5 ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ, ಕೃಷಿಯಲ್ಲೂ ಎತ್ತಿದ 'ಕೈ': ಇಲ್ಲಿದೆ ಆಸ್ಕರ್ ಫರ್ನಾಂಡಿಸ್ ಜೀವನ ಚಿತ್ರಣ

author img

By

Published : Sep 13, 2021, 4:34 PM IST

Updated : Sep 13, 2021, 5:16 PM IST

Oscar Fernandes

ಐದು ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ, ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ, ಕೇಂದ್ರ ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ಹಿರಿಯ​ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಇಹಲೋಕ ತ್ಯಜಿಸಿದ್ದಾರೆ. ಅವರ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ..

ಉಡುಪಿ: ಅನಾರೋಗ್ಯಕ್ಕೊಳಗಾಗಿ ಕಳೆದೊಂದು ತಿಂಗಳಿನಿಂದ ಕೋಮಸ್ಥಿತಿಯಲ್ಲಿದ್ದ ಕಾಂಗ್ರೆಸ್ ಹಿರಿಯ​ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (80) ಇಂದು ಕೊನೆಯುಸಿರೆಳೆದಿದ್ದಾರೆ.

ಯೋಗ ಮಾಡುವ ವೇಳೆ ಜಾರಿ ಬಿದ್ದು, ಅನಾರೋಗ್ಯಕ್ಕೊಳಗಾಗಿದ್ದ ಫರ್ನಾಂಡಿಸ್ ಅವರನ್ನು ಜುಲೈನಲ್ಲಿ ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಕಾಂಗ್ರೆಸ್​ ನಾಯಕರು ಮಾತ್ರವಲ್ಲದೇ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರಿಗೆ ಒಂದು ಬಾರಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕವೂ ಅವರಿಗೆ ಪ್ರಜ್ಞೆ ಮರುಕಳಿಸಿರಲಿಲ್ಲ. ಚಿಕಿತ್ಸೆ ಫಲಿಸದೆ ಇದೀಗ ವಿಧಿವಶರಾಗಿದ್ದಾರೆ.

Oscar Fernandes
ಈಟಿವಿಯೊಂದಿಗೆ ಆಸ್ಕರ್ ಫರ್ನಾಂಡಿಸ್

ಶಿಕ್ಷಣ

1941ರ ಮಾರ್ಚ್​ 27 ರಂದು ಉಡುಪಿಯಲ್ಲಿ ಜನಿಸಿದ ಆಸ್ಕರ್ ಫರ್ನಾಂಡಿಸ್ ಅವರು ಸೇಂಟ್ ಸಿಸಿಲಿಯ ಕಾನ್ವೆಂಟ್ ಶಾಲೆ, ಬೋರ್ಡ್ ಹೈಸ್ಕೂಲ್ ಶಿಕ್ಷಣ ಮತ್ತು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿದ್ದರು. ಇವರ ತಂದೆ ರೋಕೀ ಫೆರ್ನಾಂಡಿಸ್ ಅವರು ಅಧ್ಯಾಪಕರಾಗಿದ್ದು, ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಹೋರಾಟಗಾರರೂ ಆಗಿದ್ದರು. ತಾಯಿ ಲಿಯೋನಿಸ್ಸಾ ಫೆರ್ನಾಂಡಿಸ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟ್ ಆಗಿದ್ದರು.

ಇದನ್ನೂ ಓದಿ: ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​ ಇನ್ನಿಲ್ಲ

ರಾಜಕೀಯಕ್ಕೂ ಜೈ, ಕೃಷಿಗೂ ಸೈ

Oscar Fernandes
ಯೋಗಪಟುವೂ ಆಗಿದ್ದ ಆಸ್ಕರ್

ವಿದ್ಯಾಭ್ಯಾಸದ ಬಳಿಕ ಜೀವ ವಿಮಾ ನಿಗಮ (ಎಲ್​ಐಸಿ)ಯಲ್ಲಿ ಕೆಲಕಾಲ ಕೆಲಸ ಮಾಡಿದ್ದ ಆಸ್ಕರ್ ಫರ್ನಾಂಡಿಸ್, ತಮ್ಮ ಕುಟುಂಬದ ಕೃಷಿ ಭೂಮಿಯಲ್ಲಿಯೂ ದುಡಿದು ಮಣಿಪಾಲದ ಸಿಂಡಿಕೇಟ್ ಕೃಷಿ ಪ್ರತಿಷ್ಠಾನದಿಂದ 'ಅತ್ಯುತ್ತಮ ಅಕ್ಕಿ ಬೆಳೆಗಾರ ಪ್ರಶಸ್ತಿ' ಪಡೆದಿದ್ದರು. 1981ರಲ್ಲಿ ಬ್ಲಾಸಮ್ ಫೆರ್ನಾಂಡಿಸ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಫರ್ನಾಂಡಿಸ್​ಗೆ ಇಬ್ಬರು ಮಕ್ಕಳಿದ್ದಾರೆ.

ರಾಜಕೀಯ ಜೀವನ ಹೀಗಿತ್ತು..

