ದಾವಣಗೆರೆಯಲ್ಲಿ ವರುಣನ ಅಬ್ಬರ: ಮಳೆಯಿಂದಾದ ಹಾನಿ ಎಷ್ಟು ಗೊತ್ತಾ..?

author img

By

Published : Aug 5, 2022, 7:29 AM IST

Updated : Aug 5, 2022, 1:29 PM IST

Crop damage due to rain in Davangere

ದಾವಣಗೆರೆಯ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಳೆ ಆರ್ಭಟಕ್ಕೆ ರೈತರು ಬಡವರ್ಗದ ಜನ ನಲುಗಿ ಹೋಗಿದ್ದಾರೆ. ಹೆಚ್ಚಾಗಿ ದಾವಣಗೆರೆಯ ಚನ್ನಗಿರಿ ಹಾಗು ಹೊನ್ನಾಳಿ ನ್ಯಾಮತಿ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆ ಬಿದ್ದಿದ್ದು, ರಸ್ತೆಗಳು, ಸೇತುವೆ ಹಾಗು ಮನೆ ಬೆಳೆ ಹಾನಿಯಾಗಿವೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾಗೂ ಬೆಳೆ ಹಾನಿಯಾಗಿದ್ದು, ರೈತರು ತಲೆ‌ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದಾವಣಗೆರೆಯಲ್ಲಿ ಮಳೆಯಿಂದಾದ ಬೆಳೆ ಹಾನಿ

ಹಾನಿಗೊಳಗಾಗಿರುವ ಹೊನ್ನಾಳಿ ಹಾಗೂ ನ್ಯಾಮತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರುಂಡಿ, ಕಂಚಿಕೊಪ್ಪ, ಜೀನಳ್ಳಿ, ಗುಡ್ಡೆಹಳ್ಳಿ, ಮಲ್ಲಿಗೇನಹಳ್ಳಿ, ಬೆಳಗುತ್ತಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿರುವುದು, ಬೆಳೆಹಾನಿ, ಹಾನಿಗೊಳಗಾದ ರಸ್ತೆ, ಸೇತುವೆ, ಮೆಕ್ಕೆಜೋಳ ಪ್ರದೇಶಗಳ ಹಾನಿ ಮುಂತಾದ ಪ್ರದೇಶಗಳನ್ನು ಪರಿಶೀಲಿಸಿದರು. ಅತಿ ಹೆಚ್ಚಾಗಿ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೆಲಕಚ್ಚಿದೆ. ಇನ್ನು ಅಲ್ಲಿ ಅಲ್ಪಸ್ವಲ್ಪ ನಾಟಿ ಮಾಡಿದ್ದ ಭತ್ತ ಕೂಡ ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿ ನಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿ ಬಿದ್ದಾ ಮಳೆ ಎಷ್ಟು?: ಜಿಲ್ಲೆಯಲ್ಲಿ ಆಗಸ್ಟ್​ 1ರಿಂದ ಇಲ್ಲಿ ತನಕ 41 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ. 116.35 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿಯಲ್ಲಿ 34.6 ಮಿ.ಮೀ ಮಳೆಯಾಗಿದ್ದು, ದಾವಣಗೆರೆ ತಾಲೂಕಿನಲ್ಲಿ 34.9 ಮಿ.ಮೀ, ಹರಿಹರದಲ್ಲಿ 34.2 ಮಿ.ಮೀ, ಹೊನ್ನಾಳಿಯಲ್ಲಿ 97.1 ಮಿ.ಮೀ, ಜಗಳೂರು 18.9 ಮಿ.ಮೀ, ನ್ಯಾಮತಿಯಲ್ಲಿ 71.0 ಮಿ.ಮೀ ಮಳೆಯಾಗಿದೆ.

ಹಾನಿಯಾಗಿದ್ದು ಎಷ್ಟು?: ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 3.60 ಲಕ್ಷ ಮೌಲ್ಯದ 12 ಮನೆ ಭಾಗಶಃ ಹಾನಿಯಾಗಿದ್ದು, ಹರಿಹರ ತಾಲೂಕಿನ 2.30 ಲಕ್ಷ ಮೌಲ್ಯದ 2 ಮನೆಗಳು ಜಖಂ ಆಗಿವೆ. ನ್ಯಾಮತಿ ತಾಲೂಕಿನಲ್ಲಿ ಒಟ್ಟು 3.55 ಲಕ್ಷ ಮೌಲ್ಯದ 6 ಮನೆ, ದನದ ಕೊಟ್ಟಿಗೆ ಹಾನಿಯಾಗಿದೆ. ಇನ್ನು ಅತಿ ಹೆಚ್ಚು ಮಳೆ ಬಿದ್ದ ತಾಲೂಕಾದ ಹೊನ್ನಾಳಿ ವ್ಯಾಪ್ತಿಯಲ್ಲಿ 8 ಮನೆಗಳು ಹಾನಿಯಾಗಿದ್ದು, ಒಟ್ಟು 15.00 ಲಕ್ಷ ಮೌಲ್ಯ ನಷ್ಟವಾಗಿದೆ. ಚನ್ನಗಿರಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ರೂ. 90.10 ಲಕ್ಷ ಮೌಲ್ಯದ 39 ಮನೆಗಳು ಹಾನಿಯಾಗಿವೆ. ಇನ್ನು ಬರಪೀಡಿತ ತಾಲೂಕು ಎಂದು ಕರೆಸಿಕೊಳ್ಳುವ ಜಗಳೂರು ತಾಲೂಕಿನಲ್ಲಿ 1.80 ಲಕ್ಷ ಮೌಲ್ಯದ 07 ಮನೆಗಳು ಹಾನಿಯಾಗಿವೆ.

ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಗೊತ್ತಾ! : ಚನ್ನಗಿರಿ ಹೊನ್ನಾಳಿ ಹಾಗೂ ನ್ಯಾಮತಿಯಲ್ಲಿ ಹೆಚ್ಚು ಮಳೆ ಬಿದ್ದ ಕಾರಣ ಚನ್ನಗಿರಿ ತಾಲೂಕಿನಲ್ಲಿ 118, ಹೊನ್ನಾಳಿ ತಾಲೂಕಿನಲ್ಲಿ 130 ಹಾಗೂ ನ್ಯಾಮತಿ ತಾಲೂಕಿನಲ್ಲಿ 45 ಒಟ್ಟು 293 ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ ರೂ.116.35 ಲಕ್ಷ ಅಂದಾಜು ನಷ್ಟ ಆಗಿದ್ದು, ಸರ್ಕಾರದ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಂತ್ರಸ್ತರಿಗೆ ಹಾಗೂ ರೈತರಿಗೆ ಆಶ್ವಾಸನೆ ನೀಡಿರುವುದು ಜೀವ ಬಂದಂತಾಗಿದೆ.

ಇದನ್ನೂ ಓದಿ : ರಾತ್ರಿ ಸುರಿದ ಭಾರಿ ಮಳೆ: ದ್ವೀಪದಂತಾದ ಹೊನ್ನಾಳಿಯ ಗ್ರಾಮಗಳು

Last Updated :Aug 5, 2022, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.