ಸಾಕು ಶ್ವಾನವನ್ನು ನಾಯಿ ಎಂದು ಕರೆದಿದ್ದಕ್ಕೆ ರೈತನ ಹತ್ಯೆ!

author img

By

Published : Jan 21, 2023, 10:13 PM IST

tamil-nadu-farmer-killed-for-calling-pet-dog-a-dog

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಸಾಕು ನಾಯಿಯನ್ನು ನಾಯಿ ಎಂದು ಕರೆದಿದ್ದಕ್ಕೆ ರೈತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಘಟನೆ ಸಂಬಂಧ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ದಿಂಡಿಗಲ್ (ತಮಿಳುನಾಡು): ಮನೆಗಳಲ್ಲಿ ನಾಯಿಗಳನ್ನು ಸಾಕುವುದು ಸಾಮಾನ್ಯ. ಜೊತೆಗೆ ತಾವು ಪ್ರೀತಿಯಿಂದ ಸಾಕಿದ ನಾಯಿಗಳಿಗೆ ನಾನಾ ಹೆಸರನ್ನು ಅವುಗಳ ಮಾಲೀಕರು ಮತ್ತು ಕುಟುಂಬದವರು ಇಟ್ಟಿರುತ್ತಾರೆ. ಆದರೆ, ಸಾಕಿದ ಶ್ವಾನವನ್ನು ನಾಯಿ ಎಂದು ಕರೆದ ಒಂದೇ ಒಂದು ಕ್ಷುಲ್ಲಕ ಕಾರಣಕ್ಕೆ ರೈತನೋರ್ವನನ್ನು ಹತ್ಯೆ ಮಾಡಿದ ಭೀಭತ್ಸ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ. 65 ವರ್ಷದ ರಾಯಪ್ಪನ್ ಎಂಬುವವರೇ ಕೊಲೆಯಾದ ರೈತ ಎಂದು ಗುರುತಿಸಲಾಗಿದೆ.

ಕೊಲೆಯಾದ ರಾಯಪ್ಪನ್ ಓರ್ವ ರೈತನಾಗಿದ್ದು, ನಾಯಿ ವಿಚಾರಕ್ಕೆ ಶುಕ್ರವಾರ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಕೊಲೆಯನ್ನು ನೆರೆಮನೆಯ ಡೇನಿಯಲ್ ಮತ್ತು ಆತನ ಸಹೋದರ ಕೂಡಿಕೊಂಡು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರಾಯಪ್ಪನ್ ಮತ್ತು ಡೇನಿಯಲ್ ಇಬ್ಬರೂ ಕೂಡ ಸಂಬಂಧಿಕರಾಗಿದ್ದಾರೆ.

