5 ವರ್ಷಗಳ ನಂತರ 'ರಾಧಾಕೃಷ್ಣ' ಧಾರಾವಾಹಿ ಮುಕ್ತಾಯ: ಅನುಭವ ಹಂಚಿಕೊಂಡ ಸುಮೇಧ್, ಮಲ್ಲಿಕಾ

5 ವರ್ಷಗಳ ನಂತರ 'ರಾಧಾಕೃಷ್ಣ' ಧಾರಾವಾಹಿ ಮುಕ್ತಾಯ: ಅನುಭವ ಹಂಚಿಕೊಂಡ ಸುಮೇಧ್, ಮಲ್ಲಿಕಾ
1,145 ಕಂತುಗಳನ್ನು ಪೂರ್ಣಗೊಳಿಸಿದ ಬಳಿಕ ರಾಧಾಕೃಷ್ಣ ಧಾರಾವಾಹಿ ಮುಕ್ತಾಯಗೊಂಡಿದೆ. ಕೃಷ್ಣ-ರಾಧೆಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಮೆಚ್ಚುಗೆ ಗಳಿಸಿದ ನಟ ಸುಮೇಧ್ ಮುದ್ಗಲ್ಕರ್ ಮತ್ತು ಮಲ್ಲಿಕಾ ಸಿಂಗ್ ಐದು ವರ್ಷಗಳ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ಕೃಷ್ಣ' ಪೌರಾಣಿಕ ಧಾರಾವಾಹಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಸೀರಿಯಲ್ಗಳಲ್ಲಿ ಒಂದು. ಇದು ಕೃಷ್ಣ-ರಾಧೆಯರ ಅಮರ ಮಧುರ ಪ್ರೇಮಕಥೆಯಾಗಿದ್ದು, 1,145 ಕಂತುಗಳನ್ನು ಪೂರ್ಣಗೊಳಿಸಿದ ನಂತರ ಇದೀಗ ಮುಕ್ತಾಯಗೊಂಡಿದೆ. ಶ್ರೀಕೃಷ್ಣ ಮತ್ತು ರಾಧೆಯ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನಮಾನಸದಲ್ಲಿ ಪ್ರೀತಿ ಗಳಿಸಿರುವ ನಟರಾದ ಸುಮೇಧ್ ಮುದ್ಗಲ್ಕರ್ ಮತ್ತು ಮಲ್ಲಿಕಾ ಸಿಂಗ್ ಸುಮಾರು ಐದು ವರ್ಷಗಳ ತಮ್ಮ ಕೆಲಸದ ಅನುಭವ ಹೇಳಿಕೊಂಡರು.
ಮೊದಲು ಮಾಧ್ಯಮಗಳೊಮದಿಗೆ ಮಾತನಾಡಿದ ಸುಮೇಧ್, "ಹಲವು ಜನಪ್ರಿಯ ನಟರು ಈಗಾಗಲೇ ಶ್ರೀಕೃಷ್ಣನ ಪಾತ್ರವನ್ನು ಅಭಿನಯಿಸಿ ತೋರಿಸಿದ್ದಾರೆ. ನನಗಂತೂ ಈ ಪಾತ್ರ ವಿಶೇಷ ಅನುಭವ ನೀಡಿದೆ. ಆರಂಭದಲ್ಲಿ ಪಾತ್ರಕ್ಕೆ ಹೊಂದಿಕೊಳ್ಳುವುದು ದೊಡ್ಡ ಕೆಲಸವಾಗಿತ್ತು. ಬಳಿಕ ಇದು ನನ್ನ ಪ್ರಯಾಣ, ನನ್ನ ವಿರುದ್ಧದ ಸ್ಪರ್ಧೆ ಎಂದಂರಿತುಕೊಂಡೆ" ಎಂದರು.
"ಸುಮಾರು ಐದು ವರ್ಷಗಳ ಕಾಲ ನಾನು 'ರಾಧಾಕೃಷ್ಣ' ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಇಲ್ಲಿರುವವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಅಭಿಮಾನಿಗಳು ನನ್ನ ನಟನೆಗೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಧಾರಾವಾಹಿ ನನ್ನ ಜೀವನವನ್ನು ನಾನು ಊಹಿಸಲಾಗದಷ್ಟು ಮಟ್ಟಿಗೆ ಬದಲಿಸಿದೆ. ಇದೀಗ ಶೂಟಿಂಗ್ ಸೆಟ್ ಅನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ವಿವರಿಸಿದರು.
ಇದನ್ನೂ ಓದಿ: ' ರಾಧಾಕೃಷ್ಣ' ಧಾರಾವಾಹಿಯಲ್ಲಿ ಮಹತ್ವದ ತಿರುವು...ಇಬ್ಬರೂ ಏಕೆ ದೂರಾಗ್ತಾರೆ...?
