ಭಾರತದಿಂದ ಐವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಮಾತೃಪ್ರೇಮ.. ಯುಎಸ್ ಮಹಿಳೆಗೆ ಸಲಾಂ

author img

By

Published : Oct 12, 2021, 5:45 PM IST

ಕ್ರಿಸ್ಟನ್ ಗ್ರೇ ವಿಲಿಯಮ್ಸ್

ತನ್ನವರಿಲ್ಲದ ಯಾವುದೇ ಮಗುವಾಗಲಿ ಅದು ಅನಾಥಾಶ್ರಮದಲ್ಲಿರುವುದಕ್ಕಿಂತ ತಮ್ಮ ಮನೆಯಲ್ಲಿ ಇರಿಸಿಕೊಂಡರೆ ಸಂತೋಷವಾಗಿರುತ್ತದೆ ಎಂದು ಭಾವಿಸಿದ್ದ ಅಮೆರಿಕದ ಮಹಿಳೆಯೊಬ್ಬರು ಇದೀಗ ಭಾರತದ ಐವರು ಹುಡುಗಿಯರಿಗೆ ತಾಯಿಯಾಗಿದ್ದಾರೆ. ಇಲ್ಲಿದೆ ನೋಡಿ ಅವರ ಮಾನವೀಯತೆಯ ಕಥೆ..

ಅಕ್ಟೋಬರ್​ 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಇದರ ಅಂಗವಾಗಿ 'ಹ್ಯೂಮನ್ಸ್ ಆಫ್​ ಬಾಂಬೆ' (Humans of Bombay) ಎಂಬ ಫೋಟೋ ಬ್ಲಾಗ್ ತನ್ನ ಫೇಸ್​ಬುಕ್​ ಖಾತೆಯಲ್ಲಿ ಅಮೆರಿಕದ ಮಹಿಳೆಯೊಬ್ಬರ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಈ ಅವಿವಾಹಿತ ಮಹಿಳೆ ಭಾರತದಿಂದ ಐವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಯುಎಸ್​ನ ಕ್ರಿಸ್ಟನ್ ಗ್ರೇ ವಿಲಿಯಮ್ಸ್ ಎಂಬ ಮಹಿಳೆ ತಾನು ತಾಯಿಯಾಗಬೇಕೆಂದು ಕನಸು ಕಂಡಿರುತ್ತಾರೆ. ಆದರೆ ಅವರಿಗೆ ಸಂಗಾತಿಯಿಲ್ಲದ ಕಾರಣ, ತಮ್ಮ 39ನೇ ವಯಸ್ಸಿನಲ್ಲಿ ಮಗುವೊಂದನ್ನು ದತ್ತು ಪಡೆಯಲು ನಿರ್ಧರಿಸುತ್ತಾರೆ. ತನ್ನವರಿಲ್ಲದ ಯಾವುದೇ ಮಗುವಾಗಲಿ ಅದು ಅನಾಥಾಶ್ರಮದಲ್ಲಿರುವುದಕ್ಕಿಂತ ತಮ್ಮ ಮನೆಯಲ್ಲಿ ಇರಿಸಿಕೊಂಡರೆ ಸಂತೋಷವಾಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಒಬ್ಬ 'ಒಂಟಿ ಮಹಿಳೆ'ಯಿಂದ ಇದು ಸಾಧ್ಯವೇ ಎಂಬ ಪ್ರಶ್ನೆಯನ್ನು ಬದಿಗೊತ್ತಿ, ಕೊನೆಗೂ ಮಕ್ಕಳನ್ನು ದತ್ತು ಪಡೆದಿದ್ದಾರೆ.

