ಅಭಿಮತ: ತ್ವರಿತ ಪರಿಹಾರಗಳಿಲ್ಲದೆ ರಚನಾತ್ಮಕ ಬದಲಾವಣೆಗಳಿಗೆ ಬಜೆಟ್​ ಒತ್ತು

author img

By

Published : Feb 3, 2022, 7:53 PM IST

Updated : Feb 4, 2022, 12:22 PM IST

girish-linganna-spoke-about-budget

ಸರ್ಕಾರದ ಕಾರ್ಯವೈಖರಿಯನ್ನು ಅಳೆಯುವುದು ಕೂಡ ಕಷ್ಟ. ಏಕರೂಪದ ತೆರಿಗೆ ದರಗಳು ರಾಜ್ಯಗಳ ನಡುವೆ ಒಂದು ಹಂತದವರೆಗೆ ಮಾತ್ರ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಆದರೆ ಬಜೆಟ್ ದಾಖಲೆಯು ಸರ್ಕಾರದ ಉದ್ದೇಶಗಳು ಮತ್ತು ಆದ್ಯತೆಗಳನ್ನು ವಿವರಿಸುತ್ತದೆ. 2022-23ರ ಬಜೆಟ್ ಪ್ರಸ್ತಾವನೆಗಳು ಪ್ರಸ್ತುತ ಸರ್ಕಾರದ ಆಶಯಗಳಿಗೆ ಅನುಗುಣವಾಗಿಯೇ ಇವೆ.

2017ರಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಕೇಂದ್ರ ಆಯವ್ಯಯವು ಸಾರ್ವಜನಿಕರ ಆಸಕ್ತಿಯನ್ನು ಕೆರಳಿಸಲೇ ಇಲ್ಲ. ವಿಶ್ಲೇಷಣೆ ಮಾಡಲು ಮತ್ತು ತೀರ್ಮಾನಕ್ಕೆ ಬರಲು ಅವಕಾಶಗಳು ಕಡಿಮೆಯಾಗಿವೆ.

ಸರ್ಕಾರದ ಕಾರ್ಯವೈಖರಿಯನ್ನು ಅಳೆಯುವುದು ಕೂಡ ಕಷ್ಟ. ಏಕರೂಪದ ತೆರಿಗೆ ದರಗಳು ರಾಜ್ಯಗಳ ನಡುವೆ ಒಂದು ಹಂತದವರೆಗೆ ಮಾತ್ರ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಆದರೆ, ಬಜೆಟ್ ದಾಖಲೆಯು ಸರ್ಕಾರದ ಉದ್ದೇಶಗಳು ಮತ್ತು ಆದ್ಯತೆಗಳನ್ನು ವಿವರಿಸುತ್ತದೆ. 2022-23ರ ಬಜೆಟ್ ಪ್ರಸ್ತಾವನೆಗಳು ಪ್ರಸ್ತುತ ಸರ್ಕಾರದ ಆಶಯಗಳಿಗೆ ಅನುಗುಣವಾಗಿಯೇ ಇವೆ.

ಮಂಗಳವಾರ (ಫೆ. 1) ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಪ್ರಸ್ತಾವನೆಗಳು ಭವಿಷ್ಯದ ವರ್ಷಗಳಿಗೆ ಒದಗಿಸಿರುವ ನೀಲನಕ್ಷೆಯಂತಿವೆ. ಬಜೆಟ್‌ನ ಯೋಜನೆಗಳು ಅನುಷ್ಠಾನವಾಗಿ ಒಂದು ವರ್ಷದೊಳಗೇ ಅದರ ಪರಿಣಾಮಗಳನ್ನು ನಿರ್ಣಯಿಸಲು ಯಾರಾದರೂ ಪ್ರಯತ್ನಿಸಿದರೆ, ಅವರು ಒಂದು ನಿರ್ದಿಷ್ಟ ಹಂತದ ನಿರಾಸೆಯನ್ನು ಅನುಭವಿಸುವುದು ಖಚಿತ.

ಏಕೆಂದರೆ, ಈ ಬಜೆಟ್‌ನ ಬಹುತೇಕ ಪ್ರಸ್ತಾಪಗಳನ್ನು ದೀರ್ಘಾವಧಿಯಲ್ಲಿ ಕಾರ್ಯಗತಗೊಳಿಸಬೇಕಾಗುತ್ತದೆ. ಯಾವುದೇ ತಕ್ಷಣದ ಸಮಸ್ಯೆಗಳಿಗೆ ಯಾವುದೇ ತ್ವರಿತ ಪರಿಹಾರಗಳು ಅಥವಾ ನಿರ್ದಿಷ್ಟ ಕಾರ್ಯವಿಧಾನಗಳನ್ನು ಸೂಚಿಸಲಾಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರವುದಕ್ಕೆ ಹೆಚ್ಚಿನ ಪ್ರಯತ್ನ ಮಾಡಲಾಗಿದೆ.

