ಭಾರತ ವಿಶ್ವಕಪ್​ ತಂಡಕ್ಕೆ ಆಘಾತ: ಮೊದಲ ಟಿ20ಯಲ್ಲಿ ಆಸೀಸ್​ಗೆ 4 ವಿಕೆಟ್​ ಜಯ

author img

By

Published : Sep 20, 2022, 10:59 PM IST

australia-won-by-4-wkts

ವಿಶ್ವಕಪ್​ ಸಿದ್ಧತೆಯಲ್ಲಿರುವ ಭಾರತಕ್ಕೆ ಮೊದಲ ಆಘಾತ ಎದುರಾಗಿದೆ. ವಿಶ್ವಕಪ್​ ತಂಡವೇ ಕಣಕ್ಕಿಳಿದರೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಯನೀಯ ಸೋಲುಂಡಿದೆ. 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆಯಿತು.

ಮೊಹಾಲಿ, ಪಂಜಾಬ್​: ಭಾರತದ ಬೌಲರ್​ಗಳ ದಯನೀಯ ಪ್ರದರ್ಶನ ಮುಂದುವರಿದಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 208 ರನ್​ಗಳ ಬೃಹತ್​ ಮೊತ್ತವನ್ನು ಉಳಿಸಿಕೊಳ್ಳದೇ ಭಾರತ ಸೋಲುಂಡಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಹಿನ್ನಡೆ ಅನುಭವಿಸಿತು.

ಮುಂಬರುವ ವಿಶ್ವಕಪ್​ಗೆ ಸಿದ್ಧತೆಯ ಭಾಗವಾಗಿ ನಡೆಯುತ್ತಿರುವ ಈ ಸರಣಿಯಲ್ಲಿ ಬೌಲರ್​ಗಳು ಅಕ್ಷರಶಃ ದಂಡನೆಗೆ ಒಳಗಾದರು. ಭಾರತದ ಬೌಲರ್​ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ದಾಂಡಿಗರು 19.2 ಓವರ್​ನಲ್ಲಿ 211/6 ರನ್​ ಬಾರಿಸಿ ಭಾರತದ ಗುರಿಯನ್ನು ದಾಟಿದರು.

ಕ್ಯಾಮರನ್​ ಗ್ರೀನ್​ ಹೋರಾಟ: ಬೃಹತ್​ ಮೊತ್ತವನ್ನು ಚೇಸ್​ ಮಾಡಲೇಬೇಕು ಎಂಬಂತೆ ಜಿದ್ದಿಗೆ ಬಿದ್ದಿವರಂತೆ ಆಡಿದ ಆಸೀಸ್ ದಾಂಡಿಗರು ಭಾರತದ ಬೌಲರ್​ಗಳ ಬೆವರಿಳಿಸಿದರು. ಆರಂಭಿಕ ಆಟಗಾರ ಕ್ಯಾಮರನ್​ ಗ್ರೀನ್​ ಅಬ್ಬರದ 61 ಗಳಿಸಿದರು. ವಿಕೆಟ್​ ಕೀಪರ್​ ಮ್ಯಾಥ್ಯೂ ವೇಡ್​ ಔಟಾಗದೇ 45, ಆ್ಯರೋನ್​ ಫಿಂಚ್​ 22, ಸ್ಟೀವನ್​ ಸ್ಮಿತ್​ 35, ಟಿಮ್​ ಡೇವಿಡ್​ 18 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಭುವಿ, ಹರ್ಷಲ್​, ಚಹಲ್​ ದುಬಾರಿ: ವಿಶ್ವಕಪ್​ನಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಮುಂಚೂಣಿ ವೇಗಿಗಳಾದ ಭುವನೇಶ್ವರ್​ ಕುಮಾರ್, ಹರ್ಷಲ್​ ಪಟೇಲ್​, ಸ್ಪಿನ್ನರ್​ ಯಜುವೇಂದ್ರ ಚಹಲ್​ ಕ್ರಮವಾಗಿ 52, 49, 42 ರನ್​ ಚಚ್ಚಿಸಿಕೊಂಡು ದುಬಾರಿಯಾದರು. ಭಾರತದ ಪರವಾಗಿ ಅಕ್ಸರ್​ ಪಟೇಲ್​ 3 ವಿಕೆಟ್​ ಪಡೆದು ಯಶಸ್ವಿಯಾದರೆ, ಉಮೇಶ್​ ಯಾದವ್​ 2, ಚಹಲ್​ 1 ವಿಕೆಟ್​ ಪಡೆದರು.

