ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ.. 3 ಕೃಷಿ ಕಾನೂನುಗಳು ವಾಪಸ್​​!

author img

By

Published : Nov 29, 2021, 8:19 AM IST

Today Winter Session Begins, Farm Laws Repeal In Parliament, Parliament Winter Session Begins, Parliament Winter Session, Parliament Winter Session 2021, ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ, ಸಂಸತ್​ನಲ್ಲಿ ಮೂರು ಕೃಷಿ ಕಾನೂನುಗಳ ರದ್ದು, ಸಂಸತ್ ಚಳಿಗಾಲದ ಅಧಿವೇಶನ ಆರಂಭ, ಸಂಸತ್ ಚಳಿಗಾಲದ ಅಧಿವೇಶನ, ಸಂಸತ್ ಚಳಿಗಾಲದ ಅಧಿವೇಶನ 2021

ಇಂದಿನಿಂದ ಸಂಸತ್​ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಅಧಿವೇಶನದಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆ ಮತ್ತು ವಿಪಕ್ಷಗಳ ಪ್ಲಾನ್​ ಎಂಬುದರ ಬಗ್ಗೆ ತಿಳಿಯೋಣ ಬನ್ನಿ...

ನವದೆಹಲಿ: ಇಂದಿನಿಂದ ನಡೆಯುವ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವು 26 ಹೊಸ ಮಸೂದೆಗಳನ್ನು ಮಂಡಿಸಲಿದ್ದು, ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮೂರು ಕೃಷಿ ಕಾನೂನುಗಳ ರದ್ದತಿಗೆ ಆದ್ಯತೆ: ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಈ ವಾರದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟವು ಒಪ್ಪಿಕೊಂಡಿದೆ. ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಅಧಿವೇಶನದಲ್ಲಿ ಮಸೂದೆ ನಿಷೇಧ ಕಾಯ್ದೆ ಮಂಡನೆಯಾಗಲಿದೆ. ಕೇಂದ್ರ ಕೃಷಿ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್​ ಈ ಬಿಲ್​​ ಸಂಸತ್​ನಲ್ಲಿ ಮಂಡನೆ ಮಾಡಲಿದ್ದಾರೆ.

ಕ್ರಿಪ್ಟೋಕರೆನ್ಸಿ ನಿಯಂತ್ರಣ ಬಿಲ್​ : ಕೇಂದ್ರ ಸರ್ಕಾರವು ಮಂಡಿಸುತ್ತಿರುವ ಬಿಲ್​ಗಳಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಬಿಲ್- 2021 ಅತ್ಯಂತ ಪ್ರಮುಖವಾಗಿದೆ.

ಮಹಿಳಾ ಮೀಸಲಾತಿ ಮಸೂದೆ: ಬಹುಕಾಲದಿಂದಲೂ ಬಾಕಿ ಉಳಿಸಿಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೇಡಿಕೆ ಇಟ್ಟಿದೆ. ರಾಜ್ಯಸಭೆಯ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಈ ಕುರಿತು ಟ್ವೀಟ್ ಮಾಡಿದ್ದು, ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕೆಂದು ಒತ್ತಾಯಿಸಿದ್ದಾರೆ.

