ಬಿಜೆಪಿಯಲ್ಲಿ ಕುಗ್ಗುತ್ತಿದೆಯಾ ವರುಣ್​ ಗಾಂಧಿ ವರ್ಚಸ್ಸು.. ಮುಂದೇನು?

author img

By

Published : Oct 11, 2021, 10:33 PM IST

ವರುಣ್​ ಗಾಂಧಿ

ಮನೇಕಾ ಗಾಂಧಿ ಹಾಗೂ ಗಾಂಧಿ ಕುಟುಂಬದ ನಡುವಿನ ಭಿನ್ನಾಭಿಪ್ರಾಯವು ವರುಣ್​ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಿಯಾಗಬಹುದು. ಲಖಿಂಪುರ ಖೇರಿ ಘಟನೆಯ ನಂತರ ವರುಣ್, ಬಿಜೆಪಿಯಿಂದ ದೂರವಿದ್ದಾರೆ. ಸದ್ಯ ಅವರ ಬೆಂಬಲಿಗರು ಸಮಾಜವಾದಿ ಪಕ್ಷಕ್ಕೆ ಸೇರುವಂತೆ ಸಲಹೆ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ವರುಣ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..

ಹೈದರಾಬಾದ್ : ಅಕ್ಟೋಬರ್ 7ರಂದು ಘೋಷಿಸಲಾಗಿರುವ ಬಿಜೆಪಿಯ ಹೊಸ ಕಾರ್ಯಕಾರಿ ಸಮಿತಿಯಲ್ಲಿ ಅನೇಕ ಅನುಭವಿ ರಾಜಕಾರಣಿಗಳನ್ನು ಕೈಬಿಡಲಾಗಿದೆ. ಸುಬ್ರಮಣಿಯನ್ ಸ್ವಾಮಿ, ವಸುಂಧರಾ ರಾಜೇ, ವಿಜಯ್ ಗೋಯೆಲ್, ವಿನಯ್ ಕಟಿಯಾರ್ ಅವರಂತಹ ನಾಯಕರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ವರುಣ್ ಗಾಂಧಿ ಮತ್ತು ಮನೇಕಾ ಗಾಂಧಿಯವರನ್ನೂ ಪಕ್ಷ ನಿರ್ಲಕ್ಷ್ಯಿಸುತ್ತಿದೆ ಎನ್ನಲಾಗಿದೆ. ಸದ್ಯ ಬಿಜೆಪಿಯಲ್ಲಿ ಜೋತಿರಾದಿತ್ಯ ಸಿಂಧಿಯಾ ಹಾಗೂ ಅನುರಾಗ್ ಠಾಕೂರ್​ಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರ್ತಿವೆ. ವರುಣ್​ ಗಾಂಧಿ ರೈತರ ಹೋರಾಟದ ವಿಚಾರದಲ್ಲಿ ಬಿಜೆಪಿಗೆ ಸಲಹೆ ನೀಡುತ್ತಲೇ ಬಂದಿದ್ದರು.

ಆದರೆ, ಬಿಜೆಪಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಲಖಿಂಪುರ ಖೇರಿ ವಿಚಾರದಲ್ಲಿ ಅವರು ಕೇಂದ್ರದ ವಿರುದ್ಧವೇ ಮಾತನಾಡಿದ್ರು. ಅಲ್ಲದೆ, ರೈತರ ಸಮಸ್ಯೆ (ಕಬ್ಬಿನ ಬೆಲೆ ಮತ್ತು ಬಾಕಿ ಪಾವತಿಯಂತಹ ವಿಚಾರಗಳು) ಕುರಿತು ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ಪತ್ರ ಬರೆಯುತ್ತಲೇ ಇದ್ದಾರೆ. ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿ, ಸುಲ್ತಾನಪುರ ಕ್ಷೇತ್ರದಿಂದ ಮನೇಕಾ ಗಾಂಧಿ ಸಂಸದರಾಗಿದ್ದಾರೆ.