Oscar Fernandes
ಜನರೊಂದಿಗೆ ಬೆರೆಯುತ್ತಿದ್ದ ಸರಳ ರಾಜಕೀಯ ನಾಯಕ

ಮುನ್ಸಿಪಾಲಿಟಿ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಆಸ್ಕರ್, ಆನಂತರ ನೇರವಾಗಿ ರಾಷ್ಟ್ರ ರಾಜಧಾನಿಯತ್ತ ಪಯಣ ಬೆಳೆಸಿದರು. ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು. ಒಟ್ಟು ಐದು ಬಾರಿ ಉಡುಪಿಯನ್ನು ಪ್ರತಿನಿಧಿಸಿದ ಲೋಕಸಭಾ ಸಂಸದ ಇವರಾಗಿದ್ದಾರೆ. ಹುದ್ದೆಗಾಗಿ ಯಾವುದೇ ತಕರಾರು ಮಾಡದೆ, ಹೈಕಮಾಂಡ್ ನೀಡಿದ ಹುದ್ದೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ನಂಬಿಕೆಯ ಮತ್ತು ನಿಷ್ಠಾವಂತ ನಾಯಕನಾಗಿ ಬೆಳೆದರು. ಅವರ ರಾಜಕೀಯ ಪಯಣ ಇಲ್ಲಿದೆ..

  • 1972ರಲ್ಲಿ ಉಡುಪಿ ಮುನ್ಸಿಪಾಲಿಟಿಯ ಸದಸ್ಯರಾಗಿ ಆಯ್ಕೆ
  • 1980ರಲ್ಲಿ ಪ್ರಥಮ ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ
  • 1984,1989, 1991,1996 ರಲ್ಲಿ ಮತ್ತೆ ಲೋಕಸಭಾ ಸಂಸದರಾಗಿ ಮರು ಆಯ್ಕೆ
  • 1983ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಜಂಟಿ ಕಾರ್ಯದರ್ಶಿ
  • 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿ
  • 1986ರಲ್ಲಿ ಕನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ
  • ಬಳಿಕ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆ
  • ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ
  • 1998ರಲ್ಲಿ ಅಲ್ಪ ಮತಗಳ ಅಂತರದಿಂದ ಸೋತ ರಾಜ್ಯಸಭಾ ಸದಸ್ಯರಾಗಿ ಆಯ್ಕೆ
  • 1998 ರಿಂದ ಒಟ್ಟು ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆ
  • ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಯುವಜನ ಸೇವೆ, ಕ್ರೀಡೆ ಹಾಗೂ ಕಾರ್ಮಿಕ ಸಚಿವರಾಗಿ ಸೇವೆ (2004-2009)
  • ಬಳಿಕ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾಗಿ ಸೇವೆ

ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

Oscar Fernandes
ಅದ್ಭುತ ಈಜುಪಟುವಾಗಿದ್ದ ಆಸ್ಕರ್ ಫರ್ನಾಂಡಿಸ್

ಭತ್ತದಲ್ಲಿ ಅಧಿಕ ಇಳುವರಿಗಾಗಿ ಸಿಂಡಿಕೇಟ್ ಬ್ಯಾಂಕ್‍ನ ಪ್ರತಿಷ್ಠಿತ ಕೃಷಿ ಪ್ರಶಸ್ತಿ, ಕರ್ನಾಟಕ ರಾಜ್ಯ ಕೃಷಿ ಪುರಸ್ಕಾರ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​​ಗೆ ಪಾತ್ರರಾಗಿದ್ದರು ಆಸ್ಕರ್ ಫರ್ನಾಂಡಿಸ್.

ಉಡುಪಿಯ ಅಷ್ಠಮಠಗಳ ಮಠಾಧೀಶರಿಗೆ ಆತ್ಮೀಯ

ಆಸ್ಕರ್ ಫರ್ನಾಂಡಿಸ್ ಓರ್ವ ಅದ್ಭುತ ಯೋಗಪಟು ಹಾಗೂ ಈಜುಪಟುವಾಗಿದ್ದರು. ಉಡುಪಿಯ ಅಷ್ಠ ಮಠಾಧೀಶರಿಗೆ ಅತ್ಯಂತ ಆತ್ಮೀಯರಾಗಿದ್ದ ಇವರು, ಪೇಜಾವರ ಶ್ರೀಗಳ ಪ್ರಶಂಸೆಗೆ ಒಳಗಾಗಿದ್ದರು. ಜನ ಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದ ಆಸ್ಕರ್​, ಗಣೇಶೋತ್ಸವ ಸಮಿತಿಗಳಲ್ಲೂ ಸಕ್ರಿಯರಾಗಿದ್ದರು. ಯಕ್ಷಗಾನ, ಭರತನಾಟ್ಯ, ಕೂಚುಪುಡಿ ನೃತ್ಯ ಇವರ ಹವ್ಯಾಸವಾಗಿತ್ತು. ಉಡುಪಿ ಚರ್ಚ್ ಆಡಳಿತ ಮತ್ತು ಸಾಮಾಜಿಕ ಕೆಲಸಗಳಲ್ಲಿಯೂ ಆಸ್ಕರ್ ತಮ್ಮನ್ನು ತೊಡಗಿಸಿಕೊಂಡಿದ್ದು, ಜೀವನದುದ್ದಕ್ಕೂ ಜನರ ಪ್ರೀತಿ-ವಿಶ್ವಾಸ ಗೆದ್ದಿದ್ದರು.

Last Updated :Sep 13, 2021, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.