ವಿಶ್ವ ಚುಟುಕು ಸಮರ: ದಕ್ಷಿಣ ಆಫ್ರಿಕಾಗೆ ಸೋಲುಣಿಸಿ ಗೆಲುವಿನ ಶುಭಾರಂಭ ಮಾಡಿದ ಕಾಂಗರೂ ಪಡೆ

author img

By

Published : Oct 23, 2021, 7:50 PM IST

Updated : Oct 23, 2021, 8:16 PM IST

Australia beat South Africa by 5 wickets in T20 WC Super 12 match

ಟಿ-20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಆಸ್ಟ್ರೇಲಿಯಾ ಮಣಿಸಿದೆ. 19.4 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್​ಗಳಿಸಿದ ಆಸ್ಟ್ರೇಲಿಯಾ ತಂಡವು ಜಯ ಸಾಧಿಸಿತು. ಈ ಮೂಲಕ ಕಾಂಗರೂಗಳ ಪಡೆ ಗೆಲುವಿನ ಶುಭಾರಾಂಭ ಮಾಡಿದೆ.

ಅಬುಧಾಬಿ : ಇಂದು ನಡೆದ ವಿಶ್ವ ಚುಟುಕು ಸಮರದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಬಲಾಢ್ಯ ಆಸ್ಟ್ರೇಲಿಯಾ ತಂಡ ಐದು ವಿಕೆಟ್​ನಿಂದ ಗೆಲುವು ಸಾಧಿಸಿದೆ.

ತೆಂಬಾ ಬಾವುಮಾ ಬಳಗ ನೀಡಿದ 118 ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಎರಡು ಬಾಲುಗಳು ಬಾಕಿ ಇರುವಾಗಲೇ ಗೆಲುವನ್ನು ತಮ್ಮದಾಗಿಸಿಕೊಂಡಿದೆ. ಈ ಮೂಲಕ ಇಂದು ಆರಂಭವಾದ ಮೊದಲ ಪಂದ್ಯದಲ್ಲೇ ಹರಿಣಗಳ ಮೇಲೆ ಕಾಂಗರೂಗಳ ಪಡೆ ಸವಾರಿ ಮಾಡಿದೆ.

ಹರಿಣಗಳ ಭರವಸೆಯ ಆಟಗಾರ ತೆಂಬಾ ಬಾವುಮಾ (12 ರನ್​) ಸಣ್ಣ ಮೊತ್ತ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಅವರೊಂದಿಗೆ ಕ್ರೀಸ್​ಗೆ ಇಳಿದಿದ್ದ ಕ್ವಿಂಟನ್ ಡಿ ಕಾಕ್ ಕೇವಲ 7 ರನ್​ ಗಳಿಸಿ ಜೋಶ್ ಹ್ಯಾಜಲ್‌ವುಡ್ ಅವರ ಬೌಲಿಂಗ್​ ದಾಳಿಗೆ ಔಟ್​ ಆಗುವ ಮೂಲಕ ಪೆವಿಲಿಯನ್​ಗೆ ತೆರಳಿದರು. ಬಳಿಕ ಕ್ರೀಸ್​ಗೆ ಇಳಿದ ರಾಸ್ ವ್ಯಾನ್ ಡಸೆನ್ ಕೇವಲ 2 ರನ್​ ಗಳಿಸಿ ಹೊರ ನಡೆದರು.

ಇನ್ನು ಏಡನ್ ಮಾರ್ಕ್ರಮ್ (40) ಅವರ ಭರ್ಜರಿ ಬ್ಯಾಟಿಂಗ್​ ನೆರವಿನಿಂದ ತೆಂಬಾ ಬಾವುಮಾ ಬಳಗ ನೂರರ ಗಡಿ ದಾಟಿತು. ಆದರೆ, ಬಳಿಕ ಬಂದ ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಯಾವುದೇ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ, 20 ಓವರ್​ಗಳಲ್ಲಿ ತೆಂಬಾ ಬಳಗ 118 ರನ್​ ಗಳಿಸಲು ಮಾತ್ರ ಶಕ್ತವಾಯಿತು.

ಭರ್ಜರಿ ಬ್ಯಾಟಿಂಗ್​ ಮಾಡಿದ ಸ್ಟೀವನ್ ಸ್ಮಿತ್​ (35) ಕಾಂಗರೂಗಳ ಇಂದಿನ ಗೆಲುವಿಗೆ ಕಾರಣರಾದರು. ಡೇವಿನ್​ ವಾರ್ನರ್​ 14, ಮಿಚೆಲ್ ಮಾರ್ಷ್ (11), ಗ್ಲೆನ್ ಮ್ಯಾಕ್ಸ್‌ವೆಲ್ (18), ಮಾರ್ಕಸ್ ಸ್ಟೊಯಿನಿಸ್ (24) ವಿಕೇಟ್​ ಕೀಪರ್​ ಮ್ಯಾಥ್ಯೂ ವೇಡ್ (15) ರನ್​ಗಳ ನೆರವಿನಿಂದ ಆ್ಯರೋನ್ ಫಿಂಚ್ ಬಳಗ ಜಯದ ನಗೆ ಬೀರಿತು.

ಕಾಂಗರೂಗಳ ಪಡೆಯ ಪರ ಜೋಶ್ ಹ್ಯಾಜಲ್‌ವುಡ್ 2, ಆ್ಯಡಮ್ ಜಂಪಾ 2 ಮತ್ತು ಮಿಚೆಲ್ ಸ್ಟಾರ್ಕ್ 2 ವಿಕೆಟ್​ ಪಡೆದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್​ ಕಮ್ಮಿನ್ಸ್​ ತಲಾ 1 ವಿಕೆಟ್ ಪಡೆದರು. ಹರಿಣಗಳ ಪರ ಎನ್ರಿಕ್ ನಾರ್ಕಿಯಾ 2, ರಬಾಡ 1, ಕೇಶವ್ ಮಹಾರಾಜ್ 1, ಶಮ್ಸಿ ತಲಾ ಒಂದೊಂದು ವಿಕೆಟ್​ ಪಡೆದರು.

Last Updated :Oct 23, 2021, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.