ಇಂದು ವಿಶ್ವ ದೃಷ್ಟಿ ದಿನ: ನಿಮ್ಮ ಕಣ್ಣುಗಳ ಮೇಲಿರಲಿ ಪ್ರೀತಿ, ಕಾಳಜಿ..

author img

By

Published : Oct 14, 2021, 1:13 PM IST

ವಿಶ್ವ ದೃಷ್ಟಿ ದಿನ

ಜನರು ತಮ್ಮ ಕಣ್ಣುಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿದ್ದರೆ, ಶೇ.80ರಷ್ಟು ಹಾನಿಯಿಂದ ತಮ್ಮ ನೇತ್ರಗಳನ್ನು ರಕ್ಷಿಸಬಹುದು. ಹೀಗಾಗಿ "ನಿಮ್ಮ ಕಣ್ಣುಗಳನ್ನು ಪ್ರೀತಿಸಿ" ಎಂಬುದು ಈ ಬಾರಿಯ (2021 ಅಕ್ಟೋಬರ್ 14) ವಿಶ್ವ ದೃಷ್ಟಿ ದಿನದ ಘೋಷವಾಕ್ಯವಾಗಿದೆ.

ಎಲ್ಲಾ ಜೀವಿಗಳಿಗೆ ಕಣ್ಣುಗಳೇ ಒಂದು ವರ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು ಎಂದೆನಿಸಿ ಬಿಡುತ್ತದೆ. ಕಣ್ಣುಗಳ ಮೇಲಿನ ಅಜಾಗರೂಕತೆ ನಿಮ್ಮನ್ನು ಮುಂದೆ ಸಂಕಷ್ಟಕ್ಕೆ ದೂಡಬಹುದು. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್​ ತಿಂಗಳ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನಾಗಿ ಆಚರಿಸಲಾಗುತ್ತಿದೆ.

1998ರ ಅಕ್ಟೋಬರ್ 8ರಂದು ಮೊದಲ ವಿಶ್ವ ದೃಷ್ಟಿ ದಿನವನ್ನು ಲಯನ್ಸ್ ಕ್ಲಬ್ ಇಂಟರ್​ನ್ಯಾಷನಲ್ ಫೌಂಡೇಶನ್ (LCIF) ತನ್ನ ಸೈಟ್‌ ಫಸ್ಟ್ ಅಭಿಯಾನದ ಮೂಲಕ ಆರಂಭಿಸಿತು. ಈ ಸಂಸ್ಥೆಯು ಜಾಗತಿಕವಾಗಿ ದೃಷ್ಟಿ, ಕಣ್ಣಿನ ಆರೈಕೆ, ಕಣ್ಣಿನ ರೋಗಗಳಿಂದ ಬಳಲುವ ಅಪಾಯ ಮತ್ತು ದೃಷ್ಟಿ ಪುನಃಸ್ಥಾಪಿಸುವ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅಂತಾರಾಷ್ಟ್ರೀಯ ಅಂಧತ್ವ ತಡೆಗಟ್ಟುವಿಕೆ ಸಂಸ್ಥೆ (IAPB) ಇದನ್ನು ಮುಂದುವರೆಸಿಕೊಂಡು ಬಂದಿದೆ.

ಇದನ್ನೂ ಓದಿ: ಮಕ್ಕಳ ಅಂಧತ್ವ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿದೆ: ನೇತ್ರ ತಜ್ಞೆ ಡಾ.ಬಿಂದಿಯಾ ಹಪಾನಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಲ್ಲಿ ಕನಿಷ್ಠ 1 ಬಿಲಿಯನ್ ಜನರು ಸಮೀಪ ಅಥವಾ ದೂರ ದೃಷ್ಟಿ ದೋಷವನ್ನು ಹೊಂದಿದ್ದಾರೆ. ದೃಷ್ಟಿಹೀನತೆಯು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ, ಇವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಇದು ಕೆಲವೊಮ್ಮೆ ಕುರುಡುತನಕ್ಕೂ ಕಾರಣವಾಗಬಹುದು. ಒಂದು ಅಂದಾಜಿನ ಪ್ರಕಾರ, ವಿಶ್ವದಾದ್ಯಂತ ಸುಮಾರು 285 ಮಿಲಿಯನ್ ಜನರು ಅಂಧತ್ವ ಹೊಂದಿದ್ದಾರೆ. ಇವರಲ್ಲಿ 39 ಲಕ್ಷ ಜನರು ಸಂಪೂರ್ಣ ಅಂಧರಾಗಿದ್ದರೆ, 246 ಮಿಲಿಯನ್ ಜನರು ತೀವ್ರ ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ.