ರಾಧಾ ಪಾತ್ರವನ್ನು ನಿರ್ವಹಿಸಿದ ಮಲ್ಲಿಕಾ ಅವರು ಆರಂಭದಲ್ಲಿ ತಮ್ಮ ಪಾತ್ರ ಎಷ್ಟು ಕಠಿಣವಾಗಿತ್ತು ಎಂದು ನೆನಪಿಸಿಕೊಂಡರು. "ರಾಧಾ ಪಾತ್ರವನ್ನು ನಾನು ನಿರ್ವಹಿಸಿರುವುದು ಒಂದು ಅದ್ಭುತ ಅನುಭವ. ನನಗೆ ಮೊದಲು ಈ ಕ್ಯಾರೆಕ್ಟರ್ ನೀಡಿದಾಗ ತುಂಬಾ ಸಂತೋಷಪಟ್ಟೆ. ಧಾರಾವಾಹಿ ಆರಂಭಿಕ ಹಂತದಲ್ಲಿ ನಾನು ರಾಧಾ ಪಾತ್ರವನ್ನು ನಿಭಾಯಿಸಲು ಸ್ವಲ್ಪ ಕಷ್ಟವಾಯಿತು. ಕ್ರಮೇಣ ಪಾತ್ರದಲ್ಲಿ ತೊಡಗಿಸಿಕೊಂಡೆ. ಇಲ್ಲಿ ಬಹಳಷ್ಟು ಕಲಿತಿದ್ದೇನೆ ಜೊತೆಗೆ ಎಲ್ಲಾ ಸವಾಲುಗಳನ್ನು ಮೆಟ್ಟಿನಿಲ್ಲುವ ಶಕ್ತಿ ಹೊಂದಿದ್ದೇನೆ" ಎಂದು ತಿಳಿಸಿದರು.
"ಈಗ ಈ ದೀರ್ಘ ಪ್ರಯಾಣ ಕೊನೆಗೊಂಡಿದೆ. ಸ್ವಲ್ಪ ಭಾವುಕಳಾಗಿದ್ದೇನೆ. ಆದರೆ, ನನ್ನೊಟ್ಟಿಗೆ ಅಸಂಖ್ಯಾತ ನೆನಪುಗಳಿವೆ. ಉತ್ತಮ ಅನುಭವಗಳನ್ನು ಪಡೆದೆನೆಂಬ ಸಂತೋಷವಿದೆ. 'ರಾಧಾಕೃಷ್ಣ' ಧಾರಾವಾಹಿ ಪ್ರದರ್ಶನ ಕೊನೆಗೊಂಡಿದೆ ಎಂಬ ಅಂಶವನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ, ಅದೇ ವಾಸ್ತವ. ಇಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿರುವುದರಿಂದ ಧಾರಾವಾಹಿ ಯಶಸ್ವಿಯಾಯಿತು" ಎಂದು ಖುಷಿ ಹಂಚಿಕೊಂಡರು.
ಇದನ್ನೂ ಓದಿ: ರಾಧೆ ಆಗಿ ಕನ್ನಡ ಕಿರುತೆರೆಪ್ರಿಯರ ಮನ ಗೆದ್ದ ಈ ಚೆಲುವೆ ಯಾರು ಗೊತ್ತಾ...?
ಶ್ರೀಕೃಷ್ಣ ಮತ್ತು ರಾಧೆಯ ಕಥೆಯನ್ನು ಆಧರಿಸಿದ ಪೌರಾಣಿಕ ಸೀರಿಯಲ್ ಅಕ್ಟೋಬರ್ 1, 2018 ರಂದು ಪ್ರಥಮ ಪ್ರದರ್ಶನಗೊಂಡಿತ್ತು. ಈ ಮೂಲಕ ಜನ ರಾಧಾಕೃಷ್ಣರ ಹುಟ್ಟು ಬಾಲ್ಯ , ಪ್ರೀತಿ, ಕಂಸನ ದುಷ್ಟತನ, ಕೃಷ್ಣನ ಹಲವು ಅವತಾರಗಳನ್ನು ಕಣ್ತುಂಬಿಕೊಂಡಿದ್ದರು. ಈ ಎಪಿಸೋಡ್ಗಳು ಜನರಿಗೆ ಬಹಳ ಇಷ್ಟವಾಗಿದ್ದವು. ಅದ್ಧೂರಿ ಮೇಕಿಂಗ್ ಹಾಗೂ ಅದ್ಭುತವೆನಿಸುವ ಗ್ರಾಫಿಕ್ಸ್‌ನಿಂದಾಗಿ ಈ ಪೌರಾಣಿಕ ಧಾರಾವಾಹಿ ಹೊಸ ಟ್ರೆಂಡ್ ಹುಟ್ಟು ಹಾಕಿದೆ.