ಅಂತಹ ವಲಯಗಳಲ್ಲಿ ರಕ್ಷಣೆಯೂ ಒಂದು. ಸ್ವದೇಶೀಕರಣವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು, ಸರ್ಕಾರವು ರಕ್ಷಣಾ ಬಜೆಟ್ ಅನ್ನು ರೂ. 5.25 ಲಕ್ಷ ಕೋಟಿಗೆ ಹೆಚ್ಚಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ 4.78 ಲಕ್ಷ ಕೋಟಿ ಹಂಚಿಕೆಯಾಗಿತ್ತು. ರಕ್ಷಣೆಗೆ ನೀಡಿರುವ ಅನುದಾನದ ಪಾಲು ಒಟ್ಟು ಆಯವ್ಯಯದ ಹಂಚಿಕೆಯಲ್ಲಿ ಸುಮಾರು 14% ಆಗಿದೆ. ದೇಶೀಯ ರಕ್ಷಣಾ ಉದ್ಯಮಕ್ಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ರಕ್ಷಣಾ ಬಜೆಟ್‌ನ ವಾರ್ಷಿಕ ವೃದ್ಧಿಯು ಸುಮಾರು 9% ದಷ್ಟಾಗಿದೆ. ಆದರೆ, ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡಾಗ ಮತ್ತು ಶಸ್ತ್ರಾಸ್ತ್ರ ಬಲದ ದೃಷ್ಟಿಯಿಂದ ರಕ್ಷಣಾ ವಲಯದ ವಿಸ್ತರಣೆಯೂ ಆಗುತ್ತಿರುವಾಗ ಈ ಅನುದಾನ ಏನೂ ತೃಪ್ತಿ ನೀಡುವುದಿಲ್ಲ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು- ಈ ಮೂರೂ ವಲಯಗಳು ಈಗ ಮಾಡಿರುವುದಕ್ಕಿಂತ ಹೆಚ್ಚಿನ ಹಂಚಿಕೆಗಳನ್ನು ಒತ್ತಾಯಿಸುತ್ತಿವೆ. ಈ ವರ್ಷದ ಬಜೆಟ್ ಪ್ರಸ್ತಾವನೆಯಲ್ಲಿಯೂ ಈ ಅಂತರ ಮುಂದುವರಿದಿದೆ.

ಭಾರತವು ಎಲ್ಲ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ರಕ್ಷಣಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಒಂದು ಶ್ಲಾಘನೀಯ ವಿಷಯವೆಂದರೆ ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆಗೆ ಮತ್ತು ಅಭಿವೃದ್ಧಿಗಾಗಿ (R&D) ರಕ್ಷಣಾ ಆಯವ್ಯಯದ 25% ಪಾಲು ಖಾಸಗಿ ವಲಯಕ್ಕೆ ಹಂಚಿಕೆಯಾಗಿದೆ. ಇದು ಖಂಡಿತವಾಗಿಯೂ ಸ್ವಾಗತಾರ್ಹ ಕ್ರಮವಾಗಿದೆ. ಏಕೆಂದರೆ, ರಕ್ಷಣಾ ಉದ್ಯಮವು ಸ್ವಾವಲಂಬಿಯಾಗಬೇಕಾದರೆ ಖಾಸಗಿ ಕಂಪನಿಗಳೊಂದಿಗೆ ಸಹಯೋಗ ಹೊಂದಬೇಕಾಗಿದೆ.

ಖಾಸಗಿ ವಲಯವೇ ಪ್ರತಿಭಾನ್ವಿತರ ಸಮೂಹವನ್ನು ಸೃಷ್ಟಿಸುತ್ತಿದೆ. ರಕ್ಷಣಾ ಸಚಿವಾಲಯವು (MoD) ಲಭ್ಯವಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಉತ್ತಮ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕೆಂಬ ಉದ್ದೇಶವನ್ನು ಸರ್ಕಾರ ಘೋಷಿಸುವುದು ಸುಲಭ. ಆದರೆ, ಇದು ರಾತ್ರೋರಾತ್ರಿ ಸಂಭವಿಸಲು ಸಾಧ್ಯವಿಲ್ಲ. ಮುಂದಿನ ಕೆಲವು ವರ್ಷಗಳಲ್ಲಿ, ಬೃಹತ್ ಮೊತ್ತವನ್ನು ಹೂಡಿಕೆ ಮಾಡುವುದಕ್ಕಾಗಿ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ರಕ್ಷಣಾ ಸಚಿವಾಲಯವು (MoD) ಬಹಳಷ್ಟು ಸುಧಾರಣೆಗಳನ್ನು ಜಾರಿಗೆ ತರಬೇಕಾಗುತ್ತದೆ. ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು (ಆರ್ & ಡಿ) ಉತ್ತೇಜಿಸಲು ಸರ್ಕಾರ ಪ್ರತ್ಯೇಕ ಇಲಾಖೆಯನ್ನು ರಚಿಸಬೇಕು.

