ಮುಡಾ ನಿವೇಶನ ಖರೀದಿ: ಸೈನಿಕರಿಗೆ ಶೇ.50ರಷ್ಟು ತೆರಿಗೆ ರಿಯಾಯಿತಿ: ಹೆಚ್.ವಿ.ರಾಜೀವ್

author img

By

Published : Jun 24, 2022, 7:41 AM IST

MUDA President H V Rajeev

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ನಿವೇಶನ ಖರೀದಿಸಲು ಮಾಜಿ, ಹಾಲಿ ಸೈನಿಕರಿಗೆ ರಿಯಾಯಿತಿ ನೀಡಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.

ಮೈಸೂರು: ಮುಡಾ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿನ ಮಾಜಿ, ಹಾಲಿ ಸೈನಿಕರಿಗೆ ರಿಯಾಯಿತಿ ನೀಡಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು. ಮುಡಾ ಕಚೇರಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಡಾವಣೆ ಒಂದು ನಿವೇಶನ ಸೀಮಿತವಾದಂತೆ 2011ರ ಕರ್ನಾಟಕ ಮುನ್ಸಿಪಾಲಿಟಿ ಕಾಯಿದೆ ಅನ್ವಯ ಆಸ್ತಿ ತೆರಿಗೆಯಲ್ಲಿ ಶೇ. 50 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮುಡಾದಿಂದ ಅನುಮೋದನೆಯಾಗಿರುವ ಖಾಸಗಿ ಬಡಾವಣೆಗಳಿಗೆ ಕುಡಿವ ನೀರನ್ನು ಕಬಿನಿ ಮೂಲದಿಂದ ಒದಗಿಸಲು ಅಗತ್ಯವಿರುವ 150 ಕೋಟಿ ರೂ.ಗಳನ್ನು ಪ್ರಾಧಿಕಾರದಿಂದಲೇ ಭರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ ಮುಂದಿನ 50 ವರ್ಷಗಳಿಗೆ ನಗರದ 50 ಸಾವಿರ ಮನೆಗಳಿಗೆ ವಾರದ ಏಳು ದಿನವೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಮುಡಾ ನಿವೇಶನದಲ್ಲಿ ಸೈನಿಕರಿಗೆ ರಿಯಾಯಿತಿ: ಹೆಚ್.ವಿ.ರಾಜೀವ್

2025ರ ಅಂತ್ಯಕ್ಕೆ ನಗರ ಪಾಲಿಕೆ ವ್ಯಾಪ್ತಿಗೆ 236 ಎಂಎಲ್‌ಡಿ, ಮುಡಾ ವ್ಯಾಪ್ತಿ ಬಡಾವಣೆಗೆ 138.40, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬಡಾವಣೆಗಳಿಗೆ 120 ಸೇರಿ ಒಟ್ಟು 494 ಎಂಎಲ್‌ಡಿ ನೀರು ಅವಶ್ಯವಿರುತ್ತದೆ. ಬಿದರಗೂಡಿನ ಜಾಕ್‌ವೆಲ್‌ನಿಂದ 180 ಎಂಎಲ್‌ಡಿ ನೀರು ಸರಬರಾಜು ಮಾಡಲು ಪೈಪ್‌ಪೈಲ್‌ ಆಳವಡಿಸಲಾಗಿದೆ. ಸದ್ಯಕ್ಕೆ 60 ಎಂಎಲ್‌ಡಿ ನೀರನ್ನು ಪ್ರಾಧಿಕಾರದಿಂದ ಪಡೆಯಲಾಗುತ್ತಿದೆ. 180 ಎಂಎಲ್‌ಡಿ ಉನ್ನತೀಕರಿಸಲು 150 ಕೋಟಿ ರೂ. ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪೆರಿಫರಲ್‌ ರಿಂಗ್‌ ರೋಡ್‌: ಮುಂದಿನ 20 ವರ್ಷಗಳ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಮಹಾಯೋಜನೆ 2031ರಲ್ಲಿ ಪ್ರಸ್ತಾಪಿಸಿರುವಂತೆ 73.25 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸಲು 1971 ಕೋಟಿ ರೂ. ಅಂದಾಜು ಮೊತ್ತವನ್ನು ಅಂದಾಜಿಸಲಾಗಿದೆ. ಅದರಂತೆ ಹೊರ ವರ್ತುಲ ರಸ್ತೆಯ ವಿಸ್ತೃತ ಯೋಜನಾ ವರದಿಯನ್ನು ಭಾರತ್‌ ಮಾಲಾ ಫೇಸ್‌-2 ಯೋಜನೆಯಲ್ಲಿ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ ಎಂದರು.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮೈಸೂರು ಭೇಟಿ ವೇಳೆ ಹೊರ ವರ್ತುಲ ರಸ್ತೆ ಬಗ್ಗೆ ಅವರ ಗಮನ ಸೆಳೆಯಲಾಗಿದೆ. ಅಂದಾಜು 800 ಎಕರೆ ಜಾಗ ಬೇಕಾಗುತ್ತದೆ. 2016ರ ಸಿಡಿಪಿಯಲ್ಲಿಯೇ ಹೊರ ವರ್ತುಲ ರಸ್ತೆ ಪ್ರಸ್ತಾಪಿಸಲಾಗಿದೆ. ಮೊದಲು ಪೂರ್ಣ ಪ್ರಮಾಣದ ಹಣವನ್ನು ಮುಡಾವೇ ಭರಿಸಬೇಕಿತ್ತು. ಈಗ ಕೇಂದ್ರ ಸರ್ಕಾರ ಶೇ. 50 ಕೊಡಲಿರುವುದರಿಂದ ಅನುಕೂಲವಾಗಲಿದೆ ಎಂದರು.

ಆಯುಕ್ತರಿಗೆ ಅಧಿಕಾರ: ಏಕ ನಿವೇಶನ ನಕ್ಷೆ ಅನುಮೋದನೆ ಕೋರಿ ಸ್ವೀಕೃತವಾಗುವ ಪ್ರಕರಣಗಳಲ್ಲಿ 20 ಗುಂಟೆವರೆಗೆ ವಸತಿ ವಿನ್ಯಾಸ ನಕ್ಷೆ, ಏಕ ನಿವೇಶನ ವಿನ್ಯಾಸ, ಅಭಿವೃದ್ಧಿ ಯೋಜನೆ ಅನುಮೋದನೆ ನೀಡುವ ಅಧಿಕಾರವನ್ನು ಆಯುಕ್ತರಿಗೆ ನೀಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.