ಮರಾಠಿ ಸಿನಿಮಾಗಳ ಮೇಲೆ ಪಠಾಣ್​ ಪರಿಣಾಮ: ಚಿತ್ರಮಂದಿರಗಳ ಮಾಲೀಕರಿಗೆ ಎಂಎನ್ಎ​ಸ್ ಎಚ್ಚರಿಕೆ!!

author img

By

Published : Jan 25, 2023, 8:00 PM IST

Pathaan Movie Controversy

ದೇಶದ ಹಲವೆಡೆ ಪಠಾಣ್​ ಸಿನಿಮಾ ಸಲುವಾಗಿ ಆಕ್ರೋಶ ವ್ಯಕ್ತವಾಗಿದೆ.

ನಟ ಶಾರುಖ್​ ಖಾನ್​, ನಟಿ ದೀಪಿಕಾ ಪಡುಕೋಣೆ, ನಟ ಜಾನ್​ ಅಬ್ರಹಾಂ ಅಭಿನಯದಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಪಠಾಣ್​ ಸಿನಿಮಾ ಇಂದು ಸುಮಾರು 100 ದೇಶಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಮೆಚ್ಚುಗೆ ಜೊತೆಗೆ ಪ್ರತಿಭಟನೆಯ ಕಾವನ್ನೂ ಪಡೆದಿದೆ. ಬಿಹಾರದ ಭಾಗಲ್ಪುರದಲ್ಲಿ ಪಠಾಣ್ ಬಿಡುಗಡೆಗೆ ಮುನ್ನವೇ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ವಿಶ್ವ ಹಿಂದೂ ಪರಿಷತ್, ಎಬಿವಿಪಿ ಮತ್ತು ಬಜರಂಗದಳ ಸದಸ್ಯರು ಭಾಗಲ್ಪುರದ ಚಿತ್ರಮಂದಿರದ ಆವರಣದಲ್ಲಿ ಹಾಕಲಾಗಿದ್ದ ಪಠಾಣ್​ ಪೋಸ್ಟರ್ ಅನ್ನು ಹರಿದು ಪ್ರತಿಭಟನೆ ನಡೆದಿದ್ದಾರೆ. ಚಿತ್ರ ಬಿಡುಗಡೆ ಆದ ಬಳಿಕ ಸಿಡಿದೆದ್ದ ಯುವಕರು ಪೋಸ್ಟರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬಿಹಾರದಲ್ಲಿ ಪಠಾಣ್ ಪ್ರತಿಭಟನೆ: ಶಾರುಖ್ ಖಾನ್ ಅವರ ಪಠಾಣ್​ ಚಿತ್ರಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿವೆ. ಭಾಗಲ್ಪುರದ ಹಲವು ಸಂಘಟನೆಗಳು ಈ ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಒತ್ತಡ ಏರಿವೆ.

ಬೇಶರಂ ರಂಗ್​ ಹಾಡಿಗೆ ವಿರೋಧ: ದಿ ಕಾಶ್ಮೀರ್ ಫೈಲ್ಸ್​ ನಂತಹ ಸತ್ಯವನ್ನು ತೋರಿಸುವ ಚಿತ್ರ ಪ್ರದರ್ಶನವಾಗದಿರುವುದು ಭಾರತದ ದೌರ್ಭಾಗ್ಯ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ. ಮತ್ತೊಂದೆಡೆ, ನಿರ್ದಿಷ್ಟ ಧರ್ಮವನ್ನು ಗುರಿಯಾಗಿಟ್ಟುಕೊಂಡು ಬೇಶರಂ ರಂಗ್​ ಹಾಡು ಮಾಡಿರುವುದು ನಿಜಕ್ಕೂ ದುರಂತ ಎಂದು ಹೇಳಿದ್ದಾರೆ.

