ಬೆಳಗಾವಿ ಅಧಿವೇಶನ ಮೇಲೆ ಒಮಿಕ್ರೋನ್ ಕರಿಛಾಯೆ: ಸಚಿವಾಲಯ ಸಿಬ್ಬಂದಿಯಲ್ಲಿ ಹೆಚ್ಚಿದ ಆತಂಕ

author img

By

Published : Dec 3, 2021, 2:24 AM IST

ಬೆಳಗಾವಿ ಅಧಿವೇಶನ ಮೇಲೆ ಒಮಿಕ್ರೋನ್ ಕರಿಛಾಯೆ,OmicroneVarian on Belagavi session

ಒಮಿಕ್ರೋನ್ ಭೀತಿ ಹಿನ್ನೆಲೆ ಬೆಳಗಾವಿ ಅಧಿವೇಶನ ನಿಗದಿಯಾದ ಹಿನ್ನೆಲೆ ಸಚಿವಾಲಯದ ನೌಕರರು ಆತಂಕಗೊಂಡಿದ್ದಾರೆ.

ಬೆಂಗಳೂರು: ಒಮಿಕ್ರೋನ್ ಕೋವಿಡ್ ರೂಪಾಂತರಿ ಭೀತಿಯಿಂದ ಬೆಳಗಾವಿ ಅಧಿವೇಶನದ ಮೇಲೆ ಕರಿಛಾಯೆ ಬಿದ್ದಿದೆ. ಇತ್ತ ಶಾಸಕರು ಮಾತ್ರ ಅಲ್ಲ, ಸಚಿವಾಲಯದ ನೌಕರರು ರೂಪಾಂತರಿ ಆತಂಕದ ಮಧ್ಯೆ ಬೆಳಗಾವಿ ಅಧಿವೇಶನಕ್ಕೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಚಿವಾಲಯದ ನೌಕರರ ಆತಂಕಕ್ಕೆ ಕಾರಣ ಏನು ಎಂಬ ವರದಿ ಇಲ್ಲಿದೆ.

ರಾಜ್ಯ ಸರ್ಕಾರ ಡಿ.13-24ರವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನಿರ್ಧರಿಸಿದೆ. ಕಳೆದ ಎರಡು ವರ್ಷದಿಂದ ಬೆಳಗಾವಿ ಅಧಿವೇಶನ‌ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ಇದೀಗ ಒಮಿಕ್ರೋನ್ ಭೀತಿ ಸರ್ಕಾರದ ಬೆಳಗಾವಿ ಅಧಿವೇಶನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಡಿದೆ. ಅದರಲ್ಲೂ ಕರ್ನಾಟದಲ್ಲಿ ದೇಶದಲ್ಲೇ ಮೊದಲು ಒಮಿಕ್ರೋನ್ ಪತ್ತೆಯಾಗಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ.‌ ಈ ಮಧ್ಯೆ ಅಧಿಕಾರಿಗಳು ಬೆಳಗಾವಿ ಅಧಿವೇಶನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೂಪಾಂತರಿ ಆತಂಕದ ಮಧ್ಯೆ ಜೀವ ಒತ್ತೆಯಿಟ್ಟು ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಸಮಜಂಸವಲ್ಲ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ

ಸಚಿವಾಲಯ ನೌಕರರ ಆತಂಕ ಏನು?:
ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಬೆಳಗಾವಿಯಲ್ಲಿ ಅಧಿವೇಶನ ನಡೆಸದಂತೆ ಕೋರಿ ಸಿಎಂ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಹೊರಟ್ಟಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಬಗ್ಗೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಈಟಿವಿ ಭಾರತ ಜೊತೆ ಮಾತನಾಡಿ, ನೌಕರರು ವ್ಯಕ್ತಪಡಿಸುತ್ತಿರುವ ಆತಂಕ ಬಿಚ್ಚಿಟ್ಟಿದ್ದಾರೆ. ಒಮಿಕ್ರೋನ್ ಭೀತಿ ಜೋರಾಗಿದೆ. ಈ ವೇಳೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಚಿವಾಲಯದ ನೌಕರರನ್ನು ಅಪಾಯಕ್ಕೆ ತಳ್ಳಿದಂತಾಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನದಲ್ಲಿ ನಡೆಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದು ಸಮಂಜಸವಲ್ಲ ಎಂದಿದ್ದಾರೆ.

