ಜಾರಕಿಹೊಳಿ ಅಷ್ಟೇ ಅಲ್ಲ, ಹೆಬ್ಬಾಳ್ಕರ್, ಕಾಶಂಪುರ ಸಾಲವೂ ಮರು ಪಾವತಿ ಆಗಿಲ್ಲ; ಸಚಿವ ಸೋಮಶೇಖರ್‌

author img

By

Published : May 10, 2022, 2:57 PM IST

Minister S.T.Somashekhar talked to Press

ಬೆಳಗಾವಿ ಡಿಸಿಸಿ ಬ್ಯಾಂಕ್​ನಿಂದ ಒಟ್ಟು 1,024 ಕೋಟಿ ಸಾಲ ನೀಡಿದ್ದಾರೆ. ಯಾರಿಗೆ ಸಾಲ ಕೊಟ್ಟಿದ್ದಾರೆ, ಯಾರು ಮರುಪಾವತಿಸಿಲ್ಲ ಅವರಿಗೆ ನೋಟಿಸ್ ನೀಡಲಾಗಿದೆ. ಸಾಲ ಪಡೆದವರಲ್ಲಿ ಎಲ್ಲರೂ ಇದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ನವರೂ ನಮ್ಮಲ್ಲಿ ಸಾಲ ಪಡೆದಿದ್ದಾರೆ ಎಂದು ಸಚಿವ ಎಸ್​.ಟಿ.ಸೋಮಶೇಖರ್​ ಹೇಳಿದ್ದಾರೆ..

ಬೆಳಗಾವಿ : ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ 600 ಕೋಟಿ ಸಾಲ ಬಾಕಿ ಆರೋಪಕ್ಕೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲ, ಲಕ್ಷ್ಮೀ ಹೆಬ್ಬಾಳ್ಕರದ್ದೂ ಸಾಲ ಬಾಕಿ ಇದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ಸಾಲವೂ ಬಾಕಿ ಇದೆ.

ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ ಸೇರಿ ಹಲವರು ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಚಿವ ಸೋಮಶೇಖರ ಪರೋಕ್ಷ ಟಾಂಗ್ ಕೊಟ್ಟರು.

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಇದೆ. ಅದರಲ್ಲಿ 16 ಡಿಸಿಸಿ ಬ್ಯಾಂಕ್ ರೀವ್ಯೂ ಮಾಡಿದ್ದೇನೆ. ಇವತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ರೀವ್ಯೂ ಮಾಡೋದಕ್ಕೆ ಬಂದಿದ್ದೇನೆ. ರಮೇಶ ಜಾರಕಿಹೊಳಿ ಒಬ್ಬರೇ ಸಾಲ ಪಡೆದಿಲ್ಲ. 23 ಸಕ್ಕರೆ ಕಾರ್ಖಾನೆಗೂ ಸಾಲ ಕೊಟ್ಟಿದ್ದೇವೆ. ಅಪೆಕ್ಸ್ ಬ್ಯಾಂಕ್​ಗೆ ಕಟ್ಟುನಿಟ್ಟಾಗಿ ಹೇಳಿದ್ದೇವೆ. ನೋಟಿಸ್ ನೀಡಿ ವಸೂಲಾತಿ ಮಾಡುತ್ತಿದ್ದಾರೆ.

ಸಚಿವ ಎಸ್​.ಟಿ.ಸೋಮಶೇಖರ್​ ಸುದ್ದಿಗಾರರೊಂದಿಗೆ ಮಾತನಾಡಿರುವುದು..

ಒಟ್ಟಾರೆ 23 ಜನ ಸಾಲ ಪಡೆದಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್​ನಿಂದ ಒಟ್ಟು 1,024 ಕೋಟಿ ಸಾಲ ನೀಡಿದ್ದಾರೆ. ಯಾರಿಗೆ ಸಾಲ ಕೊಟ್ಟಿದ್ದಾರೆ, ಯಾರು ಮರು ಪಾವತಿಸಿಲ್ಲ ಅವರಿಗೆ ನೋಟಿಸ್ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಲು ಮುಂದಾಗಿದೆ. ಸಾಲ ಪಡೆದವರಲ್ಲಿ ಎಲ್ಲರೂ ಇದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ನವರೂ ನಮ್ಮಲ್ಲಿ ಸಾಲ ಪಡೆದಿದ್ದಾರೆ.

