ಸಾಫ್ಟ್‌ವೇರ್ ಬಿಟ್ಟು ಬೊಟಿಕ್ ಆರಂಭಿಸಿದ ಮಹಿಳೆ: ಈಗ ಕೋಟಿ ರೂಪಾಯಿ ಉದ್ಯಮದ ಒಡತಿ!

author img

By

Published : Jan 25, 2023, 1:36 PM IST

ಸಾಫ್ಟವೇರ್ ನೌಕರಿ ಬಿಟ್ಟು ಬೊಟಿಕ್ ಆರಂಭಿಸಿದ ಮಹಿಳೆ: ಈಗ ಕೋಟಿ ರೂಪಾಯಿ ಉದ್ಯಮದ ಒಡತಿ!

ಜೀವನದಲ್ಲಿ ಸ್ವತಂತ್ರವಾಗಿ ಏನನ್ನೋ ಸಾಧಿಸಬೇಕೆಂದು ಅನೇಕರು ಇದ್ದ ನೌಕರಿ ಬಿಟ್ಟು ವ್ಯಾಪಾರ ಉದ್ಯಮಕ್ಕೆ ಕೈ ಹಾಕುತ್ತಾರೆ ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಅದೇ ರೀತಿ ಸಾಫ್ಟ್‌ವೇರ್ ನೌಕರಿ ಬಿಟ್ಟು ಬೊಟಿಕ್ ಆರಂಭಿಸಿ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಮಹಿಳೆಯ ಯಶೋಗಾಥೆ ಇಲ್ಲಿದೆ.

ಆಕೆ ತಾನು ಮಾಡುತ್ತಿದ್ದ ಸಾಫ್ಟ್‌ವೇರ್ ನೌಕರಿಯನ್ನು ಬಿಟ್ಟು ಬಟ್ಟೆ ಹೊಲಿಯುವ ಕೆಲಸ ಆರಂಭಿಸಿದಳು. ಆಗ ಅವಳನ್ನು ಗೇಲಿ ಮಾಡಿದವರೇ ಹೆಚ್ಚು. ಆದರೆ, ಅದೇ ಮಹಿಳೆ ಇವತ್ತು ಯಶಸ್ವಿ ಉದ್ಯಮಿಯಾಗಿದ್ದು, ಅವರ ವ್ಯವಹಾರ ಈಗ ವರ್ಷಕ್ಕೆ 1 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಸುಷ್ಮಾ ಎಂಬ ಮಹಿಳೆಯ ಯಶಸ್ಸಿನ ಪಯಣ ಹೇಗಿತ್ತು ನೋಡೋಣ ಬನ್ನಿ.

ನಿನಗೆ ತಲೆಕೆಟ್ಟಿದೆಯಾ? ಚಿನ್ನದಂಥ ಕೆಲಸ ಯಾಕೆ ಬಿಡುತ್ತಿರುವೆ? ಲಕ್ಷಗಟ್ಟಲೆ ಸಂಬಳಕ್ಕೆ ಆರಾಮವಾಗಿ ದುಡಿಯುವುದು ಬಿಟ್ಟು ಊರಲ್ಲಿ ಯಾವುದೋ ವ್ಯಾಪಾರ ಮಾಡುವುದು ಉತ್ತಮ ಎಂದು ನಿನಗೆ ಅನಿಸುತ್ತಿದೆಯಾ? ಎಲ್ಲರೂ ಆರಂಭದಲ್ಲಿ ಆಕೆಗೆ ಇಂಥವೇ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಕೆಲಸ ಬಿಟ್ಟ ನಂತರ ಆಕೆ ಇವಾಗ 1 ಕೋಟಿ ವಹಿವಾಟಿನ ಉದ್ಯಮ ನಡೆಸುತ್ತಿದ್ದಾರೆ. ಹಲವರಿಗೆ ಉದ್ಯೋಗವನ್ನೂ ನೀಡಿದ್ದಾರೆ.

