ಮಹಾರಾಷ್ಟ್ರದಿಂದ ಗುಜರಾತ್​ಗೆ ಚಿಪ್​ ಘಟಕ ಶಿಫ್ಟ್​: ರಾಜಕೀಯ ಕೆಸರೆರಚಾಟ ಶುರು

author img

By

Published : Sep 14, 2022, 7:30 PM IST

semiconductor-unit-fight-in-maharastra

ಮಹಾರಾಷ್ಟ್ರದ ಪುಣೆಯಲ್ಲಿ ರೂಪುಗೊಳ್ಳಬೇಕಿದ್ದ ದೇಶದ ಮೊದಲ ಸೆಮಿಕಂಡಕ್ಟರ್​ ಯೋಜನೆ ಗುಜರಾತ್​ಗೆ ವರ್ಗವಾಗಿದ್ದು, ಟೀಕೆಗೆ ಗುರಿಯಾಗಿದೆ. ಇದು ಶಿವಸೇನೆ ಮತ್ತು ಸರ್ಕಾರದ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಬೇಕಿದ್ದ ಸೆಮಿಕಂಡಕ್ಟರ್​ ಘಟಕ ಗುಜರಾತ್​ಗೆ ವರ್ಗವಾಗಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ವಾಣಿಜ್ಯ ನಗರಿ ಮುಂಬೈ ಜನರಲ್ಲಿ ಅಸಮಾಧಾನ ಉಂಟು ಮಾಡಿದ್ದಲ್ಲದೇ, ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದೆ.

ದೇಶದ ಮೊದಲ ಚಿಪ್​ ತಯಾರಿಕಾ ಘಟಕವನ್ನು ಗುಜರಾತ್​ನಲ್ಲಿ ಆರಂಭಿಸಲು ವೇದಾಂತ್​ ಹಾಗೂ ಫಾಕ್ಸ್​ಕಾನ್​ ಕಂಪನಿಗಳು ನಿನ್ನೆ ಒಪ್ಪಂದ ಮಾಡಿಕೊಂಡಿವೆ. ಈ ಸೆಮಿಕಂಡಕ್ಟರ್​ ಘಟಕ ಈ ಮೊದಲು ಮಹಾರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಹೂಡಿಕೆದಾರರನ್ನು ಹಿಡಿದಿಡುವಲ್ಲಿ ಸೋತ ಮಹಾ ಸರ್ಕಾರ, ಬೃಹತ್​ ಯೋಜನೆಯನ್ನು ಕಳೆದುಕೊಂಡಿದೆ.

ಉದ್ಧವ್​ ಠಾಕ್ರೆ ನೇತೃತ್ವದ ಮಹಾಅಘಾಡಿ ಸರ್ಕಾರ ಮಹಾರಾಷ್ಟ್ರದ ಪುಣೆಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗಾಗಿ ವೇದಾಂತ ಮತ್ತು ಫಾಕ್ಸ್‌ಕಾನ್ ಕಂಪನಿಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿತ್ತು. ಆದರೀಗ ಎರಡೂ ಕಂಪನಿಗಳು ಗುಜರಾತ್​ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಲ್ಲಿಯೇ ಘಟಕ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿವೆ.

ಯೋಜನೆ ಏನಾಗಿತ್ತು?: ಭಾರತದಲ್ಲಿನ ಆಟೋಮೊಬೈಲ್ ಮತ್ತು ಸ್ಮಾರ್ಟ್​ಫೋನ್​ ಉದ್ಯಮಗಳು ಅತ್ಯಾಧುನಿಕ ಚಿಪ್​ಗಳನ್ನು ಬಳಸುತ್ತವೆ. ಭಾರತದಲ್ಲಿ ಈ ಸೆಮಿಕಂಡಕ್ಟರ್‌ಗಳ ದೊಡ್ಡ ಕೊರತೆಯಿದೆ. ಆದ್ದರಿಂದ ಸೆಮಿಕಂಡಕ್ಟರ್​ಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಯೋಜನೆಯನ್ನು ರೂಪಿಸಲಾಗಿತ್ತು.