ಇಷ್ಟಕ್ಕೂ ನಡೆದಿದ್ದೇನು?: ಶುಕ್ರವಾರ ರಾಯಪ್ಪನ್ ತನ್ನ ಮೊಮ್ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಡೇನಿಯಲ್ ಸಹೋದರ ವಿನ್ಸೆಂಟ್ ಸಾಕಿದ್ದ ನಾಯಿ ರಾಯಪ್ಪನ್​ ಅವರತ್ತ ಬೊಗಳುತ್ತ ಬಂದಿತ್ತು ಎಂದು ಹೇಳಲಾಗುತ್ತದೆ. ಇದಾದ ನಂತರ ರಾಯಪ್ಪನ್​ 'ಗೋ ನಾಯಿ' ಎಂದು ಹೇಳುತ್ತ ಅದನ್ನು ಓಡಿಸಲು ಮುಂದಾಗಿದ್ದಾರೆ. ಅಲ್ಲದೇ, ತಮ್ಮ ಮೊಮ್ಮಗನಿಗೆ ಈ ನಾಯಿಗಳನ್ನು ಓಡಿಸಲು ಕೋಲು ತರುವಂತೆ ರಾಯಪ್ಪನ್​ ಹೇಳಿದ್ದಾರೆ. ಇದೇ ವೇಳೆ ಬಂದ ವಿನ್ಸೆಂಟ್ ತನ್ನ ನಾಯಿಯನ್ನು ನಾಯಿ ಎಂದು ಕರೆದಿದ್ದು ಏಕೆ ಎಂದು ವಾದ ಮಾಡಲು ಶುರು ಮಾಡಿದ್ದಾನೆ. ಇಷ್ಟೇ ಅಲ್ಲ, ಇದನ್ನು ನಾನು ಪ್ರೀತಿಯಿಂದ ಪೋಷಿಸುತ್ತಿದ್ದೇನೆ. ಅದಕ್ಕೆ ನಾನು ಹೆಸರು ಸಹ ಇಟ್ಟಿದ್ದೇನೆ. ಆ ಹೆಸರಿನಿಂದ ಕರೆಯುವುದು ಬಿಟ್ಟು ನಾಯಿ ಯಾಕೆ ಕರೆದೆ ಎಂದು ಹೇಳಿಕೊಂಡು ವಿನ್ಸೆಂಟ್ ಗಲಾಟೆ ಮಾಡಿದ್ದಾರೆ. ಆಗ ಜೊತೆಯಲ್ಲಿದ್ದ ಅವರ ಸಹೋದರ ಡೇನಿಯಲ್ ಕೂಡ ಜಗಳವಾಡಿದ್ದಾರೆ.

ಇದೇ ಗಲಾಟೆ ಮತ್ತು ಜಗಳ ವಿಕೋಪಕ್ಕೆ ಹೋಗಿದೆ. ಆಗ ಡೇನಿಯಲ್ ತಮ್ಮ ಬಳಿಯಿದ್ದ ಚಾಕುವಿನಿಂದ ರಾಯಪ್ಪನ್​​ ಎದೆಗೆ ಇರಿದಿದ್ದಾರೆ. ಇದರಿಂದ ರಾಯಪ್ಪನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗಾಗಿ ಡೇನಿಯಲ್ ಮತ್ತು ವಿನ್ಸೆಂಟ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಅಲ್ಲದೇ, ಕೊಲೆಗೆ ಸಹಕರಿಸಿದ ಆರೋಪದ ಮೇಲೆ ತಾಯಿ ಸವಾರಿಯಮ್ಮ ಎಂಬುವವರನ್ನೂ ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿಗೆ ಧಾರವಾಡದಲ್ಲಿ ಭಿಕ್ಷುಕಿ ಬಲಿ

ಈ ಹಿಂದೆಯೂ ಇಂತಹ ಕ್ಷುಲ್ಲಕ ಕಾರಣಕ್ಕೆ ರೈತನ ಕೊಲೆಯಾಗಿತ್ತು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಈ ಹಿಂದೆ ಕೂಡ ಇಂತಹ ಕ್ಷುಲ್ಲಕ ಕಾರಣಕ್ಕಾಗಿ ಓರ್ವ ರೈತನನ್ನು ಕೊಲೆ ಮಾಡಲಾಗಿತ್ತು. ರೈತರೊಬ್ಬರು ತಮ್ಮ ಮೇಕೆಗಳು ಕಾಣೆಯಾದ ಬಗ್ಗೆ ಅನುಮಾನಗೊಂಡು ವ್ಯಕ್ತಿಯೊಬ್ಬನ್ನು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದೇ ಗಲಾಟೆಯಲ್ಲಿ ಆರೋಪಿಯು ರೈತನಿಗೆ ಸಿಂಗಲ್ ಬ್ಯಾರೆಲ್​ ಗನ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ರೈತನ ಕೊಲೆಗೆ ಬಳಸಿದ್ದ ಗನ್​ ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಮೇಕೆಗಳ ಕದ್ದ ಶಂಕೆ ಮೇಲೆ ಜಗಳ ಮಾಡಿದ ರೈತನಿಗೆ ಗುಂಡಿಕ್ಕಿ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.