ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಹಡಗು ಹೈಜಾಕ್: ಗಾಜಾ ದಾಳಿ ನಿಲ್ಲಿಸಲು ಹೌತಿ ಬಂಡುಕೋರರ ಎಚ್ಚರಿಕೆ

ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಹಡಗು ಹೈಜಾಕ್: ಗಾಜಾ ದಾಳಿ ನಿಲ್ಲಿಸಲು ಹೌತಿ ಬಂಡುಕೋರರ ಎಚ್ಚರಿಕೆ
India bound ship hijacked: ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್‌ನ ಸರಕು ಸಾಗಣೆ ಹಡಗನ್ನು ಯೆಮೆನ್‌ನಿಂದ ಹೌತಿ ಬಂಡುಕೋರರು ಅಪಹರಿಸಿದ್ದಾರೆ. ಈ ಮೂಲಕ ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದ ನಡುವೆ ಯೆಮೆನ್‌ನ ಹೌತಿ ಬಂಡುಕೋರರು ಮುನ್ನೆಲೆಗೆ ಬಂದಿದ್ದಾರೆ. ಸೌದಿ ಅರೇಬಿಯಾದ ಮಾಧ್ಯಮಗಳ ವರದಿ ಪ್ರಕಾರ, ಈ ಬಂಡುಕೋರರು ಭಾನುವಾರ ಕೆಂಪು ಸಮುದ್ರದಲ್ಲಿ 25 ಸಿಬ್ಬಂದಿ ಇದ್ದ ಹಡಗನ್ನು ಹೈಜಾಕ್ ಮಾಡಿದ್ದಾರೆ. ಈ ಹಡಗು ಇಸ್ರೇಲ್‌ಗೆ ಸೇರಿದೆ. ಇಸ್ರೇಲ್ ಈ ಬಗ್ಗೆ ವಿಭಿನ್ನ ಹೇಳಿಕೆ ನೀಡಿದೆ. ಹೌತಿ ಬಂಡುಕೋರರಿಂದ ವಶಪಡಿಸಿಕೊಂಡ ಹಡಗು ಟರ್ಕಿಗೆ ಸೇರಿದೆಯೇ ಹೊರತು ನಮ್ಮದ್ದಲ್ಲ ಎಂದು ತಿಳಿಸಿದೆ.
ಇಸ್ರೇಲ್ ರಕ್ಷಣಾ ಪಡೆ ಎಕ್ಸ್ ಪೋಸ್ಟ್‌ನಲ್ಲಿ, 'ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನು ಅಪಹರಿಸಿದ್ದು ಇದು ಜಾಗತಿಕ ಮಟ್ಟದಲ್ಲಿ ಅತ್ಯಂತ ಗಂಭೀರವಾದ ಘಟನೆ. ಇದು ಒಬ್ಬ ಇಸ್ರೇಲಿ ಪ್ರಜೆಯೂ ಇಲ್ಲದ ಹಡಗು. ಈ ಹಡಗು ಅಂತರರಾಷ್ಟ್ರೀಯ ನಾಗರಿಕ ಸಿಬ್ಬಂದಿಯೊಂದಿಗೆ ಟರ್ಕಿಯಿಂದ ಭಾರತಕ್ಕೆ ಹೊರಟಿತ್ತು' ಎಂದು ಮಾಹಿತಿ ನೀಡಿದೆ. ವರದಿಯಂತೆ, ಹಡಗಿನ ಹೆಸರು ಗ್ಯಾಲಕ್ಸಿ ಲೀಡರ್ ಎಂದು ತಿಳಿದುಬಂದಿದೆ.
ಬಹಾಮಾಸ್ ಧ್ವಜ ಈ ಹಡಗಿನಲ್ಲಿತ್ತು. ಬ್ರಿಟಿಷ್ ಕಂಪನಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಭಾಗಶಃ ಇಸ್ರೇಲಿ ಉದ್ಯಮಿ ಅಬ್ರಹಾಂ ಉಂಗಾರ್ ಅವರ ಒಡೆತನದಲ್ಲಿದೆ. ಪ್ರಸ್ತುತ ಇದನ್ನು ಜಪಾನಿನ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕ ದಾಳಿ ನಡೆಸಿತು. ನಂತರ ಇಸ್ರೇಲ್ ನಿರಂತರವಾಗಿ ಗಾಜಾ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಹೌತಿಗಳು ಇಸ್ರೇಲ್ ಅನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಹಡಗಿನಲ್ಲಿ ಉಕ್ರೇನ್, ಬಲ್ಗೇರಿಯಾ, ಫಿಲಿಪ್ಪೀನ್ಸ್ ಮತ್ತು ಮೆಕ್ಸಿಕೊ ದೇಶದ ಸಿಬ್ಬಂದಿ ಇದ್ದಾರೆ. ಈ ಹಡಗಿನಲ್ಲಿ ಇಸ್ರೇಲ್ ಮತ್ತು ಭಾರತದ ಪ್ರಜೆಗಳಿಲ್ಲ ಎಂಬುದು ದೃಢಪಟ್ಟಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದ ಹೌತಿ ಬಂಡುಕೋರರು ಹತಾಶರಾಗಿದ್ದಾರೆ. ಹೌತಿಗಳು ಇಸ್ರೇಲಿ ಹಡಗುಗಳ ವಿರುದ್ಧ ಬೆದರಿಕೆ ಹಾಕಿದ್ದರು. ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ, ಯುದ್ಧ ಉಲ್ಬಣಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಹೌತಿ ಸೇನೆಯ ವಕ್ತಾರ ಯಾಹ್ಯಾ ಸರಿಯಾ, ತಮ್ಮ ಪಡೆಗಳು ಇಸ್ರೇಲಿ ಕಂಪನಿಗಳು ಮತ್ತು ಇಸ್ರೇಲಿ ಧ್ವಜದ ಹಡಗುಗಳನ್ನು ಗುರಿಯಾಗಿಸುತ್ತದೆ ಎಂದು ಭಾನುವಾರ ಘೋಷಿಸಿದ್ದರು.
ಹೈಜಾಕ್ ಆಗಿರುವ ಹಡಗಿನ ಮಾಲೀಕತ್ವದ ಕಂಪನಿಯಲ್ಲಿ ಇಸ್ರೇಲಿ ಉದ್ಯಮಿ ಅಬ್ರಹಾಂ ಉಂಗಾರ್ ಕೂಡ ಪಾಲು ಹೊಂದಿದ್ದಾರೆ. ಇದರ ಹೊರತಾಗಿ ಹಡಗಿಗೆ ಇಸ್ರೇಲ್ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಅಬ್ರಹಾಂ ರಾಮಿ ಉಂಗರ್ ಇಸ್ರೇಲ್‌ನ ಅತ್ಯಂತ ಶ್ರೀಮಂತ ಉದ್ಯಮಿ. ಹಡಗು ಅಪಹರಣದ ಬಗ್ಗೆ ಮಾಧ್ಯಮಗಳು ಅವರನ್ನು ಸಂಪರ್ಕಿಸಿದ್ದು, ವಿವರ ಪಡೆಯದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಂಡುಕೋರರು ಹಡಗನ್ನು ಯೆಮೆನ್ ಕರಾವಳಿಗೆ ಸ್ಥಳಾಂತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 29 ಮ್ಯಾನ್ಮಾರ್ ಸೈನಿಕರನ್ನು ಮರಳಿ ಕಳುಹಿಸಿದ ಭಾರತ