2014ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಈ ಭರವಸೆ ನೀಡಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ತೃಣಮೂಲ ಕಾಂಗ್ರೆಸ್ ಒತ್ತಾಯಿಸಲಿದೆ ಎಂದು ಡೆರೆಕ್ ಓಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್​ಎಫ್​​) ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತಂತೆಯೂ ಸರ್ವ ಪಕ್ಷ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ. ಅದರ ಜೊತೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ತರಬೇಕೆಂದು ಹಾಗೂ ಸಾರ್ವಜನಿಕ ವಲಯದಲ್ಲಿ ಲಾಭದಲ್ಲಿರುವ ಉದ್ಯಮಗಳಲ್ಲಿನ ಬಂಡವಾಳ ಹಿಂಪಡೆತ ವಿಚಾರ ಚರ್ಚೆ ನಡೆಸಬೇಕೆಂದು ತೃಣಮೂಲ ಕಾಂಗ್ರೆಸ್​​ನ ಸುದೀಪ್ ಬಂಡೋಪಾಧ್ಯಾಯ ಮತ್ತು ಡೆರೇಕ್ ಓ ಬ್ರಿಯಾನ್ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಟ್ರ್ಯಾಕ್ಟರ್​ಗಳ ಮೆರವಣಿಗೆ ಮುಂದಕ್ಕೆ: ದೆಹಲಿಯಲ್ಲಿ ಇತರ ಪ್ರತಿಭಟನೆಗಳ ಜೊತೆಗೆ ಟ್ರ್ಯಾಕ್ಟರ್​ಗಳ ಮೆರವಣಿಗೆ ಮಾಡಲಾಗುತ್ತದೆ. ಉಳಿದ ಬೇಡಿಕೆಗಳನ್ನೂ ಸರ್ಕಾರದ ಮುಂದೆ ಇರಿಸಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶಾಶ್ವತಗೊಳಿಸಲು ಅದಕ್ಕೆ ಶಾಸನೀಯ ಮಾನ್ಯತೆಯನ್ನು ನೀಡಬೇಕೆಂದು ಒತ್ತಾಯಿಸಲು ನವದೆಹಲಿಯ ಕಡೆಗೆ ನವೆಂಬರ್ 29ರಂದು 60 ಟ್ರ್ಯಾಕ್ಟರ್​ಗಳ ಮೆರವಣಿಗೆ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಕಳೆದ ಮಂಗಳವಾರ ಹೇಳಿದ್ದರು.

ಆದ್ರೆ ಮೂರು ಕೃಷಿ ಕಾಯ್ದೆ ರದ್ದುಗೊಳಿಸಿರುವ ಮಸೂದೆ ಮಂಡನೆ ಮಾಡಲು ಕೇವಲ ಎರಡು ದಿನ ಬಾಕಿ ಇರುವಾಗಲೇ ರೈತ ಸಂಘಟನೆಗಳು ಸೋಮವಾರ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ಕೂಡ ಮುಂದೂಡಿಕೆ ಮಾಡಲಾಗಿವೆ. ಡಿಸೆಂಬರ್​​ 4ರವರೆಗೆ ಕಾಯ್ದು ನೋಡುವ ನಿರ್ಧಾರ ಕೈಗೊಂಡಿವೆ.

ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಪ್ರಮುಖವಾಗಿ ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ, ಇಂಧನ ಬೆಲೆ ಏರಿಕೆ, ಹಣದುಬ್ಬರ, ಕ್ರಿಪ್ಟೋ ಕರೆನ್ಸಿ, ಲಖೀಂಪುರಿ ಖೇರಿ ಹಿಂಸಾತ್ಮಕ ಘಟನೆ ಸೇರಿದಂತೆ ಅನೇಕ ವಿಚಾರಗಳು ಪ್ರಸ್ತಾಪಗೊಳ್ಳಲಿವೆ.

ಕಾಂಗ್ರೆಸ್​​ ಸೇರಿದಂತೆ ಅನೇಕ ಪಕ್ಷಗಳು ಕೇಂದ್ರದ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ. ಅಧಿವೇಶನವು ಇಂದಿನಿಂದ ಪ್ರಾರಂಭವಾಗಿ, ಡಿಸೆಂಬರ್ 23ರಂದು ಮುಕ್ತಾಯಗೊಳ್ಳಲಿದೆ. ನವೆಂಬರ್ 29ರಂದು ಎಲ್ಲ ಸಂಸದರು ಉಭಯ ಸದನಗಳಲ್ಲಿ ಹಾಜರಿರಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿಪ್ ಜಾರಿ ಮಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.