ಕಾಂಗ್ರೆಸ್​ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಖಾನೆಗೆ ಸಾಲ ತೆಗೆದುಕೊಂಡಿದ್ದಾರೆ. ಜೆಡಿಎಸ್‌ನಿಂದ ಬಂಡೆಪ್ಪ ಕಾಂಶಪೂರ ಸಾಲ ತೆಗೆದುಕೊಂಡಿದ್ದಾರೆ. ಎಸ್.ಆರ್. ಪಾಟೀಲ ಕೂಡ ಸಾಲ ತೆಗೆದುಕೊಂಡಿದ್ದಾರೆ. ಯಾರು ಸಾಲ ವಾಪಸ್​ ಕಟ್ಟಿಲ್ಲ, ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಯಾರದು ಎಷ್ಟು ಸಾಲ ಬಾಕಿ ಇದೆ ಎಂಬುದನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ, ಮುಚ್ಚು ಮರೆಯೂ ಇಲ್ಲ ಎಂದು ಸಚಿವ ಎಸ್‌.ಟಿ‌‌.ಸೋಮಶೇಖರ್ ತಿಳಿಸಿದರು.

ಸಿದ್ದರಾಮಯ್ಯಗೆ ತಿರುಗೇಟು : ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಎಸ್.ಟಿ ಸೋಮಶೇಖರ್​, ಸಿದ್ದರಾಮಯ್ಯ ಸುಮ್ಮನೇ ಉಡಾಫೆ ಮಾತುಗಳನಾಡುತ್ತಾರೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಹಗರಣಗಳು ಆಗಲಿಲ್ವಾ? ಸಿದ್ದರಾಮಯ್ಯ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಹಾಸಿಗೆ, ದಿಂಬು ಹಗರಣ ಏನಾಯ್ತು? ಯಾವುದೇ ಹಗರಣ ಆಗಿದ್ರೆ ಸರಿಯಾದ ಮಾಹಿತಿ ಕೊಟ್ಟು ಹೇಳಬೇಕು ಎಂದು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯ ಹಗರಣಗಳನ್ನು ಮುಚ್ಚಿ ಹಾಕಲಿಲ್ವಾ? ದಿಂಬು, ಹಾಸಿಗೆ ಹಗರಣದಲ್ಲಿ ಅವರೇನೂ ಮಾಡಲಿಲ್ವಾ? ನಾನು ಕಾಂಗ್ರೆಸ್ ಸರ್ಕಾರದಲ್ಲಿ ಎಂಎಲ್ಎ ಆಗಿದ್ದೆ. ನಾನಿದ್ದಾಗಲೇ ಹಗರಣ ಆಗಿತ್ತು. ಯಾವ ಸಿಐಡಿಗೆ ಕೊಟ್ರು, ಯಾವ ಕೇಸ್ ಮುಚ್ಚಿ ಹಾಕಿದ್ರೂ ನಮಗೂ ಮಾಹಿತಿ ಇದೆ. ಬೊಮ್ಮಾಯಿಯವರು ಯಾವುದೇ ಕಾರಣಕ್ಕೂ ಮುಚ್ಚು ಹಾಕುವಂತಹ ಕೆಲಸ ಮಾಡಲಿಲ್ಲ. ಯಾವುದೇ ಆರೋಪ ಇದ್ದರೂ ತನಿಖೆ ಮಾಡಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಇಲಾಖೆ ಗೃಹ ಸಚಿವರ ಹತೋಟಿಯಲ್ಲಿ ಇಲ್ಲ: ವೀರಪ್ಪ ಮೊಯ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.