''ನಾನು ಕರ್ನಾಟಕದ ಸುರತ್ಕಲ್ ಎನ್​ಐಟಿಯಲ್ಲಿ ಎಂಟೆಕ್ ಮಾಡಿದ ನಂತರ ಕೆಲ ವರ್ಷ ನೌಕರಿ ಮಾಡಿದೆ. ಮದುವೆಯ ನಂತರ ನಾವಿಬ್ಬರೂ ಮಲೇಷ್ಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ವಿದೇಶದಲ್ಲಿ ಒಂದಿಷ್ಟು ವರ್ಷ ಕೆಲಸ ಮಾಡಿದರೆ ಒಂದಿಷ್ಟು ಹಣ ಕೂಡಿಸಬಹುದು ಎಂಬುದು ನಮ್ಮ ಆಸೆಯಾಗಿತ್ತು. ಆ ಮೊತ್ತದಲ್ಲಿ ವ್ಯಾಪಾರ ಮಾಡುವುದು ನನ್ನ ಯೋಚನೆ ಇತ್ತು. 2017 ರಲ್ಲಿ, ಮಲೇಷ್ಯಾದಲ್ಲಿ ಕಚ್ಚಾ ತೈಲ ಮತ್ತು ತಾಳೆ ಎಣ್ಣೆಯ ಬೆಲೆ ಕುಸಿದು ಆ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಯಿತು. ಉದ್ಯೋಗ ಕಳೆದುಕೊಳ್ಳುವ ಭಯದಿಂದ ನಾವು ಆತಂಕಗೊಂಡೆವು. ಈಗ ರಿಸ್ಕ್ ತೆಗೆದುಕೊಳ್ಳದೇ ಇದ್ದರೆ ಮುಂದೆ ಸಾಗಲು ಸಾಧ್ಯವೇ ಇಲ್ಲ ಎಂದು ಯೋಚಿಸಿದ ನಾನು ಕೆಲಸ ಬಿಟ್ಟು ನೇರವಾಗಿ ಕಡಪ ಜಿಲ್ಲೆಯ ವೇಂಪಲ್ಲಿಗೆ ಬಂದೆ."

''ನಾನು ಅನೇಕ ರೀತಿಯ ಕೆಲಸಗಳನ್ನು ಮಾಡಲು ಬಯಸಿದ್ದೆ. ಆದರೆ ಏನು ಮಾಡಬೇಕೆಂದು ನನಗೆ ಗೊತ್ತಾಗಿರಲಿಲ್ಲ. ಸಾವಯವ ಕೃಷಿ ಮಾಡಿ ಸಾವಯವ ಉತ್ಪನ್ನಗಳನ್ನು ಬೆಳೆಯಬೇಕು ಎಂದು ಆರಂಭದಲ್ಲಿ ನನಗೆ ಅನಿಸಿತ್ತು. ನಂತರ ನಾನು CBSE ಪಠ್ಯಕ್ರಮದ ಶಾಲೆಯೊಂದನ್ನು ಆರಂಭಿಸಲು ಬಯಸಿದ್ದೆ. ಆದರೆ ಈ ಎಲ್ಲ ವಿಚಾರಗಳು ಆರಂಭಿಕ ಹಂತದಲ್ಲೇ ನಿಂತುಹೋದವು."