'ನಿಮ್ಮ ಕಣ್ಣುಗಳನ್ನು ಪ್ರೀತಿಸಿ'

ದೃಷ್ಟಿಹೀನತೆಗೆ ಮುಖ್ಯವಾಗಿ, ಸರಿಪಡಿಸಲಾಗದ ವಕ್ರೀಕಾರಕ ದೋಷಗಳು (ಶೇ.43) ಮತ್ತು ಕಣ್ಣಿನ ಪೊರೆಗಳು (ಶೇ.33) ಕಾರಣವೆಂದು ಪರಿಗಣಿಸಲಾಗಿದೆ. ಇದನ್ನು ಹೊರತುಪಡಿಸಿ, ಇತರ ಅವಘಡ ಅಥವಾ ಅಪಘಾತಗಳು, ಅನುವಂಶೀಯತೆ ಸೇರಿದಂತೆ ಹಲವಾರು ಕಾರಣಗಳಿಂದ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ಆದರೆ, ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಜನರು ತಮ್ಮ ಕಣ್ಣುಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿದ್ದರೆ, ಶೇ.80ರಷ್ಟು ಹಾನಿಯಿಂದ ತಮ್ಮ ನೇತ್ರಗಳನ್ನು ರಕ್ಷಿಸಬಹುದು. ಹೀಗಾಗಿ "ನಿಮ್ಮ ಕಣ್ಣುಗಳನ್ನು ಪ್ರೀತಿಸಿ" ಎಂಬುದು ಈ ಬಾರಿಯ (2021 ಅಕ್ಟೋಬರ್ 14) ವಿಶ್ವ ದೃಷ್ಟಿ ದಿನದ ಘೋಷವಾಕ್ಯವಾಗಿದೆ.

ಐಎಪಿಬಿ ಪ್ರಕಾರ ನಿಮ್ಮ ಕಣ್ಣುಗಳನ್ನು ಪ್ರೀತಿಸಲು ಇರುವ ನಾಲ್ಕು 'P'ಗಳು..

1. Prevent (ತಡೆಗಟ್ಟಿರಿ)

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಬಹುದು. ಆರೋಗ್ಯಕರ ಜೀವನಶೈಲಿ ಎಂದರೆ ಉತ್ತಮ, ಪೌಷ್ಟಿಕ ಆಹಾರಗಳ ಸೇವನೆ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು. ವಿಟಮಿನ್ ಎ, ಸಿ ಮತ್ತು ಇ, ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಂಶ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ.

2. Protect (ರಕ್ಷಿಸಿ)

ದೃಷ್ಟಿ ದೋಷಗಳಿಂದ ತಪ್ಪಿಸಿಕೊಳ್ಳಲು ಆರೋಗ್ಯಕರ ಜೀವನಶೈಲಿಯೊಂದಿಗೆ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ಮತ್ತು ಕಾಳಜಿ ವಹಿಸುವುದು ಅಷ್ಟೇ ಮುಖ್ಯವಾಗಿದೆ. ತೀವ್ರ ಸೂರ್ಯನ ಕಿರಣಗಳು, ಮೊಬೈಲ್​ ಮತ್ತು ಕಂಪ್ಯೂಟರ್​ನಿಂದ ಬರುವ ನೀಲಿ ಕಿರಣಗಳು ನಿಮ್ಮ ಕಣ್ಣುಗಳಿಗೆ ಅಪಾಯವನ್ನು ತಂದೊಡ್ಡುತ್ತವೆ. ಹೀಗಾಗಿ ನೀವು ದೀರ್ಘಕಾಲದವರೆಗೆ ಮೊಬೈಲ್ ಬಳಕೆ ಮಾಡದಿರುವುದು ಹಾಗೂ ಕಂಪ್ಯೂಟರ್ ಬಳಸುವಾಗ ನೀಲಿ ಕಿರಣಗಳಿಂದ ರಕ್ಷಿಸಿಕೊಳ್ಳುವ ಕನ್ನಡಕ (anti blue light glasses) ಬಳಸುವುದು ಉತ್ತಮ.

