ರಾಷ್ಟ್ರಪತಿ ವಿಚಾರಕ್ಕೆ ಕೈ-ಕಮಲ ಟ್ವೀಟ್ ವಾರ್: ಬಿಜೆಪಿಗೆ ಬುದ್ಧಿಗೆ ಮಂಕು ಕವಿದಿದೆ- ದಿನೇಶ್ ಗುಂಡೂರಾವ್

ರಾಷ್ಟ್ರಪತಿ ವಿಚಾರಕ್ಕೆ ಕೈ-ಕಮಲ ಟ್ವೀಟ್ ವಾರ್: ಬಿಜೆಪಿಗೆ ಬುದ್ಧಿಗೆ ಮಂಕು ಕವಿದಿದೆ- ದಿನೇಶ್ ಗುಂಡೂರಾವ್
ರಾಷ್ಟ್ರಪತಿಗಳ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟ್ವೀಟ್ ನಡೆದಿದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್ಗೆ ಕಾಂಗ್ರೆಸ್ನ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಧ್ಯೆ ರಾಷ್ಟ್ರಪತಿ ವಿಷಯವಾಗಿ ಟ್ವೀಟ್ ವಾರ್ ನಡೆದಿದೆ. ಮುಸ್ಲಿಂ, ದಲಿತ, ಮಹಿಳೆಯನ್ನೂ ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಕಾರಣ ನಾವು ಜಾತಿವಾದಿಗಳಲ್ಲ, ರಾಷ್ಟ್ರವಾದಿಗಳು ಎಂದು ಟ್ವೀಟ್ ಮಾಡಿದ್ದ ಸಚಿವ ಕೋಟಾ ಶ್ರೀನಿವಾಸ ಅವರಿಗೆ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ನಲ್ಲಿ ತಿರುಗೇಟು ನೀಡಿದ್ದಾರೆ.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಬುದ್ಧಿಗೆ ಮಂಕು ಕವಿದಿದೆ. ರಾಷ್ಟ್ರಕ್ಕೆ ಮೊದಲ ಮುಸ್ಲಿಂ, ಸಿಖ್, ದಲಿತ ಮತ್ತು ಮಹಿಳಾ ರಾಷ್ಟ್ರಪತಿಯನ್ನು ನೀಡಿದ ಕೊಡುಗೆ ಕಾಂಗ್ರೆಸ್ನದ್ದಾಗಿದೆ. ಇದನ್ನು ಪಕ್ಷ ಯಾವತ್ತೂ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಆದರೆ, ಬಿಜೆಪಿ ಈ ವಿಷಯವಾಗಿ ರಾಜಕೀಯ ಮಾಡುತ್ತಿದೆ. ಇದೇ ಕಾಂಗ್ರೆಸ್‌ಗೂ- ಬಿಜೆಪಿಗೂ ಇರುವ ವ್ಯತ್ಯಾಸ ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿಯವರು ಜಾತಿವಾದಿಗಳಲ್ಲ ರಾಷ್ಟ್ರವಾದಿಗಳೆಂದು ವ್ಯಾಖ್ಯಾನಿಸಿದ್ದೀರಿ. ಆ ನಿಮ್ಮ ವ್ಯಾಖ್ಯಾನ ಖಂಡಿತ ತಪ್ಪು, ನೀವು ರಾಷ್ಟ್ರೀಯವಾದಿಗಳಲ್ಲ, ರಾಷ್ಟ್ರವ್ಯಾಧಿಗಳು ಎಂದು ಜರಿದಿದ್ದಾರೆ.
ಇದಕ್ಕೂ ಮುನ್ನ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ, ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ, ಇಂದು ಮಹಿಳೆ. ಅದರಲ್ಲೂ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ. ಏಕೆಂದರೆ ನಾವು ಜಾತಿವಾದಿಗಳಲ್ಲ, ರಾಷ್ಟ್ರವಾದಿಗಳು ಎಂದು ಬರೆದು ಟ್ವೀಟ್ ಮಾಡಿದ್ದರು. ಇದಕ್ಕೀಗ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪಠ್ಯ ಪುಸ್ತಕ ವಿವಾದ.. ಸಮಿತಿ ತೆಗೆದಿದ್ದೇನು, ಮರುಸೇರ್ಪಡೆ ಆಗಿದ್ದೇನು? ಸರ್ಕಾರದ ಸ್ಪಷ್ಟನೆ ಹೀಗಿದೆ
