ಆಸ್ಟ್ರೇಲಿಯಾ vs ಭಾರತ ವನಿತೆಯರ ODI ಕ್ರಿಕೆಟ್‌: ಮೆಗ್‌ ಲ್ಯಾನಿಂಗ್‌ ಪಡೆಗೆ ದಾಖಲೆಯ ವಿಜಯ

author img

By

Published : Sep 21, 2021, 4:23 PM IST

ಆಸೀಸ್​ ವನಿತೆಯರ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ತೀವ್ರ ಸ್ವರೂಪದ ಹಿನ್ನಡೆ ಅನುಭವಿಸಿದ ಪರಿಣಾಮ ಭಾರತೀಯ ವನಿತೆಯ ಕ್ರಿಕೆಟ್‌ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು.

ಮೆಕಾಯ್(ಆಸ್ಟ್ರೇಲಿಯಾ)​: ಬ್ಯಾಟಿಂಗ್ ಮತ್ತು ಬೌಲಿಂಗ್‌ ವಿಭಾಗದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೈಫಲ್ಯ ಮರುಕಳಿಸಿದೆ. ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಮಿಥಾಲಿ ರಾಜ್‌ ತಂಡದೆದುರು ಶಕ್ತಿಶಾಲಿ ಪ್ರದರ್ಶನ ತೋರಿದ ಮೆಗ್‌ ಲ್ಯಾನಿಂಗ್‌ ನೇತೃತ್ವದ ಆಸೀಸ್‌ ಪಡೆ ಅಧಿಕಾರಯುತ ಗೆಲುವು ದಾಖಲಿಸಿತು. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆಯಿತು.

ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡದ ಏಕದಿನ 25 ಏಕದಿನ ಪಂದ್ಯಗಳನ್ನು ಗೆದ್ದುಕೊಡು ಹೊಸ ದಾಖಲೆ ಬರೆದಿದೆ.

ಸೋಮವಾರದಿಂದ ಆರಂಭವಾಗಿರುವ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಸೋತ ಭಾರತವನ್ನು ಆಸೀಸ್‌ ತಂಡ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆಸೀಸ್‌ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಮಿಥಾಲಿ ಪಡೆ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್​ 63 ರನ್​ಗಳಿಸಿ ತಮ್ಮ 59ನೇ ಅರ್ಧಶತಕ ಪೂರೈಸಿದರು. ಆದರೆ ಇದಕ್ಕಾಗಿ ಅವರು ಬರೋಬ್ಬರಿ 107 ಎಸೆತಗಳನ್ನೇ ಎದುರಿಸಬೇಕಾಯ್ತು. ಇನ್ನು ಪದಾರ್ಪಣೆ ಆಟಗಾರ್ತಿ ಯಸ್ತಿಕಾ ಭಾಟಿಯಾ 35, ರಿಚಾ ಘೋಶ್ ಅಜೇಯ 32 ರನ್​ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶ ಕಂಡರು.

ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 33ಕ್ಕೆ 4 ವಿಕೆಟ್‌ ಪಡೆದರೆ, ಇನ್ನುಳಿದಂತೆ, ಮೊಲಿನೆಕ್ಸ್ 39ಕ್ಕೆ 2 ಮತ್ತು ಡಾರ್ಲಿಂಗ್ಟನ್​ 29ಕ್ಕೆ 2 ವಿಕೆಟ್ ಪಡೆದರು.

ಭಾರತ ತಂಡ ನೀಡಿದ ಸಾಧಾರಣ 226 ರನ್​ ಗುರಿ ಪಡೆದ ಆಸ್ಟ್ರೇಲಿಯಾ 41 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿ ವಿಜಯಘೋಷ ಮೊಳಗಿಸಿತು.

ಆರಂಭಿಕ ಬ್ಯಾಟರ್​ ರೇಚಲ್ ಹೇನ್ಸ್ 100 ಎಸೆತಗಳಲ್ಲಿ 7 ಬೌಂಡರಿಸಹಿತ ಅಜೇಯ 93, ಮೆಗ್​ ಲ್ಯಾನಿಂಗ್ 69 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 53 ರನ್​ಗಳಿಸಿ ತಂಡವನ್ನು ಗೆಲುವಿನೆಡೆ ಕೊಂಡೊಯ್ದರು. ವಿಕೆಟ್​ ಕೀಪರ್ ಅಲಿಸಾ ಹೀಲಿ 77 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 77 ರನ್​ ಕಲೆ ಹಾಕಿದರು.

ಆಸ್ಟ್ರೇಲಿಯಾ ವಿಶೇಷ ದಾಖಲೆ:

ಆಸ್ಟ್ರೇಲಿಯಾ ಈ ಗೆಲುವಿನ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಸತತ 25ನೇ ಜಯ ಸಾಧಿಸಿತು. 2008 ಮಾರ್ಚ್​ನಿಂದ ಆಸೀಸ್​ ಮಹಿಳಾ ತಂಡ ಇದುವರೆಗೂ ಸೋಲು ಕಾಣದೇ ಮುನ್ನುಗ್ಗುತ್ತಿದೆ.

ಇದನ್ನೂ ಓದಿ:ಭಾರತ ಆಸ್ಟ್ರೇಲಿಯಾ ಏಕದಿನ ಪಂದ್ಯ: ಕ್ರಿಕೆಟ್​ ಜೀವನದಲ್ಲಿ 20 ಸಾವಿರ ರನ್ ಗಳಿಸಿ ದಾಖಲೆ ಬರೆದ ಮಿಥಾಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.