LIVE: ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Published: Sep 15, 2023, 9:55 AM

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ 'ಸಂವಿಧಾನ ಪೀಠಿಕೆ ಓದು' ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕಾರ್ಯಕ್ರಮ ಉದ್ಘಾಟನೆಯಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಉಪಸ್ಥಿತರಿದ್ದರು.
ಸುಮಾರು 5000 ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ, ದೇಶ, ವಿದೇಶಗಳಿಂದ 2.27 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಚಿವಾಲಯದವರೆಗಿನ ಎಲ್ಲ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಓದು ನಡೆಯಲಿದೆ.
ಸಂಘ- ಸಂಸ್ಥೆಗಳು, ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕ್ಗಳು ಕೂಡ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲ ತಾವಿರುವ ಸ್ಥಳದಲ್ಲೇ ಸಂವಿಧಾನ ಪೀಠಿಕೆ ಓದಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸೆಪ್ಟಂಬರ್ 15 ರಂದು ವಿಧಾನಸೌಧದ ಮುಂಭಾಗ ಚಾಲನೆ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಈ ಹಿಂದೆ ತಿಳಿಸಿದ್ದರು. ವಿಧಾನಸೌಧದಲ್ಲಿ ಸೆಪ್ಟಂಬರ್ 13ರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಹಾಗಾಗಿ, ಸೆ. 15 ರಂದು ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದರು.
ಓದಿ: ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 15 ರಂದು ಸಿಎಂ ಸಿದ್ದರಾಮಯ್ಯ ಚಾಲನೆ : ಸಚಿವ ಎಚ್ ಸಿ ಮಹದೇವಪ್ಪ