ಕೋಟಿ ರೂಪಾಯಿ ಉದ್ಯಮದ ಒಡತಿ ಸುಷ್ಮಾ
ಕೋಟಿ ರೂಪಾಯಿ ಉದ್ಯಮದ ಒಡತಿ ಸುಷ್ಮಾ

''ಹೊಸ ಐಡಿಯಾಗಳು ಬರಬೇಕಾದರೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕೆಂಬುದು ನನ್ನ ಸಿದ್ಧಾಂತ. ಫ್ಯಾಷನ್ ಸಂಬಂಧಿತ ಕೆಲಸದ ಬಗ್ಗೆ ಒಂದಿಷ್ಟು ಐಡಿಯಾ ಬಂದಿತ್ತು. ಡಿಸೈನರ್ ಬಟ್ಟೆಗಳ ಬಗ್ಗೆ ಈಗ ಎಲ್ಲರೂ ಒಲವು ಹೊಂದಿರುವುದು ಇದಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಬೊಟಿಕ್ ಸ್ಥಾಪಿಸುವತ್ತ ನಾನು ಹೆಜ್ಜೆ ಇಡತೊಡಗಿದೆ. ನನಗೆ ಮಗ್ಗದ ಕೆಲಸ ಗೊತ್ತಿತ್ತು. ಅದನ್ನು ಒಂದು ಬಾರಿ ಕಲಿತಿದ್ದೆ. ಒಂದು ಕಾಲದಲ್ಲಿ ಮಕ್ಕಳಿಗೆ ಗೌನ್ ಹೊಲಿದು ಕೊಡುತ್ತಿದ್ದೆ. ಆದರೆ ಅಷ್ಟು ಅನುಭವ ಉದ್ಯಮ ಆರಂಭಿಸಲು ಸಾಕಾಗುತ್ತಿರಲಿಲ್ಲ. ಹಾಗಾಗಿಯೇ ನಾನು ಗ್ರಾಹಕರ ಅಗತ್ಯತೆ ಮತ್ತು ಬದಲಾದ ತಂತ್ರಜ್ಞಾನ ಮುಂತಾದ ವಿಷಯಗಳನ್ನು ಕಲಿತುಕೊಂಡೆ."

''ಅಂತಿಮವಾಗಿ, 2017ರಲ್ಲಿ ನಾನು ಟೈಲರ್‌ನ ಸಹಾಯದಿಂದ ಬೊಟಿಕ್ ಸ್ಥಾಪಿಸಿದೆ. ಇದನ್ನೆಲ್ಲಾ ನೋಡಿದ ಸಂಬಂಧಿಕರು ನೀನು ಯಾಕೆ ಕೆಲಸ ಬಿಟ್ಟೆ? ಇದೆಂಥ ಹುಚ್ಚು ಎಂದು ವ್ಯಂಗ್ಯವಾಡಿದರು. ಈ ಮಾತಿಗೆ ಹೆದರಿ ಒಂದು ಹೆಜ್ಜೆ ಹಿಂದಕ್ಕೆ ಇಟ್ಟರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಅವರ ಮಾತಿಗೆ ತಲೆಕೆಡಿಸಿಕೊಳ್ಳಲಿಲ್ಲ’’

''ಬೊಟಿಕ್ ತೆರೆದ ಕೆಲವೇ ದಿನಗಳಲ್ಲಿ ಬೇಡಿಕೆ ಹೆಚ್ಚಾಯಿತು. ವ್ಯಾಪಾರ ಅಂದ ಮೇಲೆ ಲಾಭ ಮತ್ತು ನಷ್ಟ ಎರಡೂ ಇರುತ್ತವೆ. ಇದಲ್ಲದೇ, ಈ ವ್ಯವಹಾರದಲ್ಲಿ ಸ್ಪರ್ಧೆ ಕೂಡ ಹೆಚ್ಚು. ನಾನು ಬೊಟಿಕ್ ಆರಂಭಿಸಿದಾಗ ಬೇರೆಯವರು ಕೂಡ ಬೊಟಿಕ್ ತೆರೆದು ನನಗೆ ಪೈಪೋಟಿ ಒಡ್ಡಿದರು. ಅವರು ನನ್ನ ಕೆಲಸಗಾರರನ್ನು ತಮ್ಮ ಕಡೆಗೆ ಸೆಳೆದುಕೊಂಡರು. ಒಂದು ಬಾರಿ ಒಂದೇ ಸಲಕ್ಕೆ ಆರು ಜನ ಕೆಲಸ ಬಿಟ್ಟಿದ್ದರಿಂದ ಸಮಸ್ಯೆಯಾಗಿತ್ತು."

