ಸಾರ್ಥಕತೆಯ ಬದುಕಿಗೆ 'ಮಹಾತ್ಮರ ಚರಿತಾಮೃತ' ದಾರಿದೀಪ: ಸಿಎಂ ಬೊಮ್ಮಾಯಿ

author img

By

Published : Sep 25, 2021, 5:34 PM IST

mahatmas charithaamruta book Release Ceremony

'ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿ ದೀಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದ್ದಾರೆ.

ಬೆಂಗಳೂರು: ಅಥಣಿಯ ಮೊಟಿಗಿಮಠದ ಪೀಠಾಧಿಪತಿ ಶ್ರೀ ಪ್ರಭು ಚನ್ನಬಸವ ವಿರಚಿತ 'ಮಹಾತ್ಮರ ಚರಿತಾಮೃತ' ಗ್ರಂಥ ಬಿಡುಗಡೆ ಸಮಾರಂಭ ಇಂದು ನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನೆರವೇರಿತು.

ಸಾರ್ಥಕತೆಯ ಬದುಕಿಗೆ 'ಮಹಾತ್ಮರ ಚರಿತಾಮೃತ' ದಾರಿದೀಪ : ಸಿಎಂ ಬಸವರಾಜ ಬೊಮ್ಮಾಯಿ

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಆಗಮಿಸಿದ್ದರು. ಗ್ರಂಥ ಬಿಡುಗಡೆ ನಂತರ ಮಾತನಾಡಿದ ಸಿಎಂ, ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿ ದೀಪವಾಗಿದೆ.‌

ಚನ್ನಬಸವ ಸ್ವಾಮೀಜಿ ಅತ್ಯಂತ ಕ್ರಿಯಾಶೀಲರು. ಚಿಂತನೆಯ ಜೊತೆಗೆ ಕ್ರಿಯಾಶೀಲತೆ ಮುಖ್ಯ. ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲತೆ ಬೇಕು. ಸ್ವಾಮೀಜಿಗಳು ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಯೊಬ್ಬರೂ ಕ್ರಿಯಾಶೀಲರಾಗಬೇಕೆಂದು ದಾರ್ಶನಿಕ ಕ್ರಿಯಾಶೀಲತೆಯನ್ನು ಈ ಜಗತ್ತಿನಲ್ಲಿ ತರಲು ಮಹಾತ್ಮರ ಚರಿತಾಮೃತ ಹೊರ ತಂದಿದ್ದಾರೆ. ಅದಕ್ಕಾಗಿ ಶ್ರೀಗಳಿಗೆ ಅಭಿನಂದನೆಗಳು. ಪ್ರತಿಯೊಬ್ಬ ಮನುಷ್ಯನಲ್ಲಿ ಒಳಧ್ವನಿ ಇರುತ್ತದೆ. ಯಾರು ಒಳಧ್ವನಿಗೆ ಕಿವಿಗೊಡುತ್ತಾರೆ ಅವರು ಜೀವನದ ಅರ್ಥ ಪಡೆಯುತ್ತಾರೆ ಎಂದರು.

ಚಿಂತನೆ ಹಾಗೂ ಒಳಧ್ವನಿಗೆ ಸಮಯ ನೀಡಿದ ಮಹಾತ್ಮರು

ಬದುಕನ್ನು ಬಹುತೇಕವಾಗಿ ಹೊರ ಜಗತ್ತು, ಹೊರ ಒತ್ತಡದಲ್ಲಿ ಹಾಗೂ ಇತರರಿಗಾಗಿಯೇ ಕಳೆಯುತ್ತೇವೆ. ಚಿಂತನೆಗೆ ಹಾಗೂ ಒಳಧ್ವನಿಗೆ ಸಮಯವನ್ನು ನೀಡಿದ ಮಹಾತ್ಮರು ನಮ್ಮ ಮುಂದೆ ಇಟ್ಟಿದ್ದಾರೆ. ಇದನ್ನು ಓದಿದರೆ, ನಮ್ಮ ಬದುಕು ಬದಲಾಗುತ್ತದೆ ಎಂಬ ಪ್ರಬಲ ನಂಬಿಕೆ ನನ್ನದು. ಬದಲಾವಣೆ ಮಾಡುವ ಶಕ್ತಿ ಇರುವ ಗ್ರಂಥ.

ಅನೇಕರು ಎಲೆಮರೆಕಾಯಿಯಂತೆ ಸಾಧನೆ ಮಾಡುತ್ತಾರೆ. ಮಹಾತ್ಮರ ಚರಿತ್ರೆಯನ್ನು ನಮ್ಮ ಮುಂದೆ ಇಟ್ಟು. ಸಾಮಾನ್ಯರೂ ಕೂಡ ಮಹಾತ್ಮರಾಗಬಹುದು ಎಂದು ಸ್ವಾಮೀಜಿ ತಿಳಿಸಿದ್ದಾರೆ. ಸಾವಿನ ನಂತರವೂ ಅವರನ್ನು ನೆನೆಸಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಾಧಕರು ಶ್ರೀಮಂತ ಬದುಕನ್ನು ಬದುಕಿದ್ದಾರೆ. ಭಾವ ಶ್ರೀಮಂತಿಕೆ, ಸಂಬಂಧಗಳ ಶ್ರೀಮಂತಿಕೆಯನ್ನು ಬಿಟ್ಟು ಹೋಗಿದ್ದಾರೆ. ಹೊರ ಬದುಕಿನಲ್ಲಿ ಏರುಪೇರುಗಳಾಗುತ್ತವೆ. ಒಳ ಬದುಕು ನಿರಂತರವಾಗಿ ಸಾಗುತ್ತದೆ. ಅವರು ಸಾಗಿರುವ ಸಾವಿರಾರು ಹೆಜ್ಜೆಗಳಲ್ಲಿ ಎರಡು ಹೆಜ್ಜೆ ಸಾಗಿದರೆ, ದೊಡ್ಡ ಸಾಧನೆಯಾಗುತ್ತದೆ.