ಇದಕ್ಕಾಗಿ ಮಹಾರಾಷ್ಟ್ರದ ಪುಣೆ ಬಳಿ ಘಟಕ ಸ್ಥಾಪನೆಗೆ ಪ್ಲಾನ್​ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಅಂದಿನ ಸಿಎಂ ಉದ್ಧವ್​ ಠಾಕ್ರೆ ಸರ್ಕಾರ ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ತೈವಾನ್‌ನ ಫಾಕ್ಸ್‌ಕಾನ್ ಮತ್ತು ಭಾರತದ ವೇದಾಂತ ಕಂಪನಿಗಳೊಂದಿಗೆ ಜಂಟಿಯಾಗಿ ಮಹಾರಾಷ್ಟ್ರದಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಈಗ ಈ ಯೋಜನೆ ದಿಢೀರ್ ಆಗಿ ಗುಜರಾತ್‌ಗೆ ಶಿಫ್ಟ್​ ಆಗಿರುವುದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಶಿವಸೇನೆ ಬಂಡಾಯ ಶಾಸಕ ಏಕನಾಥ್​ ಶಿಂದೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವೀಸ್​ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವೂ ಕೂಡ ಫಾಕ್ಸ್‌ಕಾನ್ ಮತ್ತು ವೇದಾಂತ ಕಂಪನಿಗಳೊಂದಿಗೆ ಸೆಮಿಕಂಡಕ್ಟರ್ ಘಟಕ ಸ್ಥಾಪಿಸುವ ಕುರಿತಾಗಿ ಸಭೆ ನಡೆಸಿತ್ತು. ಇದರಿಂದ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಭರವಸೆ ಹೊಂದಲಾಗಿತ್ತು.

ಸೆಮಿಕಂಡಕ್ಟರ್ ಯೋಜನೆಯು ಗುಜರಾತ್‌ಗೆ ಸ್ಥಳಾಂತರಗೊಂಡ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಿದ್ದಲ್ಲದೇ, ಕೈಗಾರಿಕಾ ಯೋಜನೆಗಳು ಮತ್ತು ಹೂಡಿಕೆಗಳಿಗೆ ಸಹಕಾರ ಕೋರಿದ್ದಾರೆ.

ಮಹಾ ಸರ್ಕಾರದ ವಿರುದ್ಧ ಠಾಕ್ರೆ ಟೀಕೆ: ಮಹಾ ವಿಕಾಸ್ ಅಘಾಡಿ ಸರ್ಕಾರ ಈ ಯೋಜನೆಯನ್ನು ಬಹುತೇಕ ಅಂತಿಮಗೊಳಿಸಿತ್ತು. ಈಗಿನ ಸರ್ಕಾರ ಸಂಭಾವ್ಯ ಹೂಡಿಕೆದಾರರ ವಿಶ್ವಾಸವನ್ನು ಕಳೆದುಕೊಂಡಿದೆ. ಇದರಿಂದ ಯೋಜನೆ ಗುಜರಾತ್​ ಪಾಲಾಗಿದೆ ಎಂದು ಬಿಜೆಪಿ, ಬಂಡಾಯ ಶಿವಸೇನೆ ನೇತೃತ್ವದ ಸರ್ಕಾರವನ್ನು ಮಾಜಿ ಸಚಿವ ಆದಿತ್ಯ ಠಾಕ್ರೆ ಟೀಕಿಸಿದ್ದಾರೆ.

ಸೆಮಿಕಂಡಕ್ಟರ್​ ಮಾದರಿಯ ದೊಡ್ಡ ಯೋಜನೆಯನ್ನು ಮಹಾರಾಷ್ಟ್ರಕ್ಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ರಾಜ್ಯ ಕೈಗಾರಿಕಾ ಸಚಿವ ಉದಯ್ ಸಾಮಂತ್ ಮಾಧ್ಯಮಗಳಿಗೆ ತಿಳಿಸಿದರು.

ಓದಿ: ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮುಂದಾದ ವೇದಾಂತ, ಫಾಕ್ಸ್​ಕಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.