ವಿಧಾನಪರಿಷತ್, ರಾಜ್ಯಸಭೆ ಚುನಾವಣೆ ಚಟುವಟಿಕೆ ಆರಂಭ : ಮುಂದಿನ ವಾರದಿಂದ ಜೆಡಿಎಸ್‍ ಅಖಾಡಕ್ಕೆ!

author img

By

Published : May 14, 2022, 10:48 PM IST

Legislative Assembly Rajya Sabha Elections Preparation from JDS

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಏಳು ಸ್ಥಾನಗಳಿಗೆ, ದಕ್ಷಿಣ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರು, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಮತ್ತು ವಿಧಾನಸಭೆಯಿಂದ ರಾಜ್ಯಸಭೆ ಆಯ್ಕೆಯಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಮುಂದಿನ ವಾರದಿಂದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚಿಂತಿಸಲಿದೆ.

ಬೆಂಗಳೂರು : ರಾಜ್ಯದಲ್ಲಿ ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಆರಂಭವಾಗಿದ್ದು, ಈಗಷ್ಟೇ ಜನತಾ ಜಲಧಾರೆ ಕಾರ್ಯಕ್ರಮ ಮುಗಿಸಿ ಉತ್ಸಾಹದಲ್ಲಿರುವ ಜೆಡಿಎಸ್‍ ಸಹ ಚುನಾವಣಾ ಅಖಾಡಕ್ಕೆ ಇಳಿದಿದೆ. ಮುಂದಿನ ವಾರದಿಂದ ಅಭ್ಯರ್ಥಿಗಳ ಅಂತಿಮ ಕಸರತ್ತು ಪ್ರಾರಂಭಿಸಲು ದಂಪತಿಗಳು ಸಜ್ಜಾಗಿದ್ದಾರೆ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಏಳು ಸ್ಥಾನಗಳಿಗೆ, ದಕ್ಷಿಣ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರು, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಮತ್ತು ವಿಧಾನಸಭೆಯಿಂದ ರಾಜ್ಯಸಭೆ ಆಯ್ಕೆಯಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಜಲಧಾರೆ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಜೆಡಿಎಸ್ ವರಿಷ್ಠರು ಮುಂದಿನ ವಾರದಿಂದ ಚುನಾವಣೆಯತ್ತ ಗಮನಹರಿಸಲಿದ್ದಾರೆ. ಸಮಾವೇಶಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಓಡಾಟದಲ್ಲಿದ್ದರಿಂದ ಆಯಾಸಗೊಂಡಿದ್ದು ವಿಶ್ರಾಂತಿಯಲ್ಲಿದ್ದಾರೆ. ಒಂದೆರೆಡು ದಿನಗಳ ಬಳಿಕ ಚುನಾವಣೆಯತ್ತ ಕೇಂದ್ರಿಕರಿಸಲಿದ್ದಾರೆ ಎಂದು ಹೇಳಲಾಗಿದೆ.

Legislative Assembly Rajya Sabha Elections Preparation from JDS
ಟಿ.ಎ.ಶರವಣ ಮತ್ತು ಆರ್.ಪ್ರಕಾಶ್ ಪ್ರಭಲ ಟಿಕೆಟ್​ ಆಕಾಂಕ್ಷಿಗಳು

ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಮೊದಲು ಚುನಾವಣೆ ನಡೆಯುವುದರಿಂದ ಆ ನಿಟ್ಟಿನಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಾಲಿ ವಿಧಾನಪರಿಷತ್ ಸದಸ್ಯ ಎಚ್.ಎಂ. ರಮೇಶ್‌ಗೌಡ, ವಿಧಾನಪರಿಷತ್‌ನ ಮಾಜಿ ಸದಸ್ಯ ಟಿ.ಎ.ಶರವಣ ಹಾಗೂ ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದು, ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Legislative Assembly Rajya Sabha Elections Preparation from JDS
ಹೊರಟ್ಟಿಗೆ ಅವರ ಜಾಗಕ್ಕೆ ಪರ್ಯಾಯ?

ಹೊರಟ್ಟಿಗೆ ಅವರ ಜಾಗಕ್ಕೆ ಪರ್ಯಾಯ?: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಜೆಡಿಎಸ್ ಎರಡು ಕ್ಷೇತ್ರಗಳಿಗೆ ಅಂತಿಮಗೊಳಿಸಲಾಗಿದೆ. ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಮು ಎಂಬುವವರಿಗೆ ಮತ್ತು ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಚಂದ್ರಶೇಖರ್ ಲೋಣಿ ಅವರಿಗೆ ಟಿಕೆಟ್ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ. ಇನ್ನುಳಿದಂತೆ ವಾಯುವ್ಯ ಪದವೀಧರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿಯಿಂದ ಪಶ್ಚಿಮ ಕ್ಷೇತ್ರದಿಂದ ಕಣಕ್ಕಿಳಿಯುವುದರಿಂದ ಆ ಕ್ಷೇತ್ರಕ್ಕೆ ಪರ್ಯಾಯ ವ್ಯಕ್ತಿಯನ್ನು ಕಣಕ್ಕಿಳಿಸಬೇಕಿದೆ.

ದೇವೇಗೌಡರಿಂದ ತೀರ್ಮಾನ: ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಗತ್ಯ ಇರುವಷ್ಟ ಮತಗಳು ಇಲ್ಲ. ಹೀಗಾಗಿ ಕಾಂಗ್ರೆಸ್‌ನ ಹೆಚ್ಚುವರಿ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿಗಿಂತ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ತೀರ್ಮಾನ ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದೆ.

Legislative Assembly Rajya Sabha Elections Preparation from JDS
ಬಿ.ಎಂ. ಫಾರೂಕ್

ಕುಪ್ಪೇಂದ್ರ ರೆಡ್ಡಿ ಮತ್ತು ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರು ರಾಜ್ಯಸಭೆಯ ಆಕಾಂಕ್ಷಿಗಳಾಗಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿರುವ ಫಾರೂಕ್ ಅವರಿಗೆ ಇನ್ನು ಎರಡು ವರ್ಷಗಳ ಕಾಲಾವಕಾಶ ಇದೆ. ಆದರೂ ರಾಜ್ಯಸಭೆಗೆ ಪ್ರವೇಶಿಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಮೇ 17 ರಂದು ಅಧಿಸೂಚನೆ ಹೊರಬೀಳಲಿದೆ. ನಂತರವಷ್ಟೇ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಪ್ರಾರಂಭಿಸಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನು ಪಡೆದು ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ತಂದೆಗೆ ಲಿವರ್​ ದಾನ ಮಾಡುವ ಬಾಲಕಿಯ ಇಚ್ಛೆಗೆ ಹೈಕೋರ್ಟ್​​ ಅಸಮ್ಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.