ಮಾಸ್ಕೋ-ಗೋವಾ ವಿಮಾನಕ್ಕೆ ಬಂದಿದ್ದು ಹುಸಿ ಬಾಂಬ್​ ಬೆದರಿಕೆ; ಪರಿಶೀಲನೆ ಬಳಿಕ ಹಾರಾಟ

author img

By

Published : Jan 10, 2023, 10:25 AM IST

Updated : Jan 10, 2023, 10:58 AM IST

Moscow Goa flight

ಬಾಂಬ್​ ಬೆದರಿಕೆ ಹಿನ್ನೆಲೆಯಲ್ಲಿ ಮಾಸ್ಕೋ-ಗೋವಾ ಚಾರ್ಟರ್ಡ್‌ ವಿಮಾನವೊಂದು ನಿನ್ನೆ ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದೀಗ ಪ್ರಕರಣ ತನಿಖೆ ನಡೆದಿದ್ದು ಅನುಮಾನಾಸ್ಪದವಾಗಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಜಾಮ್​ನಗರ(ಗುಜರಾತ್​): ಬಾಂಬ್​ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಾಸ್ಕೋ-ಗೋವಾ ಅಂತಾರಾಷ್ಟ್ರೀಯ ವಿಮಾನವನ್ನು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ವಿಮಾನವು ಗುಜರಾತ್‌ನ ಜಾಮ್​ನಗರದಿಂದ ಗೋವಾಕ್ಕೆ ಬೆಳಗ್ಗೆ 10.30 ರಿಂದ 11 ಗಂಟೆಯೊಳಗೆ ತೆರಳಲಿದೆ ಎಂದು ಜಾಮ್​ನಗರ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನವು ಮೆಕ್ಸಿಕೋದಿಂದ ಗೋವಾಕ್ಕೆ ತೆರಳುತ್ತಿತ್ತು. ಬಾಂಬ್ ಸ್ಫೋಟದ ಸಾಧ್ಯತೆಯ ಭೀತಿಯಿಂದ ಸೋಮವಾರ ರಾತ್ರಿ ವಿಮಾನವನ್ನು ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿತ್ತು. ಆ ಬಳಿಕ ಸಂಪೂರ್ಣವಾಗಿ ತಪಾಸಣೆ ನಡೆಸಲಾಗಿದೆ. ಅನುಮಾನಾಸ್ಪದವಾಗಿ ಯಾವುದೇ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಾಂಬ್ ಆತಂಕ: ಮಾಸ್ಕೋ - ಗೋವಾ ಅಂತಾರಾಷ್ಟ್ರೀಯ ವಿಮಾನ ತುರ್ತು ಲ್ಯಾಂಡಿಂಗ್​

ಬಾಂಬ್​ ಬೆದರಿಕೆ: ಗೋವಾ ಎಟಿಸಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಸ್ಕೋ - ಗೋವಾ ಅಂತಾರಾಷ್ಟ್ರೀಯ ವಿಮಾನವನ್ನು ಸೋಮವಾರ ರಾತ್ರಿ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿತ್ತು. ಬಾಂಬ್ ಸ್ಕ್ವಾಡ್, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿ, ಜಾಮ್‌ನಗರ ವಿಮಾನ ನಿಲ್ದಾಣವನ್ನು ಎಲ್ಲ ದಿಕ್ಕುಗಳಿಂದಲೂ ಬಂದ್​ ಮಾಡಿ ಪರಿಶೀಲನೆ ನಡೆಸಿದ್ದರು. ಫ್ಲೈಟ್‌ನಲ್ಲಿ ಒಟ್ಟು 236 ಪ್ರಯಾಣಿಕರು ಮತ್ತು 8 ಸಿಬ್ಬಂದಿಗಳಿದ್ದರು. ಎಲ್ಲರನ್ನೂ ರಾತ್ರಿ 9.49ರ ಸುಮಾರಿಗೆ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿ, ತಪಾಸಣೆ ಮಾಡಲಾಗಿತ್ತು. ಬಳಿಕ ಅವರನ್ನು ಟರ್ಮಿನಲ್​ ಕಟ್ಟಡದೊಳಗಿನ ವಿಶ್ರಾಂತಿ ಕೊಠಡಿಗೆ ಕರೆದೊಯ್ಯಲಾಗಿತ್ತು.

Last Updated :Jan 10, 2023, 10:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.