ಚಿಂತೆ ಮಾಡುವುದೇನಿದೆ?

ರಾಷ್ಟ್ರೀಯ ಕಾರ್ಯಕಾರಿ ಸಮಿತಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮನೇಕಾ ಗಾಂಧಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಪ್ರತಿವರ್ಷ ಬದಲಾಯಿಸಲಾಗುತ್ತದೆ. ಕಾರ್ಯಕಾರಿ ಬದಲಾಯಿಸುವುದು ಪಕ್ಷದ ಕರ್ತವ್ಯ. ನಾನು 25 ವರ್ಷಗಳಿಂದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿದ್ದೇನೆ. ಸಮಿತಿಯಲ್ಲಿ ಹೊಸಬರಿಗೆ ಅವಕಾಶ ಸಿಗಬೇಕು. ಚಿಂತೆ ಮಾಡುವುದೇನಿದೆ ಎಂದು ಪ್ರಶ್ನಿಸಿದ್ರು. ಆದರೆ, ಈ ಬಗೆಯಲ್ಲಿ ವರುಣ್ ಗಾಂಧಿ ಮೌನಕ್ಕೆ ಶರಣಾಗಿದ್ರು.

1998ರಲ್ಲಿ ಬಿಜೆಪಿ ಸೇರಿದ್ದ ಮನೇಕಾ

ಗಾಂಧಿ ಕುಟುಂಬದ ಸೊಸೆ ಮನೇಕಾ ಗಾಂಧಿ, 1998ರಲ್ಲಿ ಬಿಜೆಪಿ ಸೇರಿದ್ರು. ಅದಕ್ಕೂ ಮುನ್ನ ಅವರು 1989, 1996ರಲ್ಲಿ ಫಿಲಿಭಿತ್​ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿದ್ರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮನೇಕಾ ಗಾಂಧಿ ರಾಜ್ಯ ಸಚಿವರಾಗಿದ್ದರು. (ಸ್ವತಂತ್ರ ಉಸ್ತುವಾರಿ). 2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಲಾಯಿತು.

2004ರಲ್ಲಿ ಕೇಸರಿ ಬ್ರಿಗೇಡ್ ಸೇರಿದ್ದ ವರುಣ್ ಗಾಂಧಿ

2004ರಲ್ಲಿ ವರುಣ್ ಗಾಂಧಿ, ಎಲ್​.ಕೆ.ಅಡ್ವಾಣಿ, ವೆಂಕಯ್ಯನಾಯ್ಡು, ರಾಜನಾಥ್ ಸಿಂಗ್, ಪ್ರಮೋದ್ ಮಹಾಜನ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ರು. ಈ ಸಮಯದಲ್ಲಿ ಅವರು, ಗಾಂಧಿ ಕುಟುಂಬವನ್ನು ಎದುರಿಸಲು ಗಾಂಧಿ ಕುಡಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಬಲವಾಗಿ ನಂಬಿತ್ತು. ವರುಣ್​ 2009ರಲ್ಲಿ ಫಿಲಿಭಿತ್​ನಿಂದ ಗೆದ್ದು ಸಂಸತ್ ಪ್ರವೇಶಿಸಿದ್ರು. ಮನೇಕಾ ಗಾಂಧಿ ಸುಲ್ತಾನಪುರದಿಂದ ಸ್ಪರ್ಧಿಸಿ ಗೆದ್ದರು. ಇದಾದ ಬಳಿಕ ಇಬ್ಬರಿಗೂ ಬಿಜೆಪಿ ಟಿಕೆಟ್ ನೀಡಿದ್ದು, ನಿರಂತರವಾಗಿ ಗೆಲ್ಲುತ್ತಾ ಬಂದಿದ್ದಾರೆ.

ಬಿಜೆಪಿಯಲ್ಲಿ ‘ಗಾಂಧಿ’ ಕುಟುಂಬದ ವರ್ಚಸ್ಸು ಕುಗ್ಗುತ್ತಿದೆಯಾ?