ಮರಾಠಿ ಚಿತ್ರರಂಗದ ಮೇಲೂ ಪರಿಣಾಮ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ಸ್ವಪ್ನೀಲ್ ಜೋಷಿ, ಸುಬೋಧ್ ಭಾವೆ ಅವರ ವಾಲ್ವಿ ಸಿನಿಮಾ ಮತ್ತು ರಿತೇಶ್ ದೇಶಮುಖ್, ಜೆನಿಲಿಯಾ ಅಭಿನಯದ ವೇದ್​ ಸೇರಿದಂತೆ ಕೆಲವು ಮರಾಠಿ ಚಿತ್ರಗಳು ಬಿಡುಗಡೆಯಾದವು. ಈ ಚಿತ್ರಗಳಿಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ಪಠಾಣ್ ಬಿಡುಗಡೆ ಆದ ನಂತರ, ಅನೇಕ ಚಿತ್ರಮಂದಿರಗಳು ಪಠಾಣ್‌ ಸಿನಿಮಾಗೆ ಒತ್ತು ಕೊಟ್ಟವು. ಈ ಮೂಲಕ ಪಠಾಣ್​​ ಮರಾಠಿ ಚಿತ್ರರಂಗದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

ಮರಾಠಿ ಶೋ ಕ್ಯಾನ್ಸಲ್​​, ಆಕ್ರೋಶ: ನಟ ರಿತೇಶ್ ದೇಶ್ ಮುಖ್ ಅಭಿನಯದ ವೇದ್ ಚಿತ್ರ ಕಳೆದ 25 ದಿನಗಳಿಂದ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ವಾಲ್ವಿ ಸಿನಿಮಾ ಬಿಡುಗಡೆ ಆಗಿ ಎರಡನೇ ವಾರದಲ್ಲೂ ಉತ್ತಮ ಗಳಿಕೆ ಮಾಡಿದೆ. ಬಾಂಬೂ ಮತ್ತು ಪಿಕ್ಕೊಲೊ ಚಿತ್ರ ಕೂಡ ಬಿಡುಗಡೆಯಾಗಿದೆ. ಈ ಯಾವುದೇ ಮರಾಠಿ ಚಿತ್ರಗಳು ಉತ್ತಮ ಮಲ್ಟಿಪ್ಲೆಕ್ಸ್‌ಗಳನ್ನು ಅಥವಾ ಉತ್ತಮ ಥಿಯೇಟರ್‌ಗಳನ್ನು ಪಡೆಯುವುದಿಲ್ಲ. ಅದೇ ಪಠಾಣ್​ ಚಿತ್ರ ಎಲ್ಲೆಡೆ ಪ್ರದರ್ಶನಗೊಳ್ಳುತ್ತಿದೆ. ಮಲ್ಟಿಫ್ಲೆಕ್ಸ್​​ ಮಾಲೀಕರು ಮರಾಠಿ ಸಿನಿಮಾಗಳಿಗೆ ಉತ್ತಮ ಥಿಯೇಟರ್ ಮತ್ತು ಮಲ್ಟಿಫ್ಲೆಕ್ಸ್ ನೀಡದಿದ್ದರೆ ಮಹಾರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಮರಾಠಿ ಸಿನಿಮಾಗಳಿಗೆ ಥಿಯೇಟರ್‌ಗಳು ಹೇಗೆ ಸಿಗುವುದಿಲ್ಲವೋ ನೋಡೋಣ ಎಂದು ಎಂಎನ್​ಸ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಫಿಲಂ ಸೇನೆಯ ಅಧ್ಯಕ್ಷ ಅಮೇಯ್ ಖೋಪ್ಕರ್ ಎಚ್ಚರಿಕೆ ನೀಡಿದ್ದಾರೆ.

ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ: ಪಠಾಣ್ ಚಿತ್ರದಿಂದಾಗಿ ಮರಾಠಿ ಚಿತ್ರಗಳ ಪ್ರದರ್ಶನ ರದ್ದುಪಡಿಸಿದರೆ ಥಿಯೇಟರ್ ಮಾಲೀಕರು ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಂಎನ್​​ಎಸ್​ನ ಚಲನಚಿತ್ರ ಸೇನೆ ಅಧ್ಯಕ್ಷ ಅಮೇಯ್ ಖೋಪ್ಕರ್ ಎಚ್ಚರಿಸಿದ್ದಾರೆ. ಪಠಾಣ್ ಚಿತ್ರದಿಂದಾಗಿ ರದ್ದಾದ ಮರಾಠಿ ಚಿತ್ರಗಳ ಪ್ರದರ್ಶನಗಳನ್ನು ತಕ್ಷಣವೇ ಪುನರಾರಂಭಿಸಬೇಕು. ಇಲ್ಲದಿದ್ದರೆ ಎಂಎನ್‌ಎಸ್ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ.