''ಅನಿರೀಕ್ಷಿತ ಘಟನೆಗಳಿಂದ ಕೊಂಚ ಗೊಂದಲ ಆಗಿತ್ತು. ಸ್ನೇಹಿತರೊಬ್ಬರ ಸಹಾಯದಿಂದ ಹೊಲಿಗೆಯಲ್ಲಿ ನಿಪುಣನಾದ ಬಂಗಾಳದ ಟೈಲರ್ ಒಬ್ಬನನ್ನು ವೇಂಪಲ್ಲೆಗೆ ಕರೆಸಿದೆವು. ಇದರಿಂದ ಕೆಲಸದಲ್ಲಿ ವೈವಿಧ್ಯತೆ ಹೆಚ್ಚಿದೆ. ಒಳ್ಳೆಯ ಪ್ರಚಾರವೂ ಬಂದಿದೆ. ಅವನ ಸಹಾಯದಿಂದ ಇನ್ನೂ ಹತ್ತು ಜನರನ್ನು ಕರೆಸಲಾಯಿತು. ಅವಲಂಬನೆಯನ್ನು ಕಡಿಮೆ ಮಾಡಲು ನಾನು ಸ್ಥಳೀಯ ಮಹಿಳೆಯರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಇದರಿಂದಾಗಿ ಈಗ ಅವರೆಲ್ಲರೂ ಇಪ್ಪತ್ತೈದರಿಂದ ನಲವತ್ತು ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಪ್ರಸ್ತುತ ನಮ್ಮ ಸುಮಂಗಲಿ ಅಂಗಡಿಯಲ್ಲಿ 25 ಟೈಲರ್‌ಗಳು ಕೆಲಸ ಮಾಡುತ್ತಿದ್ದಾರೆ."

''ವೇಂಪಲ್ಲೆ ಹೊರತುಪಡಿಸಿ ನಮ್ಮ ಕಂಪನಿಯು ದೇಶದಾದ್ಯಂತ ಮತ್ತು ನೆದರ್ಲ್ಯಾಂಡ್ಸ್, ಅಮೆರಿಕ ಮತ್ತು ಆಸ್ಟ್ರೇಲಿಯಾದಂಥ ವಿವಿಧ ದೇಶಗಳಲ್ಲಿ ಗ್ರಾಹಕರನ್ನು ಹೊಂದಿದೆ. ಕಂಪನಿಯ ವಹಿವಾಟು ಈಗ 1 ಕೋಟಿ ರೂಪಾಯಿ ತಲುಪಿದೆ.''

''ಒಂಟಿ ಮಹಿಳೆ ಏನು ಮಾಡಬಲ್ಲವು. ನಾಲ್ಕು ದಿನ ಕಳೆದರೆ ಏನೂ ಮಾಡದೆ ಸುಮ್ಮನಾಗುತ್ತಾಳೆ ಎಂದು ಹೇಳುತ್ತ ಅನೇಕರು ನನ್ನ ಧೈರ್ಯ ಉಡುಗಿಸಲು ಯತ್ನಿಸಿದರು. ಆದರೆ ಅವನ್ನೆಲ್ಲ ತಲೆಗೆ ಹಚ್ಚಿಕೊಳ್ಳದೆ ನನ್ನ ಪಾಡಿಗೆ ನಾನು ಮುನ್ನಡೆದೆ. ಈಗ ನಾನೇ ಅನೇಕರಿಗೆ ಉದ್ಯೋಗ ನೀಡಿದ್ದೇನೆ. ಸ್ವತಂತ್ರವಾಗಿ ಕೆಲಸ ಮಾಡುವುದು ನನಗೆ ತುಂಬಾ ತೃಪ್ತಿ ತಂದಿದೆ.''

ಇದನ್ನೂ ಓದಿ: ಸ್ಟಾರ್ಟಪ್​ ಕಂಪನಿಗೆ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ ತಂತ್ರಜ್ಞಾನ ನೀಡಿದ ಇಸ್ರೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.