ಬೆಳಗಾವಿಗೆ ಇಲ್ಲಿನ ಶೇ.50ರಷ್ಟು ಸರ್ಕಾರಿ ನೌಕರರು ಅಂದರೆ ಸಚಿವಾಲಯದ ಸುಮಾರು 3,000 ಹೆಚ್ಚು ನೌಕರರು ಬೆಳಗಾವಿಗೆ ಹೋಗಬೇಕು. ಅಲ್ಲಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಆದರೆ ಒಮಿಕ್ರೋನ್ ತೀವ್ರತೆ ಹೆಚ್ಚಿರುವುದರಿಂದ ಅಪಾಯ ಹೆಚ್ಚಿದೆ. ಬೆಳಗಾವಿಯಲ್ಲಿ ಹೋದ ಬಳಿಕ ಒಂದೇ ಹೊಟೇಲ್ ಕೊಠಡಿಯಲ್ಲಿ ಮೂರು ನಾಲ್ಕು ನೌಕರರಿಗೆ ವಸತಿ ಕಲ್ಪಿಸಲಾಗುತ್ತದೆ‌. ಹೀಗಾಗಿ ಒಬ್ಬನಿಗೆ ಸೋಂಕು ಬಂದರೆ ಎಲ್ಲರಿಗೂ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಕೋವಿಡ್​​ನಿಂದ ಸಚಿವಾಲಯದ ಸುಮಾರು 10 ನೌಕರರು ಸಾವಿಗೀಡಾಗಿದ್ದಾರೆ. ಇದೀಗ ಒಮಿಕ್ರೋನ್​​ನಿಂದ ಮತ್ತೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಚಿವಾಲಯದ ನೌಕರರ ಜೀವಕ್ಕೆ ಅಪಾಯ ತಂದೊಡ್ಡಲಿದೆ. ಮಹಾರಾಷ್ಟ್ರ ಗಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಳಗಾವಿಗೆ ಬರುವುದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬದಲು ಬೆಂಗಳೂರಲ್ಲೇ ಮಾಡಿ ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಸಚಿವಾಲಯದ ನೌಕರರು ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲೇ ಆದರೆ ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗದುಕೊಂಡು ಅಧಿವೇಶನ ನಡೆಸಬಹುದು.‌ ಬೆಳಗಾವಿಯಲ್ಲಿ ಅಧಿವೇಶನಕ್ಕಾಗಿ ಇತರ ಜಿಲ್ಲೆಗಳಿಂದ ಆಗಮಿಸಬೇಕಾಗುವುದರಿಂದ ಸೋಂಕು ಹರಡುವಿಕೆ ತೀವ್ರತೆ ಹೆಚ್ಚಲಿದೆ. ಈ ಸಂದರ್ಭದಲ್ಲಿ ನಮ್ಮನ್ನು ಬೆಳಗಾವಿಗೆ ಕಳುಹಿಸುವುದು ಎಷ್ಟು ಸರಿ? ಜೀವಕ್ಕೆ ಏನಾದರೂ ಆಪತ್ತು ಬಂದರೆ ಹೇಗೆ ಎಂಬ ಹತ್ತು ಹಲವು ಭೀತಿಯನ್ನು ಸಂಘದ ಬಳಿ ಹಲವು ಸಚಿವಾಲಯದ ನೌಕರರು ವ್ಯಕ್ತಪಡಿಸಿದ್ದಾರೆ‌ ಎಂದು ಪಿ.ಗುರುಸ್ವಾಮಿ ತಿಳಿಸಿದ್ದಾರೆ.

(ಇದನ್ನೂ ಓದಿ: ಬಂಟ್ವಾಳ: ಮನೆಯಂಗಳಕ್ಕೆ ಬಂದ ಚಿರತೆ... CCTV VIDEO)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.