2009ರ ಚುನಾವಣೆಯಲ್ಲಿ ವರುಣ್ ಗಾಂಧಿ ಬಿಜೆಪಿಯ ಕಾರ್ಯಸೂಚಿಗೆ ಸರಿಹೊಂದುವಂತಹ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ರು. ಆ ಸಮಯದಲ್ಲೇ ಅವರು ಫೈರ್ ಬ್ರಾಂಡ್ ನಾಯಕನಾಗಿ ಹೊರಹೊಮ್ಮಲು ಆರಂಭಿಸಿದರು. ಇದು ಪಕ್ಷದ ಒಂದು ಟೀಂನಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿತು. ಆದರೆ, ಬಿಜೆಪಿ ವರುಣ್​ ಗಾಂಧಿ​ ಪ್ರಚಾರವನ್ನು ಮುಂದುವರೆಸಿತು.

2013ರಲ್ಲಿ ರಾಜನಾಥ್ ಸಿಂಗ್ ಅವರನ್ನು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. 2014ರಲ್ಲಿ ಅಮಿತ್ ಶಾ ಮತ್ತು ಮೋದಿ ಯುಗ ಬಂದಾಗ, ಬಿಜೆಪಿಯಲ್ಲಿ ವರುಣ್​ ಗಾಂಧಿ​ ಸ್ಥಾನಮಾನ ಕುಸಿಯಲಾರಂಭಿಸಿತು. ಮಂತ್ರಿ ಸ್ಥಾನಕ್ಕೆ ವರುಣ್​ ಹೆಸರನ್ನು ಪರಿಗಣಿಸಲಿಲ್ಲ. ಹಾಗೆಯೇ ಮೋದಿ ಸರ್ಕಾರದ ಎರಡನೇ ಅವಧಿಯಲ್ಲೂ ಮನೇಕಾ ಗಾಂಧಿಗೆ ಸ್ಥಾನ ಸಿಗಲಿಲ್ಲ. ಈಗ ಬಿಜೆಪಿ ಕಾರ್ಯಕಾರಿಣಿಯಿಂದಲೂ ತಾಯಿ-ಮಗನ ಹೆಸರು ಕೈ ಬಿಟ್ಟಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.

ವರುಣ್ ವರ್ಸಸ್ ರಾಹುಲ್

ರಾಹುಲ್ ಗಾಂಧಿ ವಿರುದ್ಧ ವರುಣ್ ಗಾಂಧಿ ಸ್ಪರ್ಧಿಸಬೇಕೆಂದು ಬಿಜೆಪಿ ಬಯಸಿದೆ ಎಂದು ತಜ್ಞರು ನಂಬಿದ್ದಾರೆ. ಆದರೆ, 1984ರ ಚುನಾವಣೆಯಲ್ಲಿ ಮನೇಕಾ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿ, ರಾಜೀವ್‌ ಗಾಂಧಿ ವಿರುದ್ಧ ಸೋತಿದಿದ್ದರು. ಅಮೇಥಿಯು ಕಾಂಗ್ರೆಸ್ ನಾಯಕ ಮತ್ತು ಮನೇಕಾ ಗಾಂಧಿಯವರ ಪತಿ ಸಂಜಯ್ ಗಾಂಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿತ್ತು. ಆದರೆ, ಚುನಾವಣೆಯಲ್ಲಿ ಸೋತ ನಂತರ ಅವರು ಫಿಲಿಭಿತ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರು.