ಸಾಂಕ್ರಾಮಿಕ ರೋಗ ಹರಡುವಿಕೆಯ ಪರಿಣಾಮವಾಗಿ ಲಾಕ್‌ಡೌನ್ ಇತ್ಯಾದಿಗಳಿಂದ ಸಾಕಷ್ಟು ನಷ್ಟ ಅನುಭವಿಸಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಮಸ್ಯೆಗಳನ್ನು ಪರಿಶೀಲಿಸುವ ಜಾಣ ನಿರ್ಧಾರವೊಂದನ್ನು ಸರ್ಕಾರ ತೆಗೆದುಕೊಂಡಿದೆ.

ಎಂಎಸ್‌ಎಂಇಗಳಿಗೆ ಪ್ರಸಕ್ತ ವರ್ಷದಲ್ಲಿ ಸಾಲಕ್ಕೆ ಹೆಚ್ಚಿನ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು. ಇದರಿಂದ ಅವು ಡಿಜಿಟಲ್ ಚಾನೆಲ್‌ಗಳ ಮೂಲಕ ಚೇತರಿಸಿಕೊಳ್ಳಬಹುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಆದರೆ, ಸರ್ಕಾರವು ಇದಕ್ಕಾಗಿ ಉತ್ತೇಜಕ ಪ್ಯಾಕೇಜ್‌ ಒಂದನ್ನು ಘೋಷಿಸದೆ ಉದ್ಯಮವನ್ನು ನಿರಾಶೆಗೊಳಿಸಿದೆ.

ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು (ECLHS) ಮಾರ್ಚ್ 2022ರಿಂದ ಮಾರ್ಚ್ 2023ರವರೆಗೆ ವಿಸ್ತರಿಸಲಾಗಿದೆ. ಇದು ಸುಮಾರು 130 ಲಕ್ಷ ಎಂಎಸ್ಎಂಇಗಳಿಗೆ ಹೆಚ್ಚುವರಿ ಸಾಲವನ್ನು ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದರ ಗ್ಯಾರಂಟಿ ಸೌಲಭ್ಯವನ್ನು 50,000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ಕೋಟಿ ರೂ.ಗೆ (ಹತ್ತು ಪಟ್ಟು) ವಿಸ್ತರಿಸಲಾಗಿದೆ.

ಆದರೂ, ಒಟ್ಟು ಜಿಡಿಪಿಗೆ 9% ಕೊಡುಗೆ ನೀಡುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ತಕ್ಷಣದ ಯಾವ ಅನುಕೂಲಗಳನ್ನೂ ಕಲ್ಪಿಸುವುದಿಲ್ಲ. ಎಂಎಸ್ಎಂಇಗಳು ಒಂದು-ಬಾರಿಯ ಸಾಲ ಮನ್ನಾ ಅಥವಾ ಕನಿಷ್ಠ ಸಾಲ ಅಥವಾ ಬಡ್ಡಿಯ ಪಾವತಿ ಮೇಲೆ ಮೊರಾಟೋರಿಯಂ ಅನ್ನು ನಿರೀಕ್ಷಿಸುತ್ತವೆ. ಆದರೆ, ನಿಸ್ಸಂಶಯವಾಗಿಯೂ ಸರ್ಕಾರ ಈ ನಿರೀಕ್ಷೆಗೆ ಸ್ಪಂದಿಸಿಲ್ಲ. ಏಕೆಂದರೆ, ದೇಶವು ಇನ್ನೂ ಸಾಂಕ್ರಾಮಿಕ ಪಿಡುಗಿನ ಪರಿಣಾಮಗಳನ್ನು ಎದುರಿಸುತ್ತಿರುವಾಗ ಸರ್ಕಾರ ತುಂಬ ಔದಾರ್ಯವನ್ನು ತೋರುವ ಸ್ಥಿತಿಯಲ್ಲಿಲ್ಲ.

