ಮಾವಿನ ಹಣ್ಣು ಪೂರೈಕೆಯಲ್ಲಿ ಶೇ 60ರಷ್ಟು ಕುಸಿತ; ರೈತರಿಗೆ ಸಿಗ್ತಿದೆ ಉತ್ತಮ ಆದಾಯ

author img

By

Published : May 20, 2022, 8:40 AM IST

Mango

ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಶೇ 60ರಷ್ಟು ಮಾವಿನ ಹಣ್ಣು ಪೂರೈಕೆ ಕಡಿಮೆಯಾಗಿದೆ.

ಬೆಂಗಳೂರು: ಸಾಮಾನ್ಯವಾಗಿ ಯುಗಾದಿ ನಂತರ ಮಾವಿನ ಹಣ್ಣಿನ ಅಬ್ಬರ ಜೋರಾಗುತ್ತಾ ಹೋಗುತ್ತದೆ. ಆದರೆ, ಈ ಬಾರಿ ಉಂಟಾಗಿರುವ ಫಸಲು ಕುಸಿತ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಶೇ 60ರಷ್ಟು ಮಾವಿನ ಹಣ್ಣು ಪೂರೈಕೆ ಕಡಿಮೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಎಲ್ಲ ಬೆಳೆಗಳ ಮೇಲೂ ಪ್ರಭಾವ ಬೀರುತ್ತಿದೆ. ಈ ವರ್ಷ ರಾಜ್ಯದಲ್ಲಿ ಮಳೆ ಮತ್ತು ಚಳಿಯ ಪ್ರಮಾಣ ಹೆಚ್ಚಾಗಿದ್ದರಿಂದ ಮಾವು ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ಮಾವಿನ ಹೂವಿನ ಪ್ರಮಾಣವೂ ಶೇ 50ಕ್ಕಿಂತ ಕಡಿಮೆಯಿತ್ತು.

ಮಾವು ಬೆಳೆ ಇಳಿಕೆ- ಕಾರಣವೇನು?: ಸಾಮಾನ್ಯವಾಗಿ ಮರಗಳು ಒಂದು ವರ್ಷ ಹೆಚ್ಚು ಮತ್ತು ಇನ್ನೊಂದು ವರ್ಷ ಕಡಿಮೆ ಫಸಲು ನೀಡುತ್ತವೆ. ಈ ವರ್ಷ ಮಾವಿನ ಬೆಳೆ ಏರಿಕೆಯತ್ತ ಸಾಗಬೇಕಿತ್ತು. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಾವಿನ ಮರಗಳಲ್ಲಿ ಪೂರ್ಣ ಪ್ರಮಾಣದ ಹೂವು ಬಿಡಬೇಕಿತ್ತು. ಆದರೆ, ನವೆಂಬರ್​ನಿಂದ ಮಳೆಯಾಗಿದ್ದರಿಂದ ಹೂವು ಬಿಡುವ ಸಂದರ್ಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ಡಿಸೆಂಬರ್ ಆರಂಭದಲ್ಲಿ ಶೇ.40 ರಿಂದ 50ರವರೆಗೆ ಮಾತ್ರ ಹೂವು ಬಿಟ್ಟಿತ್ತು. ಹೀಗಾಗಿ, ಮಾವಿನ ಬೆಳೆಯಲ್ಲಿ ಈ ವರ್ಷ ಇಳಿಕೆ ಕಾಣುತ್ತಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯ ನಿರ್ದೇಶಕ ಸಿ.ಜಿ. ನಾಗರಾಜ್ ತಿಳಿಸಿದರು.

ಆಗಸ್ಟ್‌ವರೆಗೂ ದೊರೆಯಲಿದೆ ಮಾವು: ಪ್ರತಿ ವರ್ಷ ಮಾರ್ಚ್ 2ನೇ ವಾರದ ಸಮಯದಲ್ಲಿ ಮಾವು ಮಾರುಕಟ್ಟೆಗೆ ಬಂದು ಜುಲೈ ಅಂತ್ಯದ ಹೊತ್ತಿಗೆ ಕಾಣೆಯಾಗುತ್ತಿತ್ತು. ಆದರೆ ಈ ಸಲ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲು ಆರಂಭವಾಗಿದೆ. ಅಲ್ಲದೇ, ಆಗಸ್ಟ್ ಅಂತ್ಯದವರೆಗೂ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ ಎಂದು ಅವರು ಹೇಳಿದರು.

ರೈತರಿಗೆ ಉತ್ತಮ ಬೆಲೆ: ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಸಾಮಾನ್ಯವಾಗಿ 14-15 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಆದರೆ, ಈ ಬಾರಿ ಶೇ.40ರಷ್ಟು ಕಡಿಮೆ ಆಗಿರುವುದರಿಂದ ಕೇವಲ 8 ಲಕ್ಷ ಮೆಟ್ರಿಕ್ ಟನ್ ಬೆಳೆ ಬಂದಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂದು ಸಿ.ಜಿ.ನಾಗರಾಜ್ ತಿಳಿಸಿದ್ದಾರೆ.

ಮಾವಿನ ಬೆಳೆಯ ಹಂಚಿಕೆ: ರಾಜ್ಯದಲ್ಲಿ ಬೆಳೆದ ಶೇ.35ರಷ್ಟು ಮಾವು ಪ್ರಾದೇಶಿಕವಾಗಿ ಹಂಚಿಕೆಯಾಗುತ್ತದೆ. ಶೇ.26 ರಿಂದ 30ರಷ್ಟು ಹೊರ ರಾಜ್ಯಗಳಿಗೆ, ಶೇ.5ರಷ್ಟು ಪಾನಿಯಗಳಿಗೆ, ಶೇ.1ರಿಂದ 3ರಷ್ಟು ಶೇಕರಣೆಗೆ ಬಳಸಲಾಗುತ್ತದೆ. ಶೇ.15ರಷ್ಟು ಹಣ್ಣು ಹಾಳಾಗಿ ಹೋಗುತ್ತದೆ ಎಂದು ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮರ್ಜಿ ಹೇಳಿದ್ದಾರೆ.

ಹಾಪ್ ಕಾಮ್ಸ್​ನಲ್ಲಿ ಒಂದು ಕೆ.ಜಿ ಮಾವಿನ ಬೆಲೆ ಇಂತಿದೆ:

  • ತೋತಾಪುರಿ -26 ರೂ.
  • ಸಿಂಧೂರ- 105 ರೂ.
  • ಬಂಗಾನಪಲ್ಲಿ- 75 ರೂ.
  • ರಸಪುರಿ - 96 ರೂ.
  • ಮಲ್ಲಿಕ - 99 ರೂ.
  • ಬಾದಾಮಿ - 110 ರೂ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ: ದಾವಣಗೆರೆ, ಶಿವಮೊಗ್ಗ, ಧಾರವಾಡ ಜಿಲ್ಲೆ​ಗ​ಳಲ್ಲಿ ಶಾಲೆ​ಗ​ಳಿಗೆ ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.