ಮನೇಕಾ ಗಾಂಧಿ, ವರುಣ್ ಗಾಂಧಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಣಿಯಲು ಬಿಜೆಪಿ ಯತ್ನಿಸಿತು. ಆದರೆ, 16 ವರ್ಷಗಳಲ್ಲಿ ಒಮ್ಮೆಯೂ ಅವರಿಬ್ಬರು ಗಾಂಧಿ ಕುಟುಂಬದ ವಿರುದ್ಧ ಸೊಲ್ಲೆತ್ತಿರಲಿಲ್ಲ. ರಾಹುಲ್ ಮತ್ತು ಪ್ರಿಯಾಂಕಾ ಜತೆ ವರುಣ್ ಗಾಂಧಿ ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಅವರು ಎಂದಿಗೂ ಕಾಂಗ್ರೆಸ್ ವಿರುದ್ಧ ಮಾತನಾಡಿರಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿಯನ್ನು 55 ಸಾವಿರ ಮತಗಳ ಅಂತರದಿಂದ ಸೋಲಿಸಿದ್ರು.

ರಾಜನಾಥ್ ಸಿಂಗ್ ಪ್ರಧಾನಿ ಅಭ್ಯರ್ಥಿ ಎಂದಿದ್ದ ವರುಣ್

2014ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚಿಸುತ್ತಿದ್ದ ವೇಳೆ, ವರುಣ್ ಗಾಂಧಿ ಬಹಿರಂಗವಾಗಿ ರಾಜನಾಥ್ ಸಿಂಗ್ ಹೆಸರನ್ನು ಸೂಚಿಸಿದ್ರು. ಸಭೆಯೊಂದರಲ್ಲಿ ರಾಜನಾಥ್​ ಸಿಂಗ್ ಬಿಜೆಪಿಯ ಎರಡನೇ ಅಟಲ್ ಬಿಹಾರಿ ಎಂದು ಬಣ್ಣಿಸಿದ್ರು. ಈ ಹೇಳಿಕೆಯು ಬಿಜೆಪಿಯಲ್ಲಿ ಅವರ ವರ್ಚಸ್ಸನ್ನು ಕುಗ್ಗಿಸಿತು. ಮೋದಿ ಯುಗ ಆರಂಭವಾದಾಗ ರಾಜನಾಥ್ ಪರವಿದ್ದ ನಾಯಕರು ಕ್ರಮೇಣ ಹುದ್ದೆಗಳಿಂದ ಮುಕ್ತರಾದರು.

ಸಮಾಜವಾದಿ ಪಕ್ಷಕ್ಕೆ ಹೋಗ್ತಾರಾ ವರುಣ್ ಗಾಂಧಿ?

ವರುಣ್ ಗಾಂಧಿಗೆ ಕಾಂಗ್ರೆಸ್ ಹಾದಿ ತೆರೆದಿದ್ದರೂ, ಅವರ ಪ್ರವೇಶ ಸುಲಭವಲ್ಲ ಎಂದು ರಾಜಕೀಯ ತಜ್ಞರು ನಂಬಿದ್ದಾರೆ. ಕಾಂಗ್ರೆಸ್​ನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೇ, ಮನೇಕಾ ಗಾಂಧಿ ಹಾಗೂ ಗಾಂಧಿ ಕುಟುಂಬದ ನಡುವಿನ ಭಿನ್ನಾಭಿಪ್ರಾಯವು ವರುಣ್​ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಿಯಾಗಬಹುದು. ಲಖಿಂಪುರ ಖೇರಿ ಘಟನೆಯ ನಂತರ ವರುಣ್, ಬಿಜೆಪಿಯಿಂದ ದೂರವಿದ್ದಾರೆ. ಸದ್ಯ ಅವರ ಬೆಂಬಲಿಗರು ಸಮಾಜವಾದಿ ಪಕ್ಷಕ್ಕೆ ಸೇರುವಂತೆ ಸಲಹೆ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ವರುಣ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಮಧ್ಯೆ ಮನೇಕಾ ಗಾಂಧಿ, ನಾನು ಬಿಜೆಪಿಯಲ್ಲಿದ್ದೇನೆ, ಬಿಜೆಪಿಯಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಆದರೆ, ವರುಣ್ ಗಾಂಧಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.