ಭಾರತದ ಇನಿಂಗ್ಸ್​: ಈ ಮೊದಲು ಬ್ಯಾಟ್​ ಮಾಡಿದ್ದ ಭಾರತ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ, ಸೂರ್ಯಕುಮಾರ್​ ಯಾದವ್​​, ಕೆಎಲ್​ ರಾಹುಲ್​ರ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 208 ರನ್​ಗಳ ಬೃಹತ್​ ಮೊತ್ತ ಪೇರಿಸಿತ್ತು.

ಆರಂಭದಲ್ಲಿ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ವಿಕೆಟ್​ ಬೇಗನೇ ಕಳೆದುಕೊಂಡರೂ ಧೃತಿಗೆಡದ ರಾಹುಲ್, ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟ್​ ಬೀಸಿದರು. ಸ್ಟ್ರೈಕ್​ರೇಟ್​ ಕಾರಣಕ್ಕಾಗಿ ಟೀಕೆಗೆ ಗುರಿಯಾಗಿರುವ ಕನ್ನಡಿಗ ಕೆ ಎಲ್​ ರಾಹುಲ್​ ಕೇವಲ 35 ಎಸೆತಗಳಲ್ಲಿ 55 ರನ್​ ಬಾರಿಸಿದರು. ಇದರಲ್ಲಿ 3 ಸಿಕ್ಸರ್​, 4 ಬೌಂಡರಿಗಳಿದ್ದವು. ಈ ಮೂಲಕ ರಾಹುಲ್​ ಟೀಕಾಕಾರಿಗೆ ಬ್ಯಾಟ್​ ಎತ್ತುವ ಮೂಲಕವೇ ಉತ್ತರ ನೀಡಿದರು. ಕೊನೆಗೆ ದೊಡ್ಡ ಹೊಡೆತಕ್ಕೆ ಮುಂದಾಗಿ ಹೇಜಲ್​ವುಡ್​ಗೆ ವಿಕೆಟ್​ ಒಪ್ಪಿಸಿದರು.

ಇನ್ನು ಏಷ್ಯಾಕಪ್​ನಲ್ಲಿ ಮಿಂಚು ಹರಿಸಲು ವಿಫಲವಾಗಿದ್ದ ಸೂರ್ಯಕುಮಾರ್​ ಯಾದವ್​ ಆಸ್ಟ್ರೇಲಿಯನ್ನರ ವಿರುದ್ಧ ಸವಾರಿ ಮಾಡಿದರು. 4 ಸಿಕ್ಸರ್​, 2 ಬೌಂಡರಿ ಸಮೇತ 46 ರನ್​ ಗಳಿಸಿ ಔಟಾಗಿ ಅರ್ಧಶತಕದಿಂದ ತಪ್ಪಿಸಿಕೊಂಡರು.

ಹಾರ್ದಿಕ್​ ಪಾಂಡ್ಯಾ ವೀರಾವೇಶ: ಭರ್ಜರಿ ಫಾರ್ಮ್​ನಲ್ಲಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಆಸೀಸ್​​ ಬೌಲರ್​ಗಳ ಬೆವರಿಳಿಸಿದರು. ಕೊನೆಯವರೆಗೂ ಔಟಾಗದೇ ಉಳಿದ ಹಾರ್ದಿಕ್​ 71 ರನ್​ ಗಳಿಸಿದರು. ಇದರಲ್ಲಿ 5 ಸಿಕ್ಸರ್​, 7 ಬೌಂಡರಿಗಳಿದ್ದವು. ಬಳಸಿದ್ದು 30 ಎಸೆತ ಮಾತ್ರ. ಸಿಕ್ಸ್​, ಫೋರ್​ಗಳಿಂದಲೇ ಪಾಂಡ್ಯಾ 58 ರನ್​ ಗಳಿಸಿದ್ದು ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಆಸ್ಟ್ರೇಲಿಯಾ ಪರವಾಗಿ ಜೋಸ್​ ಹೇಜಲ್​ವುಡ್​ 2, ನಾಥನ್​ ಎಲ್ಲಿಸ್​ 3, ಕ್ಯಾಮರನ್​ ಗ್ರೀನ್​ 1 ವಿಕೆಟ್​ ಗಳಿಸಿದರು.

ಓದಿ: ಮಹಿಳಾ ಕಬಡ್ಡಿ ಪ್ಲೇಯರ್ಸ್​ಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ: ಕ್ರೀಡಾಧಿಕಾರಿ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.