ಕೆ.ಆರ್.ಪುರ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ

author img

By

Published : May 20, 2022, 6:33 PM IST

cm-basavaraja-bommai-visited-rainly-effected-area-at-kr-puram

ಕೆ.ಆರ್.ಪುರದ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿ ಮಳೆಹಾನಿಗೆ ಕಾರಣವಾಗಿರುವ ಮತ್ತು ನೀರು ಸರಾಗವಾಗಿ ಹರಿಯಲು ಬೇಕಾದ ಕಾಮಗಾರಿಗಳನ್ನು ಆದಷ್ಟು ಬೇಗ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು: ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮೂರ್ತಿನಗರದ ನಾಗಪ್ಪ ಬಡಾವಣೆ ಮತ್ತು ಪೈ ಲೇಔಟ್​​​ಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.

ಬಳಿಕ ಅಧಿಕಾರಿಗಳಿಗೆ ಮಳೆಹಾನಿಗೆ ಕಾರಣವಾಗಿರುವ ಮತ್ತು ನೀರು ಸರಾಗವಾಗಿ ಹರಿಯಲು ಬೇಕಾದ ಕಾಮಗಾರಿಗಳನ್ನು ಆದಷ್ಟು ಬೇಗ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಉಪಸ್ಥಿತರಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸಲು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ.

ಯಾವುದೇ ಅಧಿಸೂಚಿತ ಕೆರೆ ಪ್ರದೇಶಗಳ ಮೇಲೆ ಬಡಾವಣೆಗಳನ್ನು ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಬೆಂಗಳೂರು ನಗರ, ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ದೊಡ್ಡಬೆಟ್ಟಹಳ್ಳಿ ಗ್ರಾಮದಲ್ಲಿನ ಜಲಾವೃತ ಪ್ರದೇಶವನ್ನು ವಸತಿ ವಲಯಕ್ಕೆ ಬದಲಾವಣೆ ಮಾಡಲು ಕೋರಿದ್ದ ಮೇರೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಹೊರಮಾವು ವಾರ್ಡ್ ನ ಸಾಯಿ ಲೇಔಟ್ ಗೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿಯವರು ಕಾರಿನಿಂದ ಇಳಿದು ರಸ್ತೆಯಲ್ಲೇ ಪರಿವೀಕ್ಷಣೆ ಮಾಡಿ ಹೊರಟಿದ್ದು, ಇಲ್ಲಿನ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಯಿತು.

ಕಾಲುವೆ ಸಮಸ್ಯೆಗೆ ಶಾಶ್ವತ ಪರಿಹಾರ : ಕ್ಷೇತ್ರದ ಹೊರಮಾವು ವಾರ್ಡ್​​​ನಲ್ಲಿನ ರೈಲ್ವೆ ಭಾಗದಲ್ಲಿ ಕಾಲುವೆ ಅಗಲೀಕರಣ ಕಾಮಗಾರಿಯನ್ನು 42 ಕೋಟಿ ವೆಚ್ಚದಲ್ಲಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರೈಲ್ವೆ ವೆಂಟ್ ಬಳಿ ಅಗಲೀಕರಣಕ್ಕೆ ರೈಲ್ವೆ ಇಲಾಖೆಯ ಜೊತೆ ಮಾತುಕತೆ ನಡೆಸಲಾಗಿದ್ದು, 42 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಣೆ ನೀಡಿದರು. ಒಟ್ಟು 900 ಮೀಟರ್ ಹೆಚ್ಚುವರಿ ಕಾಲುವೆ ನಿರ್ಮಾಣವನ್ನು ಮಾಡುತ್ತಿರುವುದಾಗಿ ಇದೇ ವೇಳೆ ಹೇಳಿದರು. ಜೊತೆಗೆ ರಾಜ ಕಾಲವೆಯ ಮೇಲೆ ಮನೆ ನಿರ್ಮಾಣ ಮಾಡಿದ್ದಾರೆ, ಅದನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು.

ಟಾಸ್ಕ್ ಫೋರ್ಸ್​ ರಚನೆ : ಒಂದೊಂದು ಜೋನ್‌ಗೆ ಟಾಸ್ಕ್‌ಫೋರ್ಸ್ ಮಾಡುವ ಮೂಲಕ ಶಾಶ್ವತ ಪರಿಹಾರ ಕಾರ್ಯ ಮಾಡಲಾಗುವುದು. 8 ಜೋನ್‌ಗಳಲ್ಲಿ 8 ಸಚಿವರ ನೇಮಕ ಮಾಡಿ,ಪ್ರತಿಯೊಂದು ಜೋನ್‌ನಲ್ಲೂ ಸಚಿವರು ನೇತೃತ್ವ ವಹಿಸುವಂತೆ ಮಾಡಲಾಗುವುದು. ಈ ಟಾಸ್ಕ್ ಫೋರ್ಸ್​ ನಲ್ಲಿ ಸಚಿವರು,ಸ್ಥಳೀಯ ಶಾಸಕರು,ಸಂಸದರು,ಇಂಜಿನಿಯರ್‌ಗಳು ಇರುತ್ತಾರೆ. ಜೋನ್ ಅಭಿವೃದ್ಧಿ ಜೊತೆ ಜೊತೆಗೆ ಈ ರೀತಿ ಮಳೆ ಬಂದಾಗ ಅದರ ನಿರ್ವಹಣೆ ಕೂಡ ಮಾಡುತ್ತಾರೆ.

ಇಂದೇ ಟಾಸ್ಕ್‌ಫೋರ್ಸ್ ರಚನೆ ಮಾಡಿ ಸಚಿವರ ನೇಮಕ ಮಾಡುವುದಾಗಿ ಬೊಮ್ಮಾಯಿ ಹೇಳಿದರು.ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ಅಳವಡಿಸಲು ಈಗಾಗಲೇ ಆದೇಶ ಕೊಟ್ಟಿದ್ದೇನೆ.ರಾಜಕಾಲುವೆ ಅಗಲೀಕರಣವಾದರೆ ನಾಲ್ಕು ಬಡಾವಣೆಗಳಿಗೆ ಅನೂಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಓದಿ : ಎಸ್​ಸಿ-ಎಸ್​ಟಿ ಸಮುದಾಯದ ಕಲ್ಯಾಣಕ್ಕಾಗಿ 28 ಸಾವಿರ ಕೋಟಿ ರೂ. ಅನುದಾನ ಬಳಕೆಗೆ ಅನುಮೋದನೆ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.