ಆಚಾರ ವಿಚಾರಗಳಿಂದ ಬಸವಣ್ಣ ಎತ್ತರಕ್ಕೆ ಏರಿದರು

ಬಸವಣ್ಣನವರ ಬದುಕನ್ನೇ ತೆಗೆದುಕೊಂಡರೆ, ಸಾಮಾನ್ಯರ ಕುಟುಂಬದಿಂದ ಬಂದರೂ, ಅವರ ಆಚಾರ ವಿಚಾರಗಳಿಂದ ಬಹಳ ದೊಡ್ಡ ಎತ್ತರಕ್ಕೆ ಏರಿದರು. ರಾಜ್ಯಕ್ಕೆ ಬಂದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಸವಾಲುಗಳನ್ನು ಸ್ವೀಕರಿಸುತ್ತೇನೆ. ನಿಮ್ಮ ನಂಬಿಕೆ, ವಿಶ್ವಾಸಕ್ಕೆ ಕಿಂಚಿತ್ತೂ ವ್ಯತ್ಯಾಸವಾದಂತೆ ಕೆಲಸ ಮಾಡುತ್ತೇನೆ. ನಿಮ್ಮ ಮನೆಗೆ ಹೂವನ್ನು ತರುತ್ತೇನೆ, ಹುಲ್ಲು ತರುವುದಿಲ್ಲ ಎಂದು ಸಿಎಂ ಹೇಳಿದರು.

ಬಂದ್​​ಗೆ ಕರೆ ಕೊಟ್ಟಿರುವುದಕ್ಕೆ ನಾನ್ಯಾಕೆ ಪ್ರತಿಕ್ರಿಯಿಸಲಿ

ಸೋಮವಾರ ಭಾರತ್ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಮುಖ್ಯಮಂತ್ರಿ ಆಗಿ ಒಂದೂವರೆ ತಿಂಗಳಾಗಿದೆ.‌ ನನಗೆ ಯಡಿಯೂರಪ್ಪ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದದಂತೆ ನಡೆಯುತ್ತಿದ್ದೇನೆ. ಅವರ ಮಾರ್ಗದರ್ಶನ ಪಡೆದುಕೊಳ್ಳುತ್ತೇನೆ. ಎಲ್ಲರ ಸಹಕಾರದಿಂದ ಕೋವಿಡ್ ಮೆಟ್ಟಿನಿಲ್ಲುತ್ತೇವೆ. ನನ್ನ ಮೇಲೆ ಇಟ್ಟಿರುವ ಎಲ್ಲರ ನಂಬಿಕೆ ಉಳಿಸಿಕೊಳ್ತೇನೆ.

ಬಂದ್​​ಗೆ ಕರೆ ಕೊಟ್ಟಿರುವುದಕ್ಕೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ. ಈಗ ತಾನೇ ಕೋವಿಡ್‌ನಿಂದ ಜನ ಹೊರಗಡೆ ಬಂದಿದ್ದಾರೆ. ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಚಟುವಟಿಕೆಗಳು ಈಗಷ್ಟೆ ಶುರುವಾಗಿವೆ. ಬೇರೆ ಬೇರೆ ವೃತ್ತಿಯಲ್ಲಿ ಈಗ ತಾನೇ ಕೆಲಸ ಶುರುಮಾಡ್ತಿದ್ದಾರೆ. ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ರಕ್ಷಣೆ ಮಾಡುವ ಕರ್ತವ್ಯ ನಮ್ಮದು ಎಂದಷ್ಟೇ ಹೇಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇದೊಂದು ಸಂತಸದ ಕ್ಷಣ

ಇದೇ ವೇಳೆ, ಮಾತನಾಡಿದ ಸಚಿವ ವಿ. ಸೋಮಣ್ಣ, ಇಂದು ಪ್ರಭು ಚೆನ್ನಬಸವ ಸ್ವಾಮೀಜಿಯವರ ಜೀವನ ಗ್ರಂಥದ ಲೋಕಾರ್ಪಣೆಯಾಗುತ್ತಿರುವುದು ತುಂಬಾ ಸಂತಸದ ಕ್ಷಣ. ಈ ಗ್ರಂಥ ಪ್ರತಿಯೊಂದು ಲೈಬ್ರರಿಯಲ್ಲಿಯು ಸಿಗಲಿದೆ. ಎಲ್ಲರ ಕೈ ಸೇರಿ ಓದಬೇಕು. ಸಿಎಂ ಬಸವರಾಜ ಬೊಮ್ಮಾಯಿ ಈ ಗ್ರಂಥವನ್ನು ಲೋಕಾರ್ಪಣೆ ಮಾಡುತ್ತಿರುವುದು ನಿಜಕ್ಕೂ ಖುಷಿಯ ಕ್ಷಣ.

ಇಂದು ಸಿಎಂ 750 ಗ್ರಾಮ ಪಂಚಾಯಿತಿಗಳನ್ನ ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ರೈತರ ಮಕ್ಕಳಿಗಾಗಿ ವಿದ್ಯಾರ್ಥಿ ವೇತನ ಜಾರಿಗೆ ತಂದಿದ್ದಾರೆ. ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್.ವಿ.ಪಾಟೀಲ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ‘ಮೋದಿಗೆ ಮೋದಿಯೇ ಸಾಟಿ’ ಕೃತಿ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.