ಸಿಎಂ ಗೆಹ್ಲೋಟ್ ಒಬ್ಬ 'ಜಾದೂಗಾರ', ಕೆಂಪು ಡೈರಿಯಲ್ಲಿ ಸರ್ಕಾರದ ಕರ್ಮಕಾಂಡ: ಪ್ರಧಾನಿ ಮೋದಿ ಆರೋಪ

ಸಿಎಂ ಗೆಹ್ಲೋಟ್ ಒಬ್ಬ 'ಜಾದೂಗಾರ', ಕೆಂಪು ಡೈರಿಯಲ್ಲಿ ಸರ್ಕಾರದ ಕರ್ಮಕಾಂಡ: ಪ್ರಧಾನಿ ಮೋದಿ ಆರೋಪ
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಇನ್ನೆರಡು ದಿನ ಬಾಕಿ ಇದ್ದು, ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆದಿಯಾಗಿ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ.
ಜೈಪುರ (ರಾಜಸ್ಥಾನ) : ರಾಜಸ್ಥಾನದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತವು ಭೂಮಿ, ಅರಣ್ಯ, ನೀರನ್ನು ಮಾರಾಟ ಮಾಡಿದೆ. ಇದರ ಎಲ್ಲ ಕರ್ಮಕಾಂಡಗಳು ಅವರ ಪಕ್ಷದವರೇ ಬಿಡುಗಡೆ ಮಾಡಿರುವ ಕೆಂಪು ಡೈರಿಯಲ್ಲಿ ನಮೂದಿಸಲಾಗಿದೆ. ಇದರಿಂದ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಮಣ್ಣುಪಾಲಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಜಾದೂಗಾರ ಎಂದು ಕರೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಲು ಸಾಲು ಆರೋಪಗಳನ್ನು ಮಾಡಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಬರಾನ್‌ನಲ್ಲಿ ಮಂಗಳವಾರ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಲಭೆಕೋರರು ಮತ್ತು ಕ್ರಿಮಿನಲ್‌ಗಳು ರಾಜ್ಯವನ್ನು ಆಳುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರನ್ನು ಲೂಟಿ ಮಾಡಿದೆ. ನವೆಂಬರ್ 23 ರಂದು ನಡೆಯುವ ಮತದಾನದಲ್ಲಿ ರಾಜ್ಯದ ಜನರು ಕಾಂಗ್ರೆಸ್ ದುರಾಡಳಿತಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಹಿಂದೂಗಳ ಮೇಲೆ ದಾಳಿ: ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹಬ್ಬಗಳ ವೇಳೆ ಗಲಭೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಹಲವು ಹಿಂದೂಗಳು ಬಲಿಯಾಗುತ್ತಿದ್ದಾರೆ. ಇದು ಕಳವಳಕಾರಿ ಸಂಗತಿ. ಕಾಂಗ್ರೆಸ್ ನಾಯಕರು ಸಾರ್ವಜನಿಕರ ಹಿತದ ಬಗ್ಗೆ ತಲೆಕೆಡಿಸಿಕೊಳ್ಳದೇ ಭ್ರಷ್ಟಾಚಾರ ನಡೆಸಿ ಅವರ ಮತ್ತು ಜೇಬು ತುಂಬಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಗಲಭೆಕೋರರು, ಅಪರಾಧಿಗಳಿಗೆ ಕೆಂಪು ಹಾಸಿನ ಸ್ವಾಗತ ಇರುತ್ತದೆ ಎಂದು ದೂರಿದರು.
ರಾಜಸ್ಥಾನದ ಮತದಾರರು ಕಾಂಗ್ರೆಸ್ನ ಕೆಟ್ಟ ಆಡಳಿತಕ್ಕೆ ವಿದಾಯ ಹೇಳುವ ನಿರ್ಧಾರ ಮಾಡಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಜನತೆ ವಿದಾಯ ಹೇಳಲಿದ್ದಾರೆ. ದೇಶ ವಿರೋಧಿ ಅಂಶಗಳಿಂದಲೇ ಇಲ್ಲಿನ ಸರ್ಕಾರ ಕುಖ್ಯಾತಿಯಾಗಿತ್ತು. ಜನರಲ್ಲಿ ಭಯ ಮತ್ತು ದ್ವೇಷವನ್ನೇ ಬಿತ್ತಿತ್ತು ಎಂದು ಪ್ರಧಾನಿ ಮೋದಿ ಕಟುವಾಗಿ ಟೀಕಿಸಿದರು.
ಏನಿದು ಕೆಂಪು ಡೈರಿ ಕರಾಮತ್ತು?: ಮಣಿಪುರ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಟೀಕೆಗೆ ಪ್ರತಿಯಾಗಿ ರಾಜಸ್ಥಾನದಲ್ಲಿಯೇ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ ಎಂದು ಮಾಜಿ ಸಚಿವ ರಾಜೇಂದ್ರ ಸಿಂಗ್ ಗೂಢಾ ಟೀಕಿಸಿದ್ದರು. ಇದು ದೊಡ್ಡ ವಿವಾದ ಉಂಟು ಮಾಡಿ ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ಬಳಿಕ ಗೂಢಾರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಇದಾದ ಬಳಿಕ ಅವರು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಮತ್ತು ಸರ್ಕಾರ ನಡೆಸಿದೆ ಎನ್ನಲಾದ ಭ್ರಷ್ಟಾಚಾರಗಳ ಬಗ್ಗೆ ಕೆಂಪು ಡೈರಿ ಆರೋಪ ಮಾಡಿದ್ದರು.