3. Preserve (ಸಂರಕ್ಷಿಸಿ)

ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಂಡರೂ ಸಹ ಸಮಯೋಜಿತ ಕಣ್ಣಿನ ಪರೀಕ್ಷೆ ನಡೆಸುವ ಮೂಲಕ ನಿಮ್ಮ ಕಣ್ಣುಗಳನ್ನು ಸಂರಕ್ಷಿಸಬಹುದು. ವೈದ್ಯರು ನಿಮ್ಮ ಕಣ್ಣಿನ ಅಪಾಯಕಾರಿ ಅಂಶಗಳನ್ನು ಅರ್ಥಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡುವರು. ಅನುವಂಶೀಯtಎ ಅಂದರೆ ನಿಮ್ಮ ಕುಟುಂಬದ ಸದಸ್ಯರಿಗೆ ದೃಷ್ಟಿ ದೋಷವಿದ್ದರೆ ನೀವೂ ಕೂಡ ಆಗಾಗ ಕಣ್ಣಿನ ತಪಾಸಣೆಗೊಳಗಾಗುವುದು ಉತ್ತಮ.

4. Prioritize (ಆದ್ಯತೆ ನೀಡಿ)

ಕಣ್ಣಿನ ಪರೀಕ್ಷೆ ನಿಮ್ಮ ಜೀವನದ ಒಂದು ಭಾಗವೆಂದು ತಿಳಿದುಕೊಳ್ಳಿ. ನಿಮ್ಮ ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡುವುದು ಮತ್ತು ಕಣ್ಣುಗಳನ್ನು ಪ್ರೀತಿಸುವುದು ನಿಮ್ಮ ಜೀವನದ ಧ್ಯೇಯವೆಂದು ಪರಿಗಣಿಸಿ. ಕಣ್ಣುಗಳು ಮತ್ತು ದೃಷ್ಟಿಯ ಮಹತ್ವದ ಬಗ್ಗೆ ನಿಮ್ಮ ಕುಟುಂಬ, ಪ್ರೀತಿಪಾತ್ರರು ಮತ್ತು ಇತರರಲ್ಲಿ ಅರಿವು ಮೂಡಿಸಿ.

ಕಣ್ಣಿನ ಅಪಾಯ ತಡೆಗಟ್ಟುವ ಮಾರ್ಗಗಳು: ನಿಮ್ಮ ದಿನಚರಿ ಮತ್ತು ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳ ಮೂಲಕ ಅನೇಕ ಕಣ್ಣಿನ ಕಾಯಿಲೆಗಳು ಮತ್ತು ಸಮಸ್ಯೆಗಳನ್ನು ತಡೆಗಟ್ಟಬಹುದು.

  • ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆ
  • ಧೂಮಪಾನ ಮತ್ತು ಮಾದಕ ವಸ್ತುಗಳಿಂದ ದೂರವಿರಿ
  • ಮೊಬೈಲ್ ಫೋನ್ ಅಥವಾ ಕಂಪ್ಯೂಟರ್​ ಬಳಸುವಾಗ, ಅವುಗಳಿಂದ ನಿಮ್ಮ ಕಣ್ಣುಗಳನ್ನು ಸ್ವಲ್ಪ ದೂರವಿರಿಸಿ ಕುಳಿತುಕೊಳ್ಳಿ
  • ಕಣ್ಣಿನ ಸಮಸ್ಯೆಗಳ ಬಗ್ಗೆ ಅರಿವಿರಲಿ. ಸಮಯೋಜಿತ ತಪಾಸಣೆಗೊಳಗಾಗಿ
  • ನಿಮಗೆ ಕಣ್ಣಿನ ಸೋಂಕು ಅಥವಾ ತೀವ್ರ ದೃಷ್ಟಿ ಸಮಸ್ಯೆಯಿದ್ದರೆ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ
  • ದೇಹದ ಜೊತೆಯಲ್ಲಿ, ಕಣ್ಣುಗಳಿಗೆ ನಿಯಮಿತವಾದ ವ್ಯಾಯಾಮವನ್ನು ಮಾಡಿಸಿ
  • ನೀವು ಬಿಸಿಲಿನಲ್ಲಿರುವಾಗ ನಿಮ್ಮ ಕಣ್ಣುಗಳನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.