ಖೈರತಾಬಾದ್ನಲ್ಲಿ 63 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆ: ನೇರಪ್ರಸಾರ
Published: Sep 18, 2023, 11:44 AM

ದೇಶದೆಲ್ಲೆಡೆ ಗಣೇಶ ಹಬ್ಬಕ್ಕೆ ಇಂದು ಚಾಲನೆ ದೊರೆತಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್ ನಗರದ ಪ್ರಸಿದ್ಧ ಖೈರತಾಬಾದ್ ಮಹಾಗಣಪತಿ ಮಹೋತ್ಸವ ಅದ್ಧೂರಿಯಾಗಿ ಆರಂಭಗೊಂಡಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಇಲ್ಲಿನ ಗಣೇಶ ವಿಗ್ರಹವು ಅದರ ಎತ್ತರ ಮತ್ತು ಅಲ್ಲಿ ಬಳಸುವ ಲಡ್ಡಿನ ಗಾತ್ರದಿಂದ ಬಹಳ ವಿಶೇಷ. ಪ್ರತಿ ವರ್ಷ ಗಣೇಶ ಮಂಡಳಿಯವರು ಗಣಪತಿ ಮೂರ್ತಿಯ ಎತ್ತರವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಈ ವರ್ಷ 63 ಅಡಿ ಎತ್ತರದಲ್ಲಿ ಗಣೇಶನ ವಿಗ್ರಹ ಸ್ಥಾಪಿಸಲಾಗಿದೆ.
ಬಾಲಗಂಗಾಧರ ತಿಲಕ್ ಅವರಿಂದ ಪ್ರೇರಣೆಗೊಂಡು, ಸಿಂಗಾರಿ ಶಂಕರಯ್ಯ ಎಂಬವರು 1954ರಲ್ಲಿ ಒಂದು ಅಡಿ ಎತ್ತರದ ಗಣೇಶ ಮೂರ್ತಿಯನ್ನು ಖೈರತಾಬಾದ್ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ಗಣೇಶ ಚೌತಿ ಆಚರಿಸಿದ್ದರು. ನಂತರ ವರ್ಷಂಪ್ರತಿ ಒಂದೊಂದೇ ಅಡಿ ಹೆಚ್ಚಿಸುತ್ತಾ 2014ರವರೆಗೆ 60 ಅಡಿ ಎತ್ತರದ ಗಣೇಶ ವಿಗ್ರಹ ಸ್ಥಾಪಿಸಿ, ಚತರ್ಥಿ ಆಚರಿಸಲಾಗುತ್ತಿದೆ. 2019ರಲ್ಲಿ 61 ಅಡಿ ಎತ್ತರದ ಗಣೇಶ ಮೂರ್ತಿ ಮಾಡಿ ಹಬ್ಬ ಆಚರಿಸಲಾಗಿತ್ತು. ಈ ವರ್ಷ 63 ಅಡಿ ಎತ್ತರದ ದಶಮುಖ ವಿದ್ಯಾಗಣಪತಿಯ ವಿಗ್ರಹವನ್ನಿಡಲಾಗಿದ್ದು, ಅದ್ಧೂರಿಯಾಗಿ ಆಚರಣೆ ನಡೆಯುತ್ತಿದೆ. ಗಣೇಶನಿಗೆ 75 ಅಡಿ ಉದ್ದದ ಕೈಯಿಂದ ನೇಯ್ದ ಕೈಮಗ್ಗ ದಾರ, 75 ಅಡಿ ಉದ್ದದ ಗರಿಕಾ ಮಾಲೆ ಅರ್ಪಿಸಲಾಗಿದೆ.