ಇಂದೋರ್​ನಲ್ಲಿ ಪಠಾಣ್​ ಶೋ ರದ್ದು: ಕೆಲ ಸಂಘಟನೆಗಳ ತೀವ್ರತರನಾದ ಪ್ರತಿಭಟನೆಯ ನಂತರ ಮಧ್ಯಪ್ರದೇಶದ ಇಂದೋರ್ ನಗರದ ಕೆಲವು ಚಿತ್ರಮಂದಿರಗಳಲ್ಲಿ ಪಠಾಣ್​​ ಸಿನಿಮಾದ ಬೆಳಗಿನ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು. ಚಿತ್ರದ ಬೇಶರಂ ರಂಗ್ ಹಾಡು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಕೆಲವು ಭಾಗಗಳಲ್ಲಿ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

ಹಿಂದೂ ಜಾಗರಣ ಸಮಿತಿಯ ಕಾರ್ಯಕರ್ತರು ಇಲ್ಲಿನ ಸಪ್ನಾ ಸಂಗೀತಾ ಚಿತ್ರಮಂದಿರದಲ್ಲಿ ಕೇಸರಿ ಧ್ವಜವನ್ನು ಪ್ರದರ್ಶಿಸಿ, ಪಠಾಣ್​​ ಚಲನಚಿತ್ರವನ್ನು ವಿರೋಧಿಸಿ ಹನುಮಾನ್ ಚಾಲೀಸವನ್ನು ಪಠಿಸಿದರು. ಅವರಲ್ಲಿ ಕೆಲವರು ಕೋಲುಗಳನ್ನು ಹಿಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲ ಪ್ರತಿಭಟನಾಕಾರರು ಈ ಚಿತ್ರಮಂದಿರದೊಳಗೆ ಪ್ರವೇಶಿಸಿ ಪ್ರೇಕ್ಷಕರನ್ನು ಹೊರಗೆ ಹೋಗುವಂತೆ ಕೇಳಿಕೊಂಡರು. ಈ ಥಿಯೇಟರ್​ನಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಶಾರುಖ್ ಖಾನ್ ವಿರುದ್ಧ ಘೋಷಣೆ: ಇನ್ನು ಬಜರಂಗದಳದ ಕಾರ್ಯಕರ್ತರು ನಗರದ ಕಸ್ತೂರ್ ಚಿತ್ರಮಂದಿರದಲ್ಲಿ ಪಠಾಣ್ ವಿರುದ್ಧ ಪ್ರತಿಭಟನೆ ನಡೆಸಿ ಶಾರುಖ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂಘಟನೆಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಎರಡೂ ಚಿತ್ರಮಂದಿರಗಳಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ: ಪಠಾಣ್​ ಚಿತ್ರತಂಡಕ್ಕೆ ಶಾಕ್​​: ಆನ್​ಲೈನ್​ನಲ್ಲಿ ಶಾರುಖ್​​ ಸಿನಿಮಾ ಲೀಕ್​?!

ಸಹಾಯಕ ಪೊಲೀಸ್ ಕಮಿಷನರ್ ದಿಶೇಶ್ ಅಗರವಾಲ್ ಮಾಹಿತಿ ನೀಡಿದ್ದು, ಹಿಂದೂ ಜಾಗರಣ ಸಮಿತಿ ಮತ್ತು ಬಜರಂಗದಳದ ಕಾರ್ಯಕರ್ತರು ಪಠಾನ್ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಅದರ ಬೆಳಗ್ಗಿನ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಸಿನಿಮಾದ ಮುಂದಿನ ಪ್ರದರ್ಶನಗಳ ಕುರಿತು ಕೇಳಲಾದ ಪ್ರಶ್ನೆಗೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.