'ಸಪ್ತಸಾಗರದಾಚೆ ಎಲ್ಲೋ' ತೆಲುಗು ಆವೃತ್ತಿ ಬಿಡುಗಡೆಗೆ ಮುಹೂರ್ತ: ಪ್ರೇಕ್ಷಕರಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

'ಸಪ್ತಸಾಗರದಾಚೆ ಎಲ್ಲೋ' ತೆಲುಗು ಆವೃತ್ತಿ ಬಿಡುಗಡೆಗೆ ಮುಹೂರ್ತ: ಪ್ರೇಕ್ಷಕರಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
Sapta Sagaradaache Ello Telugu version: ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ತೆಲುಗು ಆವೃತ್ತಿ ಇದೇ ತಿಂಗಳಲ್ಲಿ ತೆರೆಕಾಣಲಿದೆ.
ರಕ್ಷಿತ್ ಶೆಟ್ಟಿ. ಕನ್ನಡ ಚಿತ್ರರಂಗದ ಜನಪ್ರಿಯ ನಟ. ಇವರು ನಟಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಅದ್ಭುತ ಕಥೆ, ಕಥೆಯೊಳಗೊಂದು ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದಿಡುವ ನವಿರಾದ ಭಾವನೆ ಇವರು ಅಭಿನಯಿಸುವ ಸಿನಿಮಾಗಳ ವಿಶೇಷತೆ. ಬಹುಶಃ ಈ ಎಲ್ಲ ಕಾರಣಗಳಿಂದ ಸಿನಿಪ್ರಿಯರ ಕಣ್ಣುಗಳಲ್ಲಿ ನೀರು ಜಿನುಗದಿರಲಿ ಕಾರಣಗಳೇ ಇಲ್ಲ. ಅಂತಹ ಅದ್ಭುತ ಕಂಟೆಂಟ್ ಪ್ಲಸ್ ಅಭಿನಯ ಮೋಡಿ ಮಾಡುತ್ತಿದೆ. ಅದರಂತೆ, ನಟ ಕೊನೆಯದಾಗಿ ಕಾಣಿಸಿಕೊಂಡಿರುವ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ' ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಗಡಿ ದಾಟಿ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರನ್ನು ಸೆಳೆಯಲು ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ.
ಸಪ್ತಸಾಗರದಾಚೆ ಎಲ್ಲೋ ತೆಲುಗು ಆವೃತ್ತಿ: 'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ' ಕನ್ನಡದಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದೆ. ಇದೀಗ ಪಕ್ಕದ ರಾಜ್ಯ ತೆಲುಗು ನಾಡಿನ ಮಂದಿಯನ್ನೂ ರಂಜಿಸಲು ಎದುರು ನೋಡುತ್ತಿದೆ. ತೆಲುಗು ಆವೃತ್ತಿ ಬಿಡುಗಡೆಗೆ ದಿನ ನಿಗದಿಯೂ ಆಗಿದೆ. ಸೆಪ್ಟೆಂಬರ್ 22 ರಿಂದ ಚಿತ್ರಮಂದಿರಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ' ವೀಕ್ಷಿಸಬಹುದು ಎಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.
-
As Sapta Sagardaache Ello’s love resounds across Karnataka, our cinema is now poised to capture hearts in a whole new arena! Releasing ‘Sapta Sagaralu Dhaati’ in Telugu on 22nd of September🤍
— Rakshit Shetty (@rakshitshetty) September 15, 2023
Our dear Telugu audience, we hope you accept our labour of love as your own🤗… pic.twitter.com/e8FazGqYc3
'ಸಪ್ತಸಾಗರಾಲು ದಾಟಿ'....: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ಮತ್ತು ಇನ್ಸ್ಟಾಗ್ರಾಮ್ನಲ್ಲಿ 'ಸಪ್ತಸಾಗರಾಲು ದಾಟಿ' ಎಂಬ ಶೀರ್ಷಿಕೆಯ ಪೋಸ್ಟರ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ''ಸಪ್ತಸಾಗರದಾಚೆ ಎಲ್ಲೋ ಕಥೆಯ ಪ್ರೇಮ ಕರುನಾಡಿನಾದ್ಯಂತ ಪ್ರತಿಧ್ವನಿಸುತ್ತಿರುವ ಈ ಹೊತ್ತಿನಲ್ಲಿ, ನಮ್ಮ ಸಿನಿಮಾ ಹೊಸ ರಂಗದ ಹೃದಯಗಳನ್ನು ಸೆಳೆಯಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 22 ರಂದು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗಿನ ಪ್ರೀತಿಯ ಪ್ರೇಕ್ಷಕರೇ, ನಮ್ಮ ಪ್ರೀತಿಯ ಶ್ರಮವನ್ನು ನೀವು ನಿಮ್ಮ ಸ್ವಂತದ್ದೆಂದು ಸ್ವೀಕರಿಸುತ್ತೀರಿ ಎಂದು ಭಾವಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ತಮ್ಮ ಮೆಚ್ಚುಗೆ, ಸಂತಸ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಉಳಿದ ಭಾಷೆಗಳಲ್ಲೂ ಸಿನಿಮಾ ಹೊರತರುವಂತೆ ಬೇಡಿಕೆ ಇಡುತ್ತಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ' ಕನ್ನಡ ಅವತರಣಿಕೆ ಸೆಪ್ಟೆಂಬರ್ 1 ರಂದು ತೆರೆಕಂಡಿದೆ. ರುಕ್ಮಿಣಿ ವಸಂತ್ ನಟನೆಗೂ ಭಾರಿ ಮೆಚ್ಚುಗೆ ಸಿಕ್ಕಿದೆ. ಹೇಮಂತ್ ಎಂ.ರಾವ್ ನಿರ್ದೇಶನ ಈ ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿದೆ. ಚಿತ್ರದ ಮತ್ತೊಂದು ಭಾಗ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ಅಕ್ಟೋಬರ್ 20ಕ್ಕೆ ರಿಲೀಸ್ ಆಗಲಿದೆ.