ಬೇರೆ ಬೇರೆ ದೇಶಗಳಿಂದ ದತ್ತು ಪಡೆಯಲು ಮಕ್ಕಳನ್ನು ಅನ್ವೇಷಿಸಲು ಕ್ರಿಸ್ಟನ್ ಗ್ರೇ ವಿಲಿಯಮ್ಸ್ ಪ್ರಾರಂಭಿಸಿದರು. ಮೊದಲು ನೇಪಾಳಕ್ಕೆ ಅರ್ಜಿ ಸಲ್ಲಿಸಿದ ಇವರು 28,000 ಯುಎಸ್​ ಡಾಲರ್‌ಗಳನ್ನು ಪಾವತಿಸಿದ್ದರು. ಆದರೆ ಅಮೆರಿಕ ಸರ್ಕಾರವು ನೇಪಾಳದಿಂದ ದತ್ತು ಸ್ವೀಕಾರವನ್ನು ಸ್ಥಗಿತಗೊಳಿಸಿತು.

ವಿಶೇಷ ಚೇತನ ಮಕ್ಕಳ ದತ್ತು ಪಡೆದ ಕ್ರಿಸ್ಟನ್​

ಇದರ ನೋವಿನಲ್ಲಿರುವ ವೇಳೆ ಭಾರತದ ದತ್ತು ನೀಡುವ ಏಜೆನ್ಸಿಯಿಂದ ಕ್ರಿಸ್ಟನ್​ಗೆ ಕರೆ ಬಂದಿತು. ಆದರೆ ಇದಕ್ಕೆ ಒಂದು ಷರತ್ತು ಇತ್ತು. ವಿಶೇಷ ಚೇತನ ಮಗುವೊಂದನ್ನು ದತ್ತು ತೆಗೆದುಕೊಳ್ಳುವುದಾದರೆ ಮಾತ್ರ ನೀಡುವುದಾಗಿ ಏಜೆನ್ಸಿ ಹೇಳಿತ್ತು. ಒಂದು ಬಾರಿ ತಬ್ಬಿಬ್ಬಾದ ಕ್ರಿಸ್ಟನ್ ಫೋನ್​ ಕಟ್​ ಮಾಡಿ, ಆಲೋಚಿಸುತ್ತಾ ನಿಂತಿರುವಾಗ ತಕ್ಷಣವೇ ಅವರ ತಾಯಿಯ ಕರೆ ಬಂತು. ಕಾಲ್​ ಪಿಕ್​ ಮಾಡಿದ ಕ್ರಿಸ್ಟನ್, ದೀರ್ಘ ಉಸಿರು ತೆಗೆದುಕೊಂಡು, "ಅಮ್ಮಾ ನಾನು ವಿಶೇಷ ಚೇತನ ಮಗುವೊಂದಕ್ಕೆ ತಾಯಿಯಾಗುತ್ತಿರುವೆ" ಎಂದು ಹೇಳಿಬಿಟ್ಟರಂತೆ. ಆ ಒಂದೇ ಸೆಕೆಂಡ್​ನಲ್ಲಿ ನಾನು ನಿರ್ಧಾರ ತೆಗೆದುಕೊಂಡೆ ಎಂದು ಹೇಳುತ್ತಾರೆ ಕ್ರಿಸ್ಟನ್.

ಮುನ್ನಿ ಎಂಬ ಐದು ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯನ್ನು ಮೊದಲು ದತ್ತು ಪಡೆಯಲು ನಿರ್ಧರಿಸಿದ ಕ್ರಿಸ್ಟನ್​, 2013 ರ ಪ್ರೇಮಿಗಳ ದಿನ (ಫೆ.14)ದಂದು ಮುನ್ನಿಯನ್ನು ತನ್ನ ಮನೆಗೆ ಕರೆತಂದರು. ಸ್ವಂತ ಮಗಳಂತೆ ಆಕೆಯನ್ನು ನೋಡಿಕೊಳ್ಳಲು ಪ್ರಾರಂಭಿಸಿದರು. ಆದರೆ ಮುನ್ನಿಯನ್ನು ಏಕಾಂಗಿಯಾಗಿ ಬೆಳೆಸಲು ಇಷ್ಟಪಡದ ಕ್ರಿಸ್ಟನ್, ಅವಳ ಜೊತೆ ಇರಲು ಇನ್ನೊಂದು ಮಗುವನ್ನು ದತ್ತು ಪಡೆಯಲು ಮುಂದಾಗುತ್ತಾರೆ.

