆಯ ಮಾದರಿಯಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ನವದೆಹಲಿ: ಕ್ರಿಕೆಟ್​ ಹಬ್ಬ ಐಪಿಎಲ್​ ಕೋವಿಡ್​ ಕಾರಣಕ್ಕಾಗಿ ಕಳೆಗುಂದಿತ್ತು. ಇದೀಗ ದೇಶದಲ್ಲಿ ಕೋವಿಡ್​ ತಹಬದಿಗೆ ಬಂದಿರುವ ಕಾರಣ ಹಳೆಯ ಸ್ವರೂಪದಲ್ಲೇ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಜನರು ಇನ್ನು ತಮ್ಮ ತಂಡಗಳನ್ನು ತವರು ಮೈದಾನದಲ್ಲೇ ಚಿಯರ್​ ಮಾಡಬಹುದು ಎಂದು ಬಿಸಿಸಿಐ ತಿಳಿಸಿದೆ.

ಕೋವಿಡ್​ ಕಾರಣಕ್ಕಾಗಿ 2020 ರ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಮೂರು ಮೈದಾನಗಳಾದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಕಟ್ಟುನಿಟ್ಟಿನ ಮಧ್ಯೆ ನಡೆಸಲಾಗಿತ್ತು. ಬಳಿಕ 2021 ರ ಆವೃತ್ತಿಯು ದೆಹಲಿ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ಮಾತ್ರ ನಡೆದಿತ್ತು. ಇದರಿಂದ ಆಯಾ ತಂಡಗಳು ತವರಿನ ಮೈದಾನದಲ್ಲಿ ಆಡುವುದನ್ನು ತಪ್ಪಿಸಿಕೊಂಡಿದ್ದವು.

"ಹಳೆಯ ಸ್ವರೂಪದಲ್ಲಿ ಮುಂದಿನ ವರ್ಷದ ಐಪಿಎಲ್​ ನಡೆಯಲಿದೆ. ತವರಿನಲ್ಲಿ ಒಂದು ಪಂದ್ಯ ಮತ್ತು ಎದುರಾಳಿಯ ತವರಿನಲ್ಲಿ ಒಂದು ಪಂದ್ಯವನ್ನು ಆಡುವುದನ್ನು ಮುಂದುವರಿಸಲಾಗುವುದು" ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮಾಹಿತಿ ನೀಡಿದ್ದಾರೆ.

ಐಪಿಎಲ್​ನಲ್ಲಿ ಆಡುವ ಎಲ್ಲಾ ಹತ್ತು ತಂಡಗಳು ತವರು ಮೈದಾನ ಮತ್ತು ಎದುರಾಳಿ ತಂಡದ ತವರಿನಲ್ಲಿ ಆಡುವ ಬಗ್ಗೆ ಆಯಾ ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಹಳೆಯ ಸ್ವರೂಪದಲ್ಲೇ ಎಲ್ಲ ಪಂದ್ಯಗಳು ನಡೆಯುತ್ತವೆ ಎಂಬುದನ್ನು ಸೌರವ್​ ಗಂಗೂಲಿ ತಿಳಿಸಿದ್ದಾರೆ.

ಮಹಿಳಾ ಐಪಿಎಲ್ ಶುರು ನಿರೀಕ್ಷೆ: ಮುಂದಿನ ವರ್ಷದ ಆರಂಭದಲ್ಲಿ ಬಹು ನಿರೀಕ್ಷಿತ ಮಹಿಳಾ ಐಪಿಎಲ್‌ನ ಉದ್ಘಾಟನಾ ಆವೃತ್ತಿಯನ್ನು ಆಯೋಜಿಸಲು ಕೂಡ ಬಿಸಿಸಿಐ ಯೋಜಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಬಳಿಕ ಮಾರ್ಚ್‌ನಲ್ಲಿ ಟೂರ್ನಿ ನಡೆಸುವ ಸಾಧ್ಯತೆ ಇದೆ ಎಂದು ಈ ಹಿಂದೆ ವರದಿಯಾಗಿತ್ತು.

ಬಿಸಿಸಿಐ ಕೂಡ ಮಹಿಳಾ ಐಪಿಎಲ್‌ ಆಡಿಸಲು ಕಾರ್ಯಸೂಚಿ ಸಿದ್ಧವಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಮೊದಲ ಋತುವನ್ನು ಪ್ರಾರಂಭಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಸೌರವ್​ ಗಂಗೂಲಿ ಹೇಳಿದ್ದರು. ಮಹಿಳಾ ಐಪಿಎಲ್ ಜೊತೆಗೆ 15 ವರ್ಷದೊಳಗಿನ ಬಾಲಕಿಯರ ಏಕದಿನ ಪಂದ್ಯಾವಳಿ ಕೂಡ ನಡೆಯಲಿದೆ. ಈ ಟೂರ್ನಿ ಡಿಸೆಂಬರ್ 26 ರಿಂದ ಜನವರಿ 12 ರವರೆಗೆ ಬೆಂಗಳೂರು, ರಾಂಚಿ, ರಾಜ್‌ಕೋಟ್, ಇಂದೋರ್, ರಾಯ್‌ಪುರ, ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.

ಓದಿ: ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಶಿಖರ್ ಧವನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.