ಮೆಹಿದಿ ಹಸನ್ ಮಿರಾಜ್ ಅಜೇಯ ಶತಕದಾಟ: ಭಾರತದ ಗೆಲುವಿಗೆ 272 ರನ್​ಗಳ ಟಾರ್ಗೆಟ್​

author img

By

Published : Dec 7, 2022, 4:12 PM IST

Updated : Dec 7, 2022, 4:54 PM IST

india-vs-bangladesh-second-one-day

​ಏಳನೇ ವಿಕೆಟ್​ಗೆ​ ಮೆಹಿದಿ ಹಸನ್ ಮಿರಾಜ್ (ಅಜೇಯ 100 ರನ್​) ಮತ್ತು ಮಹಮ್ಮದುಲ್ಲಾ (77 ರನ್​) ಆಕರ್ಷಕ ಜೊತೆಯಾಟದಿಂದ ಬಾಂಗ್ಲಾ ತಂಡ ಭಾರತದ ಗೆಲುವಿಗೆ 272 ರನ್​ಗಳ ಗುರಿ ನೀಡಿದೆ.

ಢಾಕಾ (ಬಾಂಗ್ಲಾದೇಶ): ಎರಡನೇ ಏಕದಿನ ಪಂದ್ಯದಲ್ಲೂ ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಅದ್ಭುತ ಆಟ ಪ್ರದರ್ಶಿಸಿದೆ. ಮೆಹಿದಿ ಹಸನ್ ಮಿರಾಜ್ ಅಜೇಯ ಶತಕದೊಂದಿಗೆ ನಿಗದಿತ 50 ಓವರ್​ಗಳಲ್ಲಿ ಸವಾಲಿನ 271 ರನ್​ಗಳ ಪೇರಿಸಿರುವ ಬಾಂಗ್ಲಾ, ಭಾರತದ ಗೆಲುವಿಗೆ 272 ರನ್​ಗಳ ಗುರಿ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದಿದ್ದ ಬಾಂಗ್ಲಾ ತಂಡ ತೀವ್ರವಾದ ಆರಂಭಿಕ ಕುಸಿತ ಅನುಭವಿಸಿತ್ತು. 69 ರನ್​ಗಳ ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ, ​ಏಳನೇ ವಿಕೆಟ್​ಗೆ​ ಮೆಹಿದಿ ಹಸನ್ ಮಿರಾಜ್ (ಅಜೇಯ 100 ರನ್​) ಮತ್ತು ಮಹಮ್ಮದುಲ್ಲಾ (77 ರನ್​) ಆಕರ್ಷಕ ಜೊತೆಯಾಟ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಲ್ಲದೇ, ತಂಡವು ಸ್ಪರ್ಧಾತ್ಮಕ ರನ್​ ಪೇರಿಸುವಲ್ಲಿ ನೆರವಾದರು.

148 ರನ್‌ಗಳ ಜೊತೆಯಾಟ: ಬಾಂಗ್ಲಾದ ಅಗ್ರ ಕ್ರಮಾಂಕದ ಆಟಗಾರರು ರನ್ ಗಳಿಸಲು ವಿಫಲವಾದ ಕಾರಣ ಬಾಂಗ್ಲಾದೇಶ 19 ಓವರ್‌ಗಳಲ್ಲಿ 69 ರನ್​ಗೆ 6 ವಿಕೆಟ್​ ಕಳೆದುಕೊಂಡು ತತ್ತರಿಸಿತ್ತು. ಭಾರತದ ಮೊಹಮ್ಮದ್ ಸಿರಾಜ್​, ವಾಷಿಂಗ್ಟನ್​ ಸಂದರ್​ ಮತ್ತು ಉಮರ್ ಮಲಿಕ್​ ಬಾಂಗ್ಲಾ ಬ್ಯಾಟರ್​ಗಳನ್ನು ಬೇಗ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ಆರಂಭಿಕ ಆಟಗಾರರಾದ ಅನಾಮುಲ್ ಹಕ್ (11) ಮತ್ತು ನಾಯಕ ಲಿಟ್ಟನ್ ದಾಸ್ (7) ಅವರ ವಿಕೆಟ್​ಗಳನ್ನು ಮೊಹಮ್ಮದ್ ಸಿರಾಜ್ ಕಬಳಿಸಿದರು. ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ (21) ಕ್ಲೀನ್ ಬೌಲ್ಡ್ ಆದರು. ಶಕೀಬ್ ಅಲ್ ಹಸನ್ (8), ಮುಷ್ಫಿಕುರ್ ರಹೀಂ (12) ಮತ್ತು ಅಫೀಫ್ ಹೊಸೈನ್‌ ಅವರನ್ನು ಶೂನ್ಯಕ್ಕೆ ವಾಷಿಂಗ್ಟನ್ ಸುಂದರ್ ಔಟ್​ ಮಾಡಿ ಬಾಂಗ್ಲಾ ತಂಡಕ್ಕೆ ಶಾಕ್​ ನೀಡಿದರು. ಇದರಿಂದ ಬಾಂಗ್ಲಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.

ಆದರೆ, ನಂತರದ ವಿಕೆಟ್​ ಕಿತ್ತುವಲ್ಲಿ ಭಾರತದ ಬೌಲರ್​ಗಳ ಬೆವರು ಸುರಿಸಬೇಕಾಯಿತು. ಏಳನೇ ವಿಕೆಟ್‌ಗೆ ಮೆಹಿದಿ ಹಸನ್ ಮಿರಾಜ್ ಮತ್ತು ಅನುಭವಿ ಬ್ಯಾಟರ್ ಮಹಮ್ಮದುಲ್ಲಾ 165 ಎಸೆತಗಳಲ್ಲಿ 148 ರನ್‌ಗಳ ಜೊತೆಯಾಟ ನೀಡಿ ಬಾಂಗ್ಲಾ ತಂಡದ ಅದ್ಭುತ ಚೇತರಿಕೆಗೆ ಕಾರಣರಾದರು.

ಅದರಲ್ಲೂ, ಮೆಹಿದಿ ಹಸನ್ ಮಿರಾಜ್ 83 ಎಸೆತಗಳಲ್ಲೇ ಅಜೇಯ ಹಾಗೂ ಮೊದಲ ಶತಕ ಬಾರಿಸಿ ಮಿಂಚಿದರು. ಮಹಮ್ಮದುಲ್ಲಾ (77) ಔಟಾದ ನಂತರ ಬಂದ ನಸುಮ್ ಅಹ್ಮದ್ ಕೂಡ ಬಿರುಸಿನ ಬ್ಯಾಟ್ ಬೀಸಿ 11 ಎಸೆತಗಳಲ್ಲಿ 18 ರನ್​ ಬಾರಿಸಿದರು. ಪರಿಣಾಮ ಬಾಂಗ್ಲಾ ತಂಡ 7 ವಿಕೆಟ್​ ನಷ್ಟಕ್ಕೆ 271 ರನ್​ಗಳನ್ನು ಕಲೆ ಹಾಕುವಲ್ಲಿ ಸಾಧ್ಯವಾಯಿತು.

ಇದನ್ನೂ ಓದಿ: ಕ್ಯಾಚ್​ ವೇಳೆ ಹೆಬ್ಬೆರಳಿಗೆ ಚೆಂಡು ಬಿದ್ದು ಗಾಯ.. ಮೈದಾನ ತೊರೆದ ನಾಯಕ ರೋಹಿತ್​ ಶರ್ಮಾ

Last Updated :Dec 7, 2022, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.