ಆದರೆ ರೂಪಾ ಎಂಬ ಈ ಮಗುವಿಗೆ ಮೂಗು ಇರಲಿಲ್ಲ. ಪೋಷಕರು ಈಕೆಯನ್ನು ಬೀದಿಯಲ್ಲಿ ಎಸೆದು ಹೋಗಿದ್ದರು. ಈ ವೇಳೆ ನಾಯಿಗಳ ದಾಳಿಗೆ ಸಿಲುಕಿ ಮೂಗು ಕಳೆದುಕೊಂಡಿದ್ದಳು. ಈ ಮಗುವನ್ನೂ ಸಹ ಕ್ರಿಸ್ಟನ್​ ದತ್ತು ಪಡೆದು ಅಮೆರಿಕದಲ್ಲಿರುವ ತಮ್ಮ ಮನೆಗೆ ಕರೆತಂದರು. ರೂಪಾ ಮತ್ತು ಮುನ್ನಿ ಇಬ್ಬರೂ ಪರಸ್ಪರ ಬಹಳ ಹತ್ತಿರವಾದರು. ಬಳಿಕ 2019 ರ ವೇಳೆಗೆ ಮೋಹಿನಿ ಮತ್ತು ಸೊನಾಲಿ ಎಂಬ ಮತ್ತಿಬ್ಬರು ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸಿದರು.

ಐವರು ಹುಡುಗಿಯರೀಗ ಅವರ ಮಕ್ಕಳು..

ತನ್ನ ಶಿಕ್ಷಕ ವೃತ್ತಿಯಿಂದ ಬರುತ್ತಿದ್ದ ಸಂಬಳ ನಾಲ್ವರನ್ನೂ ಸಾಕಲು ಸಾಲುತ್ತಿರಲಿಲ್ಲ. ಹೀಗಾಗಿ ಈ ವೃತ್ತಿಯನ್ನು ತೊರೆದು ರಿಯಲ್​ ಎಸ್ಟೇಟ್​ ಕಡೆ ಗಮನ ಹರಿಸಿದರು. ಬಳಿಕ 2020ರ ಜನವರಿಯಲ್ಲಿ ಡೌನ್ ಸಿಂಡ್ರೋಮ್​ನಿಂದ ಬಳಲುತ್ತಿದ್ದ ಸ್ನಿಗ್ಧ ಎಂಬ ಹುಡುಗಿಯನ್ನು ದತ್ತು ಪಡೆಯಲು ಮುಂದಾದರು. ಆದರೆ ಕೋವಿಡ್​ನಿಂದಾಗಿ ಇದೀಗ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಭಾರತದಿಂದ ಕರೆದೊಯ್ದ ಈ ಎಲ್ಲಾ ಐವರು ಹುಡುಗಿಯರು ಇದೀಗ ನನ್ನ ಮಕ್ಕಳಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕ್ರಿಸ್ಟನ್​.

ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಟೋರಿಯನ್ನು ಓದಿದ ನೆಟ್ಟಿಗರು, ನಿಮ್ಮ ನಿಸ್ವಾರ್ಥ ಪ್ರೀತಿ, ಸಮರ್ಪಣೆಗೆ ಮೂಕವಿಸ್ಮಿತರಾಗಿದ್ದೇವೆ. ನೀವೊಬ್ಬ ಅದ್ಭುತ ಮಹಿಳೆ, ಇದು ಎಂತಹ ಸುಂದರ ಕುಟುಂಬ ಮತ್ತು ಸುಂದರ ಕಥೆ ಎಂದೆಲ್ಲಾ ಹಾಡಿಹೊಗಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.