ಉದ್ಧವ್ ಠಾಕ್ರೆಗೆ ರೆಬೆಲ್ಸ್ ಸೆಡ್ಡು: ಹೊಸ ಶಿವಸೇನಾ ನಾಯಕತ್ವ ಹುಟ್ಟುಹಾಕಿದ ಬಂಡಾಯ ಶಾಸಕರು
Updated on: Jun 23, 2022, 8:44 PM IST

ಉದ್ಧವ್ ಠಾಕ್ರೆಗೆ ರೆಬೆಲ್ಸ್ ಸೆಡ್ಡು: ಹೊಸ ಶಿವಸೇನಾ ನಾಯಕತ್ವ ಹುಟ್ಟುಹಾಕಿದ ಬಂಡಾಯ ಶಾಸಕರು
Updated on: Jun 23, 2022, 8:44 PM IST
ಏಕನಾಥ ಶಿಂದೆ ತಮ್ಮ ನಾಯಕ ಎಂದು ಬಂಡಾಯ ಶಾಸಕರು ಅವಿರೋಧವಾಗಿ ಆಯ್ಕೆ ಮಾಡಿ ಉದ್ಧವ್ ಠಾಕ್ರೆ ಅವರಿಗೆ ಪರ್ಯಾಯ ನಾಯಕತ್ವವನ್ನು ಸೃಷ್ಟಿಸಿದ್ದಾರೆ.
ಮುಂಬೈ/ಗುವಾಹಟಿ: ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದ ಶಿವಸೇನೆ ಶಾಸಕರು ಪ್ರತ್ಯೇಕ ನಾಯಕತ್ವವನ್ನು ಹುಟ್ಟು ಹಾಕಿದ್ದಾರೆ. ಪ್ರಬಲ ನಾಯಕ ಎಂದೇ ಕರೆಯಲಾಗುವ ಏಕನಾಥ ಶಿಂದೆ 'ನಮ್ಮ ನಾಯಕ' ಎಂದು ರೆಬೆಲ್ ಶಾಸಕರು ಘೋಷಿಸಿದ್ದಾರೆ.
ಶಿವಸೇನೆ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಸುಮಾರು 30 ಶಾಸಕರು ಬಿಜೆಪಿ ಆಡಳಿತವಿರುವ ಅಸ್ಸೋಂದಲ್ಲಿ ಬೀಡುಬಿಟ್ಟಿದ್ದಾರೆ. ಈ ಮೊದಲು ಗುಜರಾತ್ನಲ್ಲಿ ಮೊಕ್ಕಾಂ ಹೂಡಿದ್ದ ಶಿವಸೈನಿಕರು ನಂತರ ಅಸ್ಸೋಂಗೆ ತಮ್ಮ ವಸತಿ ಬದಲಿಸಿದ್ದಾರೆ. ಇಂದು ಏಕನಾಥ ಶಿಂದೆ ತಮ್ಮ ನಾಯಕ ಎಂದು ಅವಿರೋಧವಾಗಿ ಆಯ್ಕೆ ಮಾಡಿ, ಉದ್ಧವ್ ಠಾಕ್ರೆಗೆ ಪರ್ಯಾಯ ನಾಯಕತ್ವವನ್ನು ಸೃಷ್ಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಏಕನಾಥ ಶಿಂದೆ, ಆ ರಾಷ್ಟ್ರೀಯ ಪಕ್ಷದವರು (ಬಿಜೆಪಿಯವರು) ನಾನು ತೆಗೆದುಕೊಂಡಿರುವ ನಿರ್ಧಾರ ಐತಿಹಾಸಿಕ ಎಂದು ಹೇಳಿದ್ದಾರೆ. ನನಗೆ ಅಗತ್ಯವಿರುವಾಗ ಅವರು ಹಾಜರಾಗುತ್ತಾರೆ ಎಂದು ಹೇಳಿದ್ದಾರೆ.
ಮುಂಬೈಗೆ ಮರಳಿದರೆ ಪರಿಸ್ಥಿತಿ ಬದಲು: ಮೈತ್ರಿ ಸರ್ಕಾರದಿಂದ ಹೊರಬರಲು ಸಿದ್ಧ ಎಂಬ ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿಕೆ ಬೆನ್ನಲ್ಲೆ ಪಾಲುದಾರ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದಾರೆ. ಪಕ್ಷದ ಸಭೆ ನಂತರ ಮಾತನಾಡಿದ ಎನ್ಸಿಪಿ ವರಿಷ್ಠ ಶರದ್ ಪವಾರ್, ಈಗಲೂ ಮಹಾವಿಕಾಸ್ ಆಘಾಡಿ ಮೈತ್ರಿಕೂಟ ಸಿಎಂ ಉದ್ಧವ್ ಠಾಕ್ರೆ ಬೆಂಬಲಕ್ಕಿದೆ. ಉದ್ಧವ್ ಅವರ ನೇತೃತ್ವದ ಸರ್ಕಾರವು ಅಲ್ಪಮತಕ್ಕೆ ಕುಸಿದಿದೆಯೇ ಎಂಬುದನ್ನು ಸಾಬೀತುಪಡಿಸುವ ಮಾರ್ಗವೆಂದರೆ ವಿಧಾನಸಭೆ. ಅಲ್ಲಿಯೇ ಯಾರಿಗೆ ಬಹುಮತ ಇದೆ ಎಂದು ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೋಸ್ಕರ ಮಹಾರಾಷ್ಟ್ರ ಸರ್ಕಾರದ ಅಸ್ಥಿರ ಯತ್ನ: ಖರ್ಗೆ
ಅಲ್ಲದೇ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರು ವಿಧಾನಸೌಧಕ್ಕೆ ಹಾಜರಾಗಬೇಕು. ಒಂದೊಮ್ಮೆ ಶಾಸಕರು ಮುಂಬೈಗೆ ಮರಳಿದರೆ ಪರಿಸ್ಥಿತಿಯೇ ಬದಲಾಗಿದೆ ಎಂದಿರುವ ಶರದ್ ಪವಾರ್, ಶಿವಸೇನೆ ಶಾಸಕರನ್ನು ಗುಜರಾತ್, ಅಸ್ಸೋಂಗೆ ಯಾರು ಕರೆದುಕೊಂಡು ಹೋಗಿದ್ದಾರೆ ಎಂಬುವುದೂ ಎಲ್ಲರಿಗೂ ಗೊತ್ತಿದೆ. ಶಾಸಕರಿಗೆ ಯಾರೆಲ್ಲ ನೆರವು ನೀಡುತ್ತಿದ್ದಾರೆ ಎಂದು ಅವರ ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. ಅಸ್ಸೋಂ ಸರ್ಕಾರ ಬಂಡಾಯ ಶಾಸಕರಿಗೆ ಸಹಾಯ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಮಹಾರಾಷ್ಟ್ರ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳಿಸಿ, ಆತಿಥ್ಯ ನೀಡುತ್ತೇವೆ: ಸಿಎಂ ಮಮತಾ
ಇದೇ ವೇಳೆ ಎನ್ಸಿಪಿ ಮುಖಂಡ, ಡಿಸಿಎಂ ಅಜಿತ್ ಪವಾರ್ ಮಾತನಾಡಿ, ಮೈತ್ರಿ ಸರ್ಕಾರದಿಂದ ಹೊರ ಬರಲು ಶಿವಸೇನೆ ಸಿದ್ಧ ಎಂದು ಸಂಜಯ್ ರಾವತ್ ಯಾಕೆ ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ನಾನು ಸಿಎಂಗೆ ಕರೆ ಮಾಡಿ ಕೇಳುತ್ತೇನೆ. ಶಿವಸೇನೆಯ ಬಂಡಾಯ ಶಾಸಕರನ್ನು ವಾಪಸ್ ಕರೆತರಲು ರಾವತ್ ಈ ಹೇಳಿಕೆ ನೀಡಿದ್ದಾರೆಯೇ ಎಂಬ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್: ದಿಢೀರ್ ಸಭೆ ಕರೆದ ಕಾಂಗ್ರೆಸ್-ಎನ್ಸಿಪಿ