ಡಿಜಿಟಲೀಕರಣದ ವಿಷಯಕ್ಕೆ ಬಂದರೆ, ಈಗಿನ ಸರ್ಕಾರವು ಆ ಕುರಿತಾಗಿ ಹೆಚ್ಚು ಮಾತನಾಡುತ್ತದೆ ಮತ್ತು ಅದಕ್ಕೆ ಒತ್ತನ್ನೂ ನೀಡುತ್ತದೆ. ಡಿಜಿಟಲ್ ಕರೆನ್ಸಿಗೆ ಉತ್ತೇಜನ, ಕ್ರಿಪ್ಟೋಕರೆನ್ಸಿಗಳಿಗೆ ತೆರಿಗೆ ವಿಧಿಸುವುದು, ರೈತರಿಗೆ ಸಬ್ಸಿಡಿ ವರ್ಗಾವಣೆ, ಭೂ ದಾಖಲೆ ಡಿಜಿಟಲೀಕರಣ, ವಿಶೇಷ ಡಿಜಿಟಲ್ ವಿಶ್ವವಿದ್ಯಾನಿಲಯದ ಸ್ಥಾಪನೆ, ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ಮೂಲಕ ಗ್ರಾಮೀಣ ಭಾರತದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆ, ಆರೋಗ್ಯ ಸೇವೆಗಳ ಆನ್‌ಲೈನ್ ವಿತರಣೆ ಕಾರ್ಯವಿಧಾನ ಮುಂತಾದವುಗಳ ಬಗ್ಗೆ ಸರ್ಕಾರವು ಮಾತನಾಡಿದೆ.

ಈಗ, ಡಿಜಿಟಲ್ ಕರೆನ್ಸಿ ಮತ್ತು ಕ್ರಿಪ್ಟೋಕರೆನ್ಸಿಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ. ತೆರಿಗೆ ವಿಧಿಸುವ ಮೂಲಕ ಸರ್ಕಾರವು ಕ್ರಿಪ್ಟೋಕರೆನ್ಸಿಗಳನ್ನು ಕಾನೂನುಬದ್ಧಗೊಳಿಸುತ್ತಿದೆಯೇ? ಎಂಬ ಪ್ರಶ್ನೆಯೂ ಮೂಡುತ್ತಿದೆ.

ಭಾರತವು ನೂರು ಪ್ರತಿಶತ ಸಾಕ್ಷರ ರಾಷ್ಟ್ರವಾಗಲು ಇನ್ನೂ ದೂರವಿರುವಾಗ ಪ್ರಮುಖ ವಹಿವಾಟುಗಳು ಆನ್‌ಲೈನ್‌ನಲ್ಲಿ ನಡೆಯುವುದನ್ನು ನಾವು ಹೇಗೆ ನಿರೀಕ್ಷಿಸಬಹುದು? ಭೌತಿಕ ವ್ಯವಹಾರಗಳನ್ನು ಡಿಜಿಟಲ್ ವ್ಯವಹಾರಗಳಿಗೆ, ಆಫ್‌ಲೈನ್ ಶಿಕ್ಷಣವನ್ನು ಆನ್‌ಲೈನ್ ಶಿಕ್ಷಣಕ್ಕೆ ಮತ್ತು ಆಫ್‌ಲೈನ್ ಬ್ಯಾಂಕಿಂಗ್ ಅನ್ನು ಆನ್‌ಲೈನ್ ಬ್ಯಾಂಕಿಂಗ್‌ಗೆ ಪರಿವರ್ತಿಸಲು ಅರಿವು ಮತ್ತು ಮೂಲಸೌಕರ್ಯ ಒದಗಿಸುವ ವಿಷಯದಲ್ಲಿ ಸಾಕಷ್ಟು ತಯಾರಿಯ ಅಗತ್ಯವಿದೆ ಅನ್ನಿಸುತ್ತದೆ.

ಲೇಖಕರು: ಗಿರೀಶ್​ ಲಿಂಗಣ್ಣ, ಕೈಗಾರಿಕೋದ್ಯಮಿ ಮತ್ತು ರಕ್ಷಣಾ ವಿಷಯಗಳ ತಜ್ಞ

ಓದಿ: ಬೆಳಗಾವಿ ಎಪಿಎಂಸಿ ‌ಕಾರ್ಯದರ್ಶಿಗೆ ಮುತ್ತಿಗೆ: ಮಳಿಗೆ ವಾಪಸ್ ಪಡೆದು ಹಣ ಮರಳಿಸುವಂತೆ ವ್ಯಾಪಾರಿಗಳ ಒತ್ತಾಯ

Last Updated :Feb 4, 2022, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.