ಕೇಂದ್ರದಿಂದ ಹೊಸ ಡ್ರೋನ್ ನಿಯಮ: ನೋಂದಣಿಗೆ ಭದ್ರತಾ ಅನುಮತಿ ಅಗತ್ಯವಿಲ್ಲ

author img

By

Published : Aug 26, 2021, 2:09 PM IST

New Drone Policy announced

ದೇಶದಲ್ಲಿ ಡ್ರೋನ್‌ ಬಳಕೆಗೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಹೊರಡಿಸಿದ್ದು, ಈ ಮೊದಲಿದ್ದ ಕೆಲ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.

ನವದೆಹಲಿ: ಡ್ರೋನ್ ನಿಯಮ-2021ರ ಅಡಿಯಲ್ಲಿ ದೇಶದಲ್ಲಿ ಡ್ರೋನ್‌ ಬಳಕೆಗೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಹೊರಡಿಸಿದ್ದು, ಈ ಮೊದಲಿದ್ದ ಕೆಲ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಇದರಂತೆ, ಡ್ರೋನ್‌ಗಳ ಕಾರ್ಯಾಚರಣೆಗೆ ನೋಂದಣಿ ಮಾಡಿಕೊಳ್ಳಲು ಅಥವಾ ಪರವಾನಗಿ ಪಡೆಯಲು ಇನ್ಮುಂದೆ ಯಾವುದೇ ಭದ್ರತಾ ಅನುಮತಿ ಪತ್ರದ ಅಗತ್ಯವಿಲ್ಲ. ಡ್ರೋನ್‌ಗಳನ್ನು ನಿರ್ವಹಿಸಲು ಕಟ್ಟಬೇಕಿದ್ದ ಅನುಮತಿಗಳ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದೆ.

ಕಳೆದ ಜುಲೈ 16ರಂದು ನಾಗರಿಕ ವಿಮಾನಯಾನ ಸಚಿವಾಲಯವು ಡ್ರೋನ್ ಕರಡು ನಿಯಮ-2021ಅನ್ನು ಬಿಡುಗಡೆ ಮಾಡಿತ್ತು. ಇದನ್ನು ಡ್ರೋನ್ ಫೆಡರೇಶನ್ ಆಫ್​ ಇಂಡಿಯಾ ಕೂಡ ಸ್ವಾಗತಿಸಿದ್ದು, ಇದೀಗ ಈ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರಧಾನಿ ಸ್ವಾಗತ

  • The new Drone Rules will tremendously help start-ups and our youth working in this sector. It will open up new possibilities for innovation & business. It will help leverage India’s strengths in innovation, technology & engineering to make India a drone hub.

    — Narendra Modi (@narendramodi) August 26, 2021 " class="align-text-top noRightClick twitterSection" data=" ">

ಹೊಸ ಡ್ರೋನ್ ನಿಯಮಗಳು ಭಾರತದಲ್ಲಿ 'ಸ್ಟಾರ್ಟ್ ಅಪ್' ವಲಯದ ಮಹತ್ವದ ಕ್ಷಣಕ್ಕೆ ನಾಂದಿ ಹಾಡುತ್ತವೆ. ಸ್ಟಾರ್ಟ್ ಅಪ್ ವಲಯದಲ್ಲಿ ಕೆಲಸ ಮಾಡುವ ಯುವಕರಿಗೆ ಸಹಕಾರಿಯಾಗಲಿದೆ. ಇದು ನಾವೀನ್ಯತೆ ಮತ್ತು ವ್ಯಾಪಾರಕ್ಕಾಗಿ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ. ಆವಿಷ್ಕಾರ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸಲು ನಮ್ಮ ದೇಶವನ್ನು 'ಡ್ರೋನ್ ಹಬ್' ಆಗಿ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಹೊಸ ಹೊಸ ಡ್ರೋನ್ ನಿಯಮಗಳನ್ನು ಸ್ವಾಗತಿಸಿದ್ದಾರೆ.

ಹೊಸ ಡ್ರೋನ್ ನಿಯಮಗಳು ಹಾಗೂ ರದ್ದುಗೊಂಡ ನಿಯಮಗಳು ಇಲ್ಲಿವೆ..

1. ಸರಕು ವಿತರಣೆಗಾಗಿ ಡ್ರೋನ್ ಕಾರಿಡಾರ್‌ಗಳ ಅಭಿವೃದ್ಧಿಪಡಿಸಲಾಗುವುದು. ಹೀಗಾಗಿ ಡ್ರೋನ್​ಗಳ ತೂಕವನ್ನು 300 ರಿಂದ 500 ಕೆ.ಜಿಗೆ ಏರಿಕೆ ಮಾಡಲಾಗಿದೆ.

2. ಡ್ರೋನ್ ನಿಯಮ ಉಲ್ಲಂಘನೆಗಿದ್ದ ಗರಿಷ್ಠ ದಂಡವನ್ನು ಒಂದು ಲಕ್ಷ ರೂಪಾಯಿಗೆ ಇಳಿಸಲಾಗಿದೆ.

3. ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಹಸಿರು, ಹಳದಿ ಮತ್ತು ಕೆಂಪು ವಲಯಗಳ ವಾಯುಪ್ರದೇಶದ ನಕ್ಷೆಯನ್ನು ಪ್ರದರ್ಶಿಸಲಾಗುತ್ತದೆ. ಈ ಮೊದಲು ವಿಮಾನ ನಿಲ್ದಾಣದ ಪರಿಧಿಯಿಂದ 45 ಕಿ.ಮೀ ವರೆಗಿನ ಪ್ರದೇಶವನ್ನು 'ಹಳದಿ ವಲಯ' ಎಂದು ಹೇಳಲಾಗಿತ್ತು. ಆದರೆ ಈಗ ಈ ಅಂತರವನ್ನು 45 ಕಿ.ಮೀ ನಿಂದ 12 ಕಿ.ಮೀಗೆ ಇಳಿಸಲಾಗಿದೆ. ವಿಮಾನ ನಿಲ್ದಾಣದ ಪರಿಧಿಯಿಂದ 8 ರಿಂದ 12 ಕಿಮೀ ನಡುವಿನ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಲು ಯಾವುದೇ ಅನುಮತಿಯ ಅಗತ್ಯವಿಲ್ಲ.

4. ಎಲ್ಲಾ ಡ್ರೋನ್‌ಗಳ ಆನ್‌ಲೈನ್ ನೋಂದಣಿ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಮೂಲಕ ನಡೆಯುತ್ತದೆ. ಡ್ರೋನ್‌ಗಳ ವರ್ಗಾವಣೆ ಮತ್ತು ನೋಂದಣಿ ರದ್ದುಗೊಳಿಸಲು ಸುಲಭ ಪ್ರಕ್ರಿಯೆಯನ್ನು ಸೂಚಿಸಲಾಗಿದೆ.

5. ದೇಶದಲ್ಲಿ ಈಗಿರುವ ಡ್ರೋನ್‌ಗಳನ್ನು ಕ್ರಮಬದ್ದಗೊಳಿಸಲು ಪ್ರಕ್ರಿಯೆಗಳನ್ನು ಸುಲಭಗೊಳಿಸಲಾಗಿದೆ.

6. ಈ ಹಿಂದೆ ಡ್ರೋನ್‌ಗಳ ಕಾರ್ಯಾಚರಣೆಗೆ ನೋಂದಣಿ ಮಾಡಿಕೊಳ್ಳಲು ಅಥವಾ ಪರವಾನಗಿ ಪಡೆಯಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ವಿಶೇಷ ದೃಢೀಕರಣ ಸಂಖ್ಯೆ, ಪ್ರೋಟೋಟೈಪ್​ ಗುರುತಿನ ಸಂಖ್ಯೆ, ಅನುಸರಣೆ ಪ್ರಮಾಣಪತ್ರ, ನಿರ್ವಹಣಾ ಪ್ರಮಾಣಪತ್ರ, ಆಪರೇಟರ್ ಅನುಮತಿ, ರಿಮೋಟ್ ಪೈಲಟ್ ಬೋಧಕರ ದೃಢೀಕರಣ ಪತ್ರವನ್ನು ಪಡೆಯಬೇಕಿತ್ತು. ಆದರೆ ಈ ನಿಯಮಗಳನ್ನು ಕೇಂದ್ರ ಸರ್ಕಾರವೀಗ ರದ್ದುಗೊಳಿಸಿದೆ.

7. ನ್ಯಾನೋ ಡ್ರೋನ್‌ಗಳು ಮತ್ತು ಮೈಕ್ರೋ ಡ್ರೋನ್‌ಗಳ ವಾಣಿಜ್ಯೇತರ ಬಳಕೆಗೆ ಪೈಲಟ್ ಪರವಾನಗಿ ಅಗತ್ಯವಿಲ್ಲ.

8. ನೋ ಪರ್ಮಿಷನ್​ - ನೋ ಟೇಕ್​ ಆಫ್​ (NPNT), ರಿಯಲ್​ ಟೈಮ್​ ಟ್ರ್ಯಾಕಿಂಗ್ ಬೀಕಾನ್, ಜಿಯೋ-ಫೆನ್ಸಿಂಗ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಮುಂದಿನ ದಿನಗಳಲ್ಲಿ ಸೂಚಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

9. ಎಲ್ಲಾ ಡ್ರೋನ್ ತರಬೇತಿ ಮತ್ತು ಪರೀಕ್ಷೆಗಳನ್ನು ಅಧಿಕೃತ ಡ್ರೋನ್ ಶಾಲೆಯಿಂದ ನಡೆಸಲಾಗುವುದು.

10. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತರಬೇತಿ ನಿಯಮಗಳನ್ನು ಸೂಚಿಸಲಿದೆ. ಡ್ರೋನ್ ಶಾಲೆಗಳಿಗೆ ಆನ್‌ಲೈನ್‌ನಲ್ಲಿ ಪೈಲಟ್ ಪರವಾನಗಿಗಳನ್ನು ಒದಗಿಸಲಿದೆ

11. ಡ್ರೋನ್‌ಗಳ ಆಮದನ್ನು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ನಿಯಂತ್ರಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.