ನೆರೆಯಲ್ಲಿ ಕೊಚ್ಚಿ ಹೋದ ಶ್ವಾನಗಳು.. ಬದುಕಿ ಬಂದು ಯಜಮಾನನ ಮಡಿಲು ಸೇರಿದ ನಾಯಿಗಳು!

author img

By

Published : Aug 6, 2022, 10:17 AM IST

Updated : Aug 6, 2022, 10:44 AM IST

dogs found alive  flood in Dakshina Kannada  Lucky dogs found alive and well after being lost  ನೆರೆಯಲ್ಲಿ ಕೊಚ್ಚಿ ಹೋದ ಶ್ವಾನಗಳು  ಬದುಕಿ ಬಂದು ಯಜಮಾನನ ಮಡಿಲು ಸೇರಿದ ನಾಯಿಗಳು  ದಕ್ಷಿಣಕನ್ನಡದಲ್ಲಿ ಭಾರೀ ಮಳೆ  ಮನೆಯವರ ಮುಖದಲ್ಲಿ ಸಂತಸ  ಸುಳ್ಯ ತಾಲೂಕಿನ ಕೊಲ್ಲಮೊಗ್ರ

ಪ್ರಕೃತಿ ವಿಕೋಪದಿಂದ ಮನೆ ಸೇರಿ ಎಲ್ಲ ನಷ್ಟವಾದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಕುಟುಂಬವೊಂದು ದುಃಖದಲ್ಲಿ ದಿನ ಕಳೆಯುತ್ತಿತ್ತು. ಈ ಸಂದರ್ಭದಲ್ಲಿ ಬಂದ ದೂರವಾಣಿ ಕರೆಯಿಂದ ಮನೆಯವರ ಮುಖದಲ್ಲಿ ಸಂತಸ ಮೂಡಿದ ಕ್ಷಣದ ಕಥೆ ಇದು. ಏನದು ತಿಳಿಯೋಣಾ ಬನ್ನಿ.

ಸುಳ್ಯ, ದಕ್ಷಿಣಕನ್ನಡ: ನೆರೆಯಲ್ಲಿ ಕೊಚ್ಚಿ ಹೋದ ಶ್ವಾನಗಳು ಮತ್ತೆ ಯಜಮಾನನ ಮಡಿಲು ಸೇರಿರುವ ಘಟನೆ ಕೊಲ್ಲಮೊಗ್ರದಲ್ಲಿ ನಡೆದಿದೆ. ಎರಡ್ಮೂರು ದಿನಗಳ ಬಳಿಕ ತಮ್ಮ ಯಜಮಾನನ ಬಳಿ ಸೇರಿದ ಶ್ವಾನಗಳು ಸಂತೋಷದಿಂದ ಕುಣಿದು ಕುಪ್ಪಳಿಸಿವೆ.

ಆಗಸ್ಟ್ 1 ರಂದು ರಾತ್ರಿಯಿಡೀ ಸುರಿದ ರಣಭೀಕರ ಮಳೆಗೆ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಹರಿಯುತ್ತಿರುವ ಹೊಳೆಯು ಇಡೀ ಗ್ರಾಮವನ್ನೇ ಆವರಿಸಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿ ಬಹಳಷ್ಟು ಅವಾಂತರಗಳು ಸೃಷ್ಟಿಸಿತ್ತು. ಕೊಲ್ಲಮೊಗ್ರದ ದೋಲನ ಮನೆ ನಿವಾಸಿ ಶ್ರೀಮತಿ ಲಲಿತಾರವರು ತನ್ನ ಮನೆಗೆ ನೆರೆ ನೀರು ನುಗ್ಗುತ್ತಿದ್ದಂತೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಅವರ ಪುತ್ರ ಹೇಮಂತ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದರು. ಮನೆಗೆ ಹಿಂದಿರುಗುತ್ತಿದ್ದಾಗ ಹರಿಹರ ಹೊಳೆಯಲ್ಲಿ ಬಹಳಷ್ಟು ನೀರು ಏರಿಕೆ ಆಗಿ ಹರಿಹರ - ಕೊಲ್ಲಮೊಗ್ರ ಸಂಪರ್ಕ ರಸ್ತೆ ಬ್ಲಾಕ್ ಆಗಿತ್ತು. ಮನೆಗೆ ತಲುಪಲಾಗದೇ ಇವರು ಮರುದಿನ ನೀರು ಇಳಿಮುಖಗೊಂಡ ನಂತರ ಮನೆಗೆ ತೆರಳಿದರು. ಈ ವೇಳೆ ಅವರಿಗೆ ಅಲ್ಲಿ ಬಹಳಷ್ಟು ಆಘಾತ ಕಾದಿತ್ತು.

ನೆರೆ ನೀರು ಇಡೀ ಮನೆಯನ್ನು ಆವರಿಸಿದ ಪರಿಣಾಮ ಅವರ ಮನೆಯು ಸಂಪೂರ್ಣ ಕುಸಿದಿತ್ತು. ಮನೆಯಲ್ಲಿದ್ದ ಅನೇಕ ವಸ್ತುಗಳು ನೆರೆ ನೀರಿನ ಪಾಲಾಗಿತ್ತು. ತನ್ನ ಹಸುವೊಂದು ನೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಇಷ್ಟು ಮಾತ್ರವಲ್ಲದೇ ತಾನು ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಎಂಬ ಹೆಸರಿನ ಪಮೋರಿಯನ್ ಶ್ವಾನಗಳು ಭೀಕರ ನೇರೆ ನೀರಿನಲ್ಲಿ ರಾತ್ರಿಯೇ ಕೊಚ್ಚಿಕೊಂಡು ಹೋಗಿದ್ದವು.

ಎಲ್ಲ ಕಳೆದುಕೊಂಡ ಹೇಮಂತ್ ಮತ್ತು ತಾಯಿಗೆ ಎರಡು ದಿನಗಳ ಬಳಿಕ ದುಃಖದ ನಡುವೆ ಸಂತಸದ ಕ್ಷಣವೊಂದು ಎದುರಾಯಿತು. ಅದೇನಂದರೆ ನೆರೆಯಲ್ಲಿ ಕೊಚ್ಚಿ ಹೋಗಿದ್ದ ತಮ್ಮ ರಾಜು - ರಾಣಿ ಎಂಬ ಶ್ವಾನಗಳು ಬದುಕಿವೆ ಎಂಬ ದೂರವಾಣಿ ಕರೆ.

ಸುಮಾರು 2.5ಕಿ.ಮೀ. ದೂರದ ಚಾಂತಳ ಎಂಬಲ್ಲಿ ಒಂದು ಶ್ವಾನ ಪತ್ತೆಯಾದರೆ, ಎರಡು ದಿನಗಳ ಬಳಿಕ ಮತ್ತೊಂದು ಶ್ವಾನ ಅಲ್ಲಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ತಾವು ಮುದ್ದಾಗಿ ಸಾಕಿದ ಶ್ವಾನಗಳು ಸಿಕ್ಕಿದಾಗ ಮನೆ, ಹಸು, ಮನೆಯಲ್ಲಿದ್ದ ವಸ್ತುಗಳು ಎಲ್ಲ ಕಳೆದುಕೊಂಡು ದುಃಖದಲ್ಲಿದ್ದ ನಡುವೆಯೂ ಮನೆಯವರ ಮುಖದಲ್ಲಿ ಸಂತೋಷ ಕಂಡು ಬಂತು. ತಮ್ಮ ಯಜಮಾನನನ್ನು ಕಂಡ ಶ್ವಾನಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದವು. ತಮ್ಮ ಮುದ್ದಿನ ಶ್ವಾನಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಎಲ್ಲರನ್ನೂ ಹೇಮಂತ್​ ರವರು ಕೃತಜ್ಞತೆ ಸಲ್ಲಿಸಿದ್ದಾರೆ.

ಓದಿ: ಚೆನ್ನೈ ಏರ್ಪೋರ್ಟ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಸೇವೆ; ಶ್ವಾನ 'ರಾಣಿ'ಗೆ ಬೀಳ್ಕೊಡುಗೆ

Last Updated :Aug 